ಮುಖ್ಯ ಸುದ್ದಿ
Prison Authorities: ಕೋರ್ಟ್ ಆವರಣದಲ್ಲಿ ಆರೋಪಿ ಹೈಡ್ರಾಮ | ಕಿಟಕಿ ಗುದ್ದಿದ ಸಮ್ಮು | ಜೈಲು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
CHITRADURGA NEWS | 23 AUGUST 2024
ಚಿತ್ರದುರ್ಗ: ವಿಚಾರಣೆಗಾಗಿ ಜೈಲಿನಿಂದ ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದ ಆರೋಪಿಯೊಬ್ಬ ಹೈಡ್ರಾಮ ಸೃಷ್ಟಿಸಿ, ಕೆಲಕಾಲ ಆತಂಕ ಮೂಡಿಸಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.
ದರೋಡೆ ಪ್ರಕರಣದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಬಂಧಿಯಾಗಿರುವ ಬೆಂಗಳೂರಿನ ಆರ್.ಟಿ.ನಗರದ ಸಮ್ಮು ಅಲಿಯಾಸ್ ಬಷೀರ್ ನ್ಯಾಯಾಲಯದ ಕಲಾಪ ನಡೆಯುತ್ತಿದ್ದಾಗಲೇ ಕಿಟಕಿ ಗಾಜು ಹೊಡೆದು ಆತಂಕ ಸೃಷ್ಟಿಸಿದ್ದ.
ಇದನ್ನೂ ಓದಿ: ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ಎಫ್‍ಡಿಎ ಅಮಾನತು
ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತಂದಿದ್ದ ವೇಳೆ ಪೊಲೀಸರ ಬಳಿ ಮೊಬೈಲ್ ಕೇಳಿದ್ದು, ಪೊಲೀಸರು ಮೊಬೈಲ್ ನೀಡಲು ನಿರಾಕರಿಸಿದ ಕಾರಣಕ್ಕೆ ಪಕ್ಕದಲ್ಲೇ ಇದ್ದ ಕಿಟಕಿಯ ಗಾಜನ್ನು ಜೋರಾಗಿ ಗುದ್ದಿದ್ದಾನೆ. ಈ ವೇಳೆ ಒಳಗೆ ಕಲಾಪ ನಡೆಯುತ್ತಿತ್ತು. ಸ್ಥಳದಲ್ಲಿದ್ದ ಕೆಲ ವಕೀಲರಿಗೆ ಕಿಟಿಕಿ ಗಾಜು ಸಿಡಿದು ಸಣ್ಣಪುಟ್ಟ ಗಾಯಗಳಾಗಿವೆ. ಗಾಜು ಹಿಡಿದು ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಕಿಟಕಿ ಗಾಜು ಗುದ್ದಿದ ಆರೋಪಿ ಸಮ್ಮು ಕೈನಲ್ಲಿ ಕೂಡಾ ರಕ್ತ ಬಂದಿತ್ತು. ಆರೋಪಿ ಹುಚ್ಚಾಟ ಕಂಡ ತಕ್ಷಣ ಪೊಲೀಸರು ಅಲ್ಲಿಂದ ಆತನನ್ನು ಕರೆದುಕೊಂಡು ಬಂದು ಪೊಲೀಸ್ ವಾಹನದಲ್ಲಿ ಕೂರಿಸಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ ಸಮಸ್ಯೆಗೆ ಶೀಘ್ರ ಮುಕ್ತಿ | ಎಸ್ಪಿ ರಂಜಿತ್ ಕುಮಾರ್
ಘಟನೆ ಯ ಮಾಹಿತಿ ಸಿಕ್ಕ ತಕ್ಷಣ ನ್ಯಾಯಾಲಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜೈಲರ್ ಸಿದ್ದರಾಮ ಪಾಟೀಲ್ ಭೇಟಿ ನೀಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.
