ಮುಖ್ಯ ಸುದ್ದಿ
ತಿಂಗಳಾಂತ್ಯಕ್ಕೆ ಕೋಟೆನಾಡಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮನ | ಸಚಿವ ಡಿ.ಸುಧಾಕರ್

CHITRADURGA NEWS | 14 JANUARY 2024
ಚಿತ್ರದುರ್ಗ (CHITRADURGA): ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ಜಲ ಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಆಗಿ ಜಿಲ್ಲೆಗೆ ಮೊದಲ ಬಾರಿ ಆಗಮಿಸುತ್ತಿದ್ದಾರೆ.
ಜನವರಿ 30 ರೊಳಗೆ ಜಿಲ್ಲೆಗೆ ಆಗಮಿಸುತ್ತಿರುವ ಡಿ.ಕೆ.ಶಿವಕುಮಾರ್ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಈ ವಿಚಾರವನ್ನು ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಖಚಿತ ಪಡಿಸಿದ್ದಾರೆ.
ಹಿರಿಯೂರಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ.ಇದೇ ತಿಂಗಳ 30ರೊಳಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆಗೆ ಬರಲಿದ್ದಾರೆ. ಈ ಯೋಜನೆಯಿಂದ ವಿವಿ ಸಾಗರಕ್ಕೆ ಮೊದಲು ನೀರು ಹರಿಸುವ ಕೆಲಸಕ್ಕೆ ಒತ್ತು ನೀಡೋಣ’ ಎಂದು ತಿಳಿಸಿದರು.
ಇದನ್ನೂ ಓದಿ: ಮಗುವಿನ ಹಂತಕಿ ಸುಚನಾ ಪ್ರಯಾಣಿಸುತ್ತಿದ್ದ ಕಾರು ಚಾಲಕ ಐಮಂಗಲ ಪೊಲೀಸ್ ಠಾಣೆ ಹುಡುಕಿದ್ದೇಗೆ ಗೊತ್ತಾ..?
‘ಐಮಂಗಲ ಮತ್ತು ಜವನಗೊಂಡನಹಳ್ಳಿ ಹೋಬಳಿಗೂ ನೀರು ಹರಿಸಲಾಗುತ್ತದೆ. ಅಬ್ಬಿನಹೊಳಲು ಕಾಮಗಾರಿಯಿಂದ ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಭದ್ರಾ ಜಲಾಶಯದ ನೀರು ವಾಣಿವಿಲಾಸಕ್ಕೆ ಹರಿದು ಬರಲಿದೆ’ ಎಂದು ಸ್ಪಷ್ಟಪಡಿಸಿದರು.
‘ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ರೈಲ್ವೆ ಕಾಮಗಾರಿ ಅನುಮೋದನೆ ಮಾಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ. ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದರೂ ರಾಜ್ಯದ ಸಹಾಯಕ್ಕೆ ಬರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ಪಕ್ಷದ ಸರ್ಕಾರ ರೈತರ ಬೆನ್ನಿಗೆ ನಿಂತಿದೆ’ ಎಂದರು.
‘ದೇಶದಲ್ಲಿ ಒಂದೆರಡು ರಾಜ್ಯಗಳನ್ನು ಬಿಟ್ಟರೆ ಎಲ್ಲ ಕಡೆಯೂ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಬರಗಾಲ ಇದ್ದರೂ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ತಿಳಿಸಿದರು.
ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ರೈತ ದಿನಾಚರಣೆಯಲ್ಲಿ ರೈತರು ಮತ್ತು ರೈತ ಮಹಿಳೆಯರೊಂದಿಗೆ ಕೃಷಿ ವಿಜ್ಞಾನಿಗಳು ಸಂವಾದ ನಡೆಸುತ್ತಾರೆ ಎಂದು ಕರೆತಂದು ಸಂವಾದ ನಡೆಸದೆ ಕಾರ್ಯಕ್ರಮ ಮುಗಿಸಿದ್ದು, ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದ ರಾಜಕಾರಣಿಗಳನ್ನು ವೇದಿಕೆಯ ಮೇಲೆ ಕುಳ್ಳಿರಿಸಿದ್ದು ರೈತರಿಗೆ ಅವಮಾನಿಸಿದಂತೆ ಎಂದು ರೈತ ಮುಖಂಡ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಸರ್ಕಾರಿ ಕಾಲೇಜು | ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಒ.ಕುಮಾರ್, ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಮಂಜಪ್ಪ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಸುರೇಶ್ ಏಕಬೋಟೆ, ಕೃಷಿಕ ಸಮಾಜದ ಉಪಾಧ್ಯಕ್ಷ ಎಚ್. ರಂಗನಾಥ್, ಪ್ರಧಾನ ಕಾರ್ಯದರ್ಶಿ ಬಿ. ರಾಜಶೇಖರ್, ರಾಜಣ್ಣ, ಖಾದಿ ರಮೇಶ್, ಆರ್.ನಾಗೇಂದ್ರ ನಾಯ್ಕ, ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಜೆ.ಆರ್. ಸುಜಾತಾ, ರೈತ ಮುಖಂಡರಾದ ಹೊರಕೇರಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಶಿವಕುಮಾರ್, ಜಗದೀಶ್ ಕಂದಿಕೆರೆ, ಎಸ್.ಶಿವರಂಜಿನಿ, ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ್, ತೋಟಗಾರಿಕೆ ಇಲಾಖೆಯ ಲೋಕೇಶ್ ಉಪಸ್ಥಿತರಿದ್ದರು.
