ಮುಖ್ಯ ಸುದ್ದಿ
ಆಡುಮಲ್ಲೇಶ್ವರದಲ್ಲಿ ಜನಿಸಿದ ಮುದ್ದಾದ ಕರಡಿ ಮರಿಗಳಿಗೆ ಚಂದದ ನಾಮಕರಣ | ಈ ಕರಡಿ ಮರಿಗಳ ಹೆಸರು ಕೇಳಿದರೇ ನೀವು ವಾವ್ ಅಂತೀರಿ..

ಚಿತ್ರದುರ್ಗ ನ್ಯೂಸ್.ಕಾಂ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಮೆಯಾಗಿರುವ ಆಡುಮಲ್ಲೇಶ್ವರ ಮೃಗಾಲಯ ಈಗ ನಳನಳಿಸುತ್ತಿದೆ. ಕೆಲ ವರ್ಷಗಳ ಹಿಂದೆ ಇದ್ದ ಆಡುಮಲ್ಲೇಶ್ವರ ಬದಲಾಗಿ ಈಗ ಪಕ್ಕಾ ಮೃಗಾಲಯವಾಗಿದೆ ಪರಿವರ್ತನೆಯಾಗಿದೆ. ಇಲ್ಲಿರುವ ಕರಡಿ, ಚಿರತೆ, ಹಲವು ವಿಧದ ಪಕ್ಷಿಗಳಿಗೆ ಹೊಸ ಹೊಸ ಮನೆಗಳನ್ನು ಮಾಡಿಕೊಡಲಾಗಿದೆ. ಮೃಗಾಲಯದಲ್ಲಿ ಹುಲಿಗಳು ಗಂಭೀರ ಹೆಜ್ಜೆ ಇಟ್ಟು ಅತ್ತಿಂದಿತ್ತ ಓಡಾಡುತ್ತಿವೆ.
ಇಷ್ಟೆಲ್ಲಾ ಹೊಸತನ ತುಂಬಿ ತುಳುಕುತ್ತಿರುವ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಈಗ ಬಾಣಂತನದ, ನಾಮಕರಣದ ಸಂಭ್ರಮ ಮನೆ ಮಾಡಿದೆ. 1987ರಿಂದ ಆಡುಮಲ್ಲೇಶ್ವರ ಮೃಗಾಲಯ ಆರಂಭವಾಗಿದ್ದರೂ, ಈವರೆಗೆ ಮೃಗಾಲಯದಲ್ಲಿ ಕರಡಿಯೊಂದು ಮರಿಗಳಿಗೆ ಜನ್ಮ ನೀಡಿದ ಉದಾಹರಣೆಯೇ ಇಲ್ಲ. ಅಂಥದ್ದೊಂದು ಹೊಸ ದಾಖಲೆಯೂ ಈಗ ಆಗಿ ಹೋಗಿದೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿ ಮರಿಗಳ ಕಲರವ
ಇಲ್ಲಿನ ನಿವಾಸಿಯಾಗಿರುವ ಕರಡಿ ಸೀನಮ್ಮ ಎರಡು ಮುದಾದ ಮರಿಗಳಿಗೆ ಜನ್ಮ ನೀಡಿದೆ. ಎರಡೂ ಮರಿಗಳು ಹೆಣ್ಣಾಗಿವೆ. 2022 ಡಿಸೆಂಬರ್ 24 ರಂದೇ ಮರಿಗಳಿಗೆ ಜನ್ಮ ನೀಡಿದ್ದರೂ, ಮೃಗಾಲಯದ ಅಧಿಕಾರಿ, ಸಿಬ್ಬಂದಿಗಳು ಕರಡಿ ಹಾಗೂ ಮರಿಗಳ ಸುರಕ್ಷತೆ ದೃಷ್ಟಿಯಿಂಧ ಪ್ರವಾಸಿಗರು, ಸಾರ್ವಜನಿಕರಿಗೆ ಕಾಣದಂತೆ ಆರೈಕೆ ಮಾಡಿಕೊಂಡಿದ್ದರು.