ಜೈಲು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ:
ನ್ಯಾಯಾಲಯದ ಆವರಣದ ಒಳಗೆ ಕಿಟಕಿ ಗಾಜು ಗುದ್ದಿ ಆತಂಕ ಸೃಷ್ಟಿಸಿದ ಆರೋಪಿಯನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ನಂತರ ನ್ಯಾಯಾಲಯದ ಹೊರಗೆ ಪೊಲೀಸ್ ವಾಹನದಲ್ಲಿ ಕೂರಿಸಿದ್ದರು.
ಈ ವೇಳೆ ಗಾಡಿಯಲ್ಲಿ ಕುಳಿತೇ ಮಾತನಾಡಿರುವ ಸಮ್ಮು ವೀಡಿಯೋ ವೈರಲ್ ಆಗಿದ್ದು, ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರನ್ನು ಬೆದರಿಸಲು ಜೈಲಿಗೆ ಗನ್, ಬುಲೆಟ್, ಗಾಂಜಾ ಬಂತು, ಸ್ವಾಮೀಜಿ ಬೆದರಿಸಿ ಪೋಟೋ ತೆಗೆಯಲು ಜೈಲು ಅಧಿಕಾರಿಗಳು (Prison Authorities) ಹೇಳಿದ್ದರು ಎಂದು ಆರೋಪಿಸಿದ್ದಾನೆ.
ಇದನ್ನೂ ಓದಿ: ಡೆಂಗ್ಯೂ ಜ್ವರಕ್ಕೆ 7 ವರ್ಷದ ಬಾಲಕ ಬಲಿ
ಜೈಲಿಗೆ ಪ್ರತಿ ಶುಕ್ರವಾರ ಚಿಕನ್, ಮಟನ್ ಬರುತ್ತದೆ. ಆದರೆ, ತೊಡೆ ಮಾಂಸ ಎಲ್ಲಿಗೆ ಹೋಗುತ್ತೆ ಗೊತ್ತಿಲ್ಲ. ನಮಗೆ ಎರಡು ಮೂಳೆ, ಒಂದು ಪೀಟ್ ಕೊಡ್ತಾರೆ ಅದನ್ನು ಬೆಕ್ಕೂ ತಿನ್ನುವುದಿಲ್ಲ.
ಕಟಿಂಗ್, ಶೇಂವಿಂಗ್ ಮಾಡಿಸಲು ಬಿಡುತ್ತಿಲ್ಲ. ಹಿಂದಿನ ಜೈಲು ಅಧಿಕಾರಿ ಮಹಾದೇವಿ ಮರಕಟ್ಟಿ, ಶ್ರೀಮಂತ ಗೌಡ ಪಾಟೀಲ್ ಸೇರಿದಂತೆ ಸಿಬ್ಬಂದಿಗಳ ವಿರುದ್ಧವೂ ಆರೋಪಿ ಸಮ್ಮು ಆರೋಪಗಳ ಮಲೆಯನ್ನೇ ಸುರಿಸಿದ್ದಾನೆ.
ರಾಬರಿ ಪ್ರಕರಣದಲ್ಲಿ ಸಿಲುಕಿರುವ ಸಮ್ಮು ಅಲಿಯಾಸ್ ಬಷೀರ್:
ನಗರದ ಬ್ಯಾಂಕ್ ಕಾಲೋನಿಯ ಉದ್ಯಮಿಯೊಬ್ಬರ ಮನೆಯಲ್ಲಿ 7 ಜನರನು ಒತ್ತೆಯಾಳು ಮಾಡಿಕೊಂಡು ಅಂದಾಜು 50 ಲಕ್ಷ ರೂ. ದರೋಡೆ ಪ್ರಕರಣದಲ್ಲಿ ಬಷೀರ್ ಕಳೆದ ವರ್ಷ ಜುಲೈ ತಿಂಗಳಲ್ಲಿ ಸಮ್ಮು ಸೇರಿದಂತೆ ಮೂರು ಜನರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ವಿವಿ ಸಾಗರ ಜಲಾಶಯದ ಒಳಹರಿವು ಹೆಚ್ಚಳ
ಈತನ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.