ಮುಖ್ಯ ಸುದ್ದಿ
50 ಸಾವಿರದತ್ತ ಮುಖ ಮಾಡಿದ ಅಡಿಕೆ ದರ
ಚಿತ್ರದುರ್ಗ ನ್ಯೂಸ್.ಕಾಂ: ಅಡಿಕೆಯ ಬೆಲೆ ಹೆಚ್ಚಾಗುತ್ತಿದ್ದು, 50 ಸಾವಿರದತ್ತ ದಾಪುಗಾಲು ಹಾಕುತ್ತಿದೆ.
ಸೋಮವಾರ ಕ್ರಿಸ್‍ಮಸ್ ಕಾರಣಕ್ಕೆ ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ನಡೆದಿಲ್ಲ.
ಆದರೆ, ಮಧ್ಯ ಕರ್ನಾಟಕ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಪ್ರಮುಖ ಮಾರುಕಟ್ಟೆ ಎಂದು ಗುರುತಿಸಿಕೊಂಡಿರು ಚನ್ನಗಿರಿಯಲ್ಲಿ ಸೋಮವಾರ ವಹಿವಾಟು ನಡೆದಿದೆ.
ಸೋಮವಾರ ಚನ್ನಗಿರಿಯಲ್ಲಿ ನಡೆದ ಅಡಿಕೆ ಮಾರುಕಟ್ಟೆಗೆ ಬರೋಬ್ಬರಿ 4347 ಕ್ವಿಂಟಾಲ್ ರಾಶಿ ಅಡಿಕೆ ಆವಕವಾಗಿದೆ.
ಇಂದಿನ ದರದಲ್ಲಿ ಪ್ರತಿ ಕ್ವಿಂಟಾಲ್‍ಗೆ ಕನಿಷ್ಟ 47,399 ರೂ.ಗಳಿಂದ ಗರಿಷ್ಟ 48700 ರೂ.ಗಳವರೆಗೆ ಮಾರುಕಟ್ಟೆ ನಡೆದಿದೆ. 48019 ರೂ. ಇಂದಿನ ಮಾರುಕಟ್ಟೆಯ ಸರಾಸರಿ ಧಾರಣೆಯಾಗಿದೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಧಗಧಗನೆ ಉರಿದ ಕಾರು
ಚನ್ನಗಿರಿಯಲ್ಲಿರುವ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ(ತುಮ್‍ಕೋಸ್-)ನಲ್ಲಿ 47099 ರೂ. ಕನಿಷ್ಟ ದರವಾಗಿದ್ದು, 48749 ರೂ. ಗರಿಷ್ಟ ದರವಾಗಿತ್ತ. ತುಮ್‍ಕೋಸ್‍ನಲ್ಲಿ 48458 ರೂ. ಸರಾಸರಿ ದರವಾಗಿತ್ತು.
ಇದೇ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಬೆಲೆ ಕನಿಷ್ಟ 34799 ರೂ.ಗಳಿದ್ದರೆ, ಗರಿಷ್ಟ 37 ಸಾವಿರ ಇತ್ತು. ಸರಾಸರಿ ಬೆಲೆ 36133 ರೂ.ಗಳಿತ್ತು.
ಕಳೆದ 15 ದಿನಗಳಿಂದ ಅಡಿಕೆ ದರ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ಶುಕ್ರವಾರದ ಮಾರುಕಟ್ಟೆಗಿಂತಲೂ ಒಂದು ಜಿಗಿತ ಮುಂದಕ್ಕೆ ಸಾಗಿದೆ. ದಿನೇ ನೂರಿನ್ನೂರು ರೂಪಾಯಿ ಏರಿಕೆ ಕಾಣುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಈಗಾಗಲೇ ಬಹುತೇಕ ಅಡಿಕೆ ಕೊಯ್ಲು ಮುಕ್ತಾಯದ ಹಂತದಲ್ಲಿದೆ. ಖೇಣಿ ಕೊಟ್ಟರುವ ರೈತರಿಗೆ ಈ ದರ ಏರಿಕೆಯಿಂದ ಲಾಭ ಆಗುವುದಿಲ್ಲ. ಆದರೆ, ತಾವೇ ಅಡಿಕೆ ಇಳಿಸಿ ಮನೆಯಲ್ಲಿಟ್ಟಿರುವ ರೈತರಿಗೆ ಹೊಸ ವರ್ಷ ವರದಾನ ಆಗುವ ಸಾಧ್ಯತೆಗಳಿವೆ.
ಕಳೆದ ಜೂನ್ ತಿಂಗಳಲ್ಲಿ 50 ಸಾವಿರ ದಾಟಿದ್ದ ಅಡಿಕೆ ದರ, ಜುಲೈನಲ್ಲಿ 57 ಸಾವಿರ ತಲುಪಿತ್ತು. ಆನಂತರ ಕುಸಿತ ಕಂಡು 46 ಸಾವಿರಕ್ಕೆ ಬಂದು ಕುಳಿತಿತ್ತು.
ಈಗ ವರ್ಷಾಂತ್ಯದಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಈ ವರ್ಷ ಸರಿಯಾದ ಮಳೆಗಾಲ ಆಗದ ಕಾರಣ ಸರಿಯಾದ ಇಳುವರಿಯೂ ಬಂದಿಲ್ಲ ಎನ್ನುವ ಕೊರಗು ರೈತರಲ್ಲಿದೆ. ಇದಕ್ಕೆ ಪೂರಕವಾಗಿ ತುಸು ದರ ಹೆಚ್ಚಾದರೆ ಅಡಿಕೆಗೆ ಬಂಗಾರದ ಬೆಲೆ ಸಿಕ್ಕಂತಾಗುತ್ತದೆ.