ಈಗ ಮರಿಗಳಿಗೆ 8 ತಿಂಗಳು ತುಂಬಿದ್ದು, ಗೌರಿ ಗಣೇಶ ಹಬ್ಬದ ದಿನವೇ ಕರಡಿ ಹಾಗೂ ಮರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿತ್ತು. ಮರಿಗಳ ಮನರಂಜನೆಗಾಗಿ ಕರಡಿ ಆವರಣದೊಳಗೆ ಉಯ್ಯಾಲೆಯ ವ್ಯವಸ್ಥೆಯನ್ನೂ ಮಾಡಿದ್ದಾರೆ. ಈಗ ಪುಟಾಣಿ ಮರಿಗಳ ಕಲರವ ಪ್ರವಾಸಿಗರಿಗೆ ಹೊಸ ಮನರಂಜನೆಯಾಗಿದೆ.

ತಾಯಿಯೊಂದಿಗೆ ಉಯ್ಯಾಲೆ ಆಡುತ್ತಿರುವ ಕರಡಿ ಮರಿಗಳು
ಆವರಣಕ್ಕೆ ಅಳವಡಿಸಿರುವ ಜರಡಿ ಹಿಡಿದು ಪಟಪಟನೇ ಏರುವುದು, ನೀರಲ್ಲಿ ಮುಳುಗಿ ಏಳುವುದು, ಬಂಡೆಗಳ ಮೇಲೇರುವುದು, ಸಂದಿಯಲ್ಲಿ ಹೋಗಿ ಹೆದರಿಕೊಂಡು ಓಡೋಡಿ ಬರುವುದು ಸೇರಿದಂತೆ ಈ ಮರಿಗಳ ಆಟ ಒಂದೆರಡಲ್ಲ.
ಈ ಕರಡಿ ಮರಿಗಳನ್ನು ಆರೈಕೆ ಮಾಡುವ ಇಲ್ಲಿನ ಸಿಬ್ಬಂದಿ ರಾಕೇಶ್ ಜೊತೆಗೆ ಈ ಮರಿಗಳ ಮುದ್ದಾಟ ನೋಡಲು ಮುದ್ದು ಮುದ್ದಾಗಿರುತ್ತದೆ. ರಾಕೇಶ್ ಹೋಗಿ ಹೆಸರಿಟ್ಟು ಕರೆದರೆ ಓಡೋಡಿ ಬಂದು ತಮ್ಮ ಕೈ ಬೆರಳು ಹಾಗೂ ಉಗುರಿನಿಂದ ರಾಕೇಶ್‍ನ ಕೈ ಮುಟ್ಟಲು ಎರಡೂ ಮರಿಗಳು ಪೈಪೋಟಿ ನಡೆಸುವ ದೃಶ್ಯ ಅಪ್ಯಾಯಮಾನವಾಗಿರುತ್ತದೆ.
ಅಂದಹಾಗೇ ಈ ಮರಿಗಳ ಹೆಸರೇನು ಅನ್ನೋ ಕೌತುಕಕ್ಕೆ ವಿರಾಮ ಇಡುತ್ತೇನೆ. ಮೃಗಾಲಯದ ಅಧಿಕಾರಿ, ಸಿಬ್ಬಂದಿಗಳು ಈ ಎರಡು ಮರಿಗಳಿಗೆ ಭಾನು-ಭೂಮಿ ಎಂದು ಹೆಸರಿಟ್ಟಿದ್ದಾರೆ. ಎಷ್ಟು ಮುದ್ದಾದ ಹೆಸರಲ್ಲವೇ.
ಈ ಲೇಖನ ನಿಮಗಿಷ್ಟವಾದರೆ ನಿಮ್ಮವರಿಗೆಲ್ಲಾ ಈ ಲಿಂಕ್ ಶೇರ್ ಮಾಡಿಕೊಳ್ಳಿ. ಚಿತ್ರದುರ್ಗದ ಉತ್ತಮ ಪ್ರವಾಸಿ ತಾಣವಾಗಿರುವ ಆಡುಮಲ್ಲೇಶ್ವರ ಮೃಗಾಲಯಕ್ಕೆ ಬೇರೆ ಬೇರೆ ಊರುಗಳಲ್ಲಿರುವ ನಿಮ್ಮ ಸ್ನೇಹಿತರು ಬರುವಂತೆ ಮಾಡಿ.
