ಮುಖ್ಯ ಸುದ್ದಿ
ನಾಯಕನಹಟ್ಟಿಯಲ್ಲಿ ಪೀಪಿ ಊದಿದರೆ ಹುಷಾರ್ | ನಿಮ್ಮ ನಡುವೆಯೇ ಇರ್ತಾರೆ ಪೊಲೀಸ್
CHITRADURGA NEWS | 26 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಪೀಪಿ ಊದಿದರೆ ಹುಷಾರ್ !. ಇಂತಹ ಒಂದು ಸಂದೇಶವನ್ನು ಆದೇಶದ ಮೂಲಕ ರವಾನಿಸಿದೆ ತಾಲ್ಲೂಕು ಆಡಳಿತ.
ಜಾತ್ರೆಗೆ ಬರುವ ಮಹಿಳೆಯರು, ಮಕ್ಕಳ, ಯುವತಿರನ್ನು ಬೆಚ್ಚಿ ಬೀಳಿಸುವಂತ ಕರ್ಕಶ ಶಬ್ದಗಳನ್ನು ಹೊರಡಿಸುವ ಪೀಪಿಗಳ ಹಾವಾಳಿ ಹೆಚ್ಚಾಗಿತ್ತು. ಜತೆಗೆ ಡ್ರಂ ಟ್ರ್ಯಾರ್ಷಗಳು, ಕೊಳಲು ಸೇರಿದಂತೆ ಅಪಾರ ಶಬ್ದ ಹೊರಡಿಸುವ ಆಟಿಕೆಗಳನ್ನು ನಿಷೇಧಿಸಬೇಕು ಎಂದು ಹಲವು ಬಾರಿ ಸಾರ್ವಜನಿಕರು ವಿವಿಧ ಸಭೆಗಳಲ್ಲಿ ಮೌಖಿಕವಾಗಿ ದೂರು ಸಲ್ಲಿಸಿದರು. ಇದನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಾಯಕನಹಟ್ಟಿ ಜಾತ್ರೆಯಲ್ಲಿ ಇಂತಹ ಆಟಿಕೆಗಳನ್ನು ನಿಷೇಧಿಸಿ ಚಳ್ಳಕೆರೆ ತಹಶೀಲ್ದಾರ್ ರೆಹಾನ್‌ಪಾಷಾ ಆದೇಶ ಹೊರಡಿಸಿದ್ದಾರೆ.
ಈ ಆದೇಶದಿಂದ ಜಾತ್ರೆಯಲ್ಲಿ ಅಂಗಡಿಮುಂಗಟ್ಟುಗಳ ಮಾಲಿಕರು, ಸಾರ್ವಜನಿಕರು, ಪೊಲೀಸರ ಮಧ್ಯೆ ಅನಾವಶ್ಯಕ ವಾಗ್ವಾದಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಯಾರೋ ಕೆಲ ಕಿಡಿಗೇಡಿಗಳು ಜಾತ್ರೆಯಲ್ಲಿ ಪೀಪಿ ಊದುವ ಮೂಲಕ ಹೆಂಗಳೆಯರಿಗೆ ತೊಂದರೆ ಉಂಟುಮಾಡಿದ್ದಾರೆ. ಇಂತಹ ಕೃತ್ಯವನ್ನು ಜಾತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರೇ ತಡೆಗಟ್ಟಬಹುದು. ಆದರೆ ಆಟಿಕೆಗಳಿಗೆ ನಿಷೇಧ ಹೇರುವುದು ಸರಿಯಲ್ಲ ಎಂದು ಚಳ್ಳಕೆರೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ತಹಶೀಲ್ದಾರ್ ಅವರು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಈ ಆದೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರವಿರೋಧ ಚರ್ಚೆ ಆರಂಭವಾಗಿವೆ. ಜಾತ್ರೆಯ ಕಳೆ ತುಂಬುವುದೇ ಅಂಗಡಿ ಮುಂಗಟ್ಟುಗಳು. ಇಲ್ಲಿ ಎಲ್ಲ ರೀತಿ ಆಟಿಕೆಗಳನ್ನು ಮಾರಾಟ ಮಾಡುತ್ತಾ ಬಂದಿದ್ದು, ಇದುವರೆಗೂ ಯಾವುದೇ ಅಡಚಣೆ ಉಂಟಾಗಿಲ್ಲ. ಜಾತ್ರೆಯೆಂದರೆ ಶಿಳ್ಳೆ, ಕೇಕೆ, ವಿವಿಧ ವಾದ್ಯಗಳ ಶಬ್ದ, ಹಾಡು, ಕುಣಿತ, ಸಂಭ್ರಮ ಸಹಜ. ಇದೆಲ್ಲಕ್ಕೂ ಅಡ್ಡಿಪಡಿಸುವ ಷಡ್ಯಂತ್ರದಂತೆ ಈ ಆದೇಶ ಗೋಚರಿಸುತ್ತಿದೆ.