Connect with us

ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆಗೆ ಚಾಲನೆ | ತಾಲೂಕು ಕೇಂದ್ರಗಳಲ್ಲಿ ಅದ್ದೂರಿ ಸ್ವಾಗತ

ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆಗೆ ಚಾಲನೆ

ಮುಖ್ಯ ಸುದ್ದಿ

ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆಗೆ ಚಾಲನೆ | ತಾಲೂಕು ಕೇಂದ್ರಗಳಲ್ಲಿ ಅದ್ದೂರಿ ಸ್ವಾಗತ

ಚಿತ್ರದುರ್ಗ ನ್ಯೂಸ್.ಕಾಂ: ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ಶ್ರೀರಾಮ ಭಾವಚಿತ್ರ ಹಾಗೂ ಆಹ್ವಾನ ಪತ್ರಿಕೆಯ ವಿತರಣೆಗೆ ಬುಧವಾರ ಚಾಲನೆ ನೀಡಲಾಯಿತು.

ನಗರದ ಡಿಸಿಸಿ ಬ್ಯಾಂಕ್ ಎದುರಿನ ಶ್ರೀರಾಮ ಮಂದಿರದ ಆವರಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಕೇಂದ್ರಗಳಿಂದ ಬಂದಿದ್ದ ಕಾರ್ಯಕರ್ತರಿಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.

ಇದೇ ವೇಳೆ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗೆ ಬಂದ ಮಂತ್ರಾಕ್ಷತೆಯನ್ನು ಮಂಗಳವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡುತ್ತಾ, ನಾವು ಧರ್ಮ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎನ್ನುವುದಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರವೇ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಅನೇಕ ತೊಂದರೆಗಳು ಬಂದರೂ ಶ್ರೀರಾಮ ಭಕ್ತರು ಯಾವುದನ್ನೂ ಲೆಕ್ಕಿಸದೇ ಮಂದಿರ ನಿರ್ಮಾಣದ ಸಂಕಲ್ಪವನ್ನು ಈಡೇರಿಸಿದ್ದಾರೆ. ಅಯೋಧ್ಯೆ ಹಿಂದುಗಳಿಗೆ ಭಕ್ತಿಯ ಕೇಂದ್ರವಾಗಿದೆ. ಹಲವು ವರ್ಷಗಳ ಹೋರಾಟದ ಫಲವಾಗಿ ಜನವರಿಯಲ್ಲಿ ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ ಎಂದು ಹೇಳಿದರು.

1992ರಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಅಯೋಧ್ಯೆ ಹಿಂದುಗಳ ಶಕ್ತಿ ಕೇಂದ್ರವಾಗಿ ರೂಪುಗೊಂಡಿದೆ. ಸಂಘಟನೆಯ ಕೇಂದ್ರವಾಗಿದೆ.

ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲ ಹೋರಾಟಗಾರರಿಗೂ ಇದು ಜೀವನದ ಸಾರ್ಥಕ ಕ್ಷಣವಾಗಿದೆ. ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ ಎಂದರು.

ಇದನ್ನೂ ಓದಿ: ಕೋಟೆನಾಡಿನ ಮನೆ ಮನೆಗೆ ತಲುಪಲಿದೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ

ಮೇದಾರ ಗುರುಪೀಠದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಮಾತನಾಡಿ, 2024 ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದಲ್ಲಿ ಬಾಲ ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಒಂದು ಐತಿಹಾಸಿಕ ದಿನವಾಗಲಿದೆ. ಇದರಿಂದ ಶ್ರೀರಾಮನಿಗೂ ಸಂತೋಷವಾಗಲಿದೆ. ಈ ಸುಸಂದರ್ಭದಲ್ಲಿ ಶ್ರೀರಾಮನ ಚರಿತೆಯನ್ನು ಎಲ್ಲರು ಮತ್ತೊಮ್ಮೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಪ್ರತಿಯೊಬ್ಬರ ಮನೆಯನ್ನು ತಲುಪಬೇಕು. ಇದೊಂದು ಸಂತಸದ ಕ್ಷಣ. ಇದರಿಂದ ಎಲ್ಲರಿಗೂ ತೃಪ್ತಿ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆಗೆ ಚಾಲನೆ

ಬಜರಂಗದಳ ಪ್ರಾಂತ ಸಹ ಸಂಯೋಜಕ ಎಸ್.ಆರ್.ಪ್ರಭಂಜನ್ ಮಾತನಾಡಿ, ರಾಮಾಯಣದಲ್ಲಿ ಸಾಮನ್ಯರ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬದುಕಿನಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನು ರಾಮಾಯಣ ತಿಳಿಸುತ್ತದೆ ಎಂದರು.

ಪ್ರತಿಯೊಂದು ಮನೆಯಿಂದಲೂ ಸಹಾ ಶ್ರೀರಾಮ ಮತ್ತು ಸೀತೆಯಂತಹ ಮಕ್ಕಳ ಜನನವಾಗಬೇಕಿದೆ. ಅದೇ ರೀತಿ ಮನೆಯಲ್ಲಿ ಸಹೋದರರು ರಾಮ ಭರತರಂತೆ ಇರಬೇಕಿದೆ. ರಾಮ ಎಲ್ಲರಿಗೂ ಆದರ್ಶನಾಗಿದ್ದಾನೆ. ರಾಮನಲ್ಲಿ ಎಲ್ಲಾ ರೀತಿಯ ಒಳ್ಳೆಯ ಗುಣಗಳು ಇವೆ. ಮಂದಿರ ನಿರ್ಮಾಣ ವಿಚಾರದಲ್ಲಿ ಸುಧೀರ್ಘ ಹೋರಾಟ ನಡೆದಿರುವುದು ಶ್ರೀರಾಮ ಮಂದಿರಕ್ಕೆ ಮಾತ್ರ ಎಂದರು.

ಇದೇ ವೇಳೆ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ಮತ್ತು ಹಿರಿಯೂರು ತಾಲ್ಲೂಕುಗಳಿಗೆ ಮಂತ್ರಾಕ್ಷಾತೆ, ಕರಪತ್ರ ಹಾಗೂ ಶ್ರೀರಾಮನ ಭಾವಚಿತ್ರವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸ್ ಶಿವಮೊಗ್ಗ ವಿಭಾಗ ಸಹಕಾರ್ಯವಾಹ ಮಧುಕರ್, ವಿಭಾಗ ಸಹಾ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಕಾರ್ಯವಾಹ ನಾಗರಾಜ್, ವಿಎಚ್‍ಪಿ ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಭಾಗವಹಿಸಿದ್ದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ. ಎಸ್.ಕೆ.ಬಸವರಾಜನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್‍ಕುಮಾರ್, ಎಂ.ಸಿ.ರಘುಚಂದನ್, ಡಾ.ಸಿದ್ಧಾರ್ಥ್, ಜಿಲ್ಲಾಧ್ಯಕ್ಷ ಎ.ಮುರಳಿ, ಮಲ್ಲಿಕಾರ್ಜನ್, ಸುರೇಶ್ ಸಿದ್ದಾಪುರ, ಶಿವಣ್ಣಚಾರ್, ವಕೀಲರಾದ ಕೆ.ಎನ್.ವಿಶ್ವನಾಥಯ್ಯ, ಜಿ.ಎಂ.ಸುರೇಶ್, ನಂದಿ ನಾಗರಾಜ್, ಈಶ್ವರಪ್ಪ, ರಾಮದಾಸ್ ಮತ್ತಿತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version