ಹೊಸದುರ್ಗ
ಕರಡಿ ಹಿಡಿಯಲು ಡಿಸಿಎಫ್‍ಗೆ ಮನವಿ | ಕರುನಾಡ ವಿಜಯಸೇನೆ ಕಾರ್ಯಕರ್ತರ ಆಕ್ರೋಶ
CHITRADURGA NEWS | 19 JANUARY 2024
ಚಿತ್ರದುರ್ಗ: ಹೊಸದುರ್ಗದ ಕುಂಚಿಟಿಗ ಮಠದಲ್ಲಿ ಕಳೆದ ಆರು ತಿಂಗಳಿನಿಂದಲೂ ಕರಡಿ ಕಾಣಿಸಿಕೊಳ್ಳುತ್ತಿದ್ದು, ಭಕ್ತರು ಹಾಗೂ ಮಠಕ್ಕೆ ಬಂದು ಹೋಗುವವರಲ್ಲಿ ಭಯ ಮೂಡಿಸಿದೆ. ಎರಡು ದಿನಗಳೊಳಗಾಗಿ ಕರಡಿಯನ್ನು ಹಿಡಿದು ಬೇರೆಡೆ ಸಾಗಿಸುವಂತೆ ಕರುನಾಡ ವಿಜಯಸೇನೆಯಿಂದ ಅರಣ್ಯ ಇಲಾಖೆ ಪತ್ರಾಂಕಿತ ಸಹಾಯಕರ ಮೂಲಕ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಕಾರು ಟ್ಯಾಂಕರ್ ನಡುವೆ ಡಿಕ್ಕಿ | ಸ್ಥಳದಲ್ಲೇ ಇಬ್ಬರ ಸಾವು
ರಾತ್ರಿ ವೇಳೆಯಲ್ಲಿ ಮಠದ ಅಂಗಳದಲ್ಲಿ ಕರಡಿ ತಿರುಗಾಡುವುದನ್ನು ಗಮನಿಸಿರುವ ಭಕ್ತರು ಹಾಗೂ ವಾಯುವಿಹಾರಿಗಳು ಮಠಕ್ಕೆ ಹೋಗಿ ಬರಲು ಹೆದರುವ ವಾತಾವರಣ ನಿರ್ಮಾಣವಾಗಿದೆ.
ಗುರುವಾರ ರಾತ್ರಿಯು ಕರಡಿ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರೂ ಕರಡಿಯನ್ನು ಹಿಡಿಯುವ ಪ್ರಯತ್ನ ಮಾಡದಿರುವುದು ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಮಠದ ಭಕ್ತಾಧಿಗಳಿಗೆ, ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಅರಣ್ಯ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ದೂರಿದರು.
ಇದನ್ನೂ ಓದಿ: ಮಠದ ಆವರಣದಲ್ಲಿ ಕರಡಿಯ ಸಂಚಾರ
ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತು ಕರಡಿಯನ್ನು ಹಿಡಿದು ಬೇರೆಡೆ ಸಾಗಿಸಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದ್ದಾರೆ.
ಈ ವೇಳೆ ರಾಜಣ್ಣ, ಗೋಪಿನಾಥ್, ಪ್ರದೀಪ್ ಇತರರಿದ್ದರು.