Connect with us

    ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ

    ಏರೊಬಿಕ್ ಭತ್ತದ ತಳಿ

    ಮುಖ್ಯ ಸುದ್ದಿ

    ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ

    CHITRADURGA NEWS | 17 APRIL 2024

    ಚಿತ್ರದುರ್ಗ: ಅಂತೂ ಬಯಲು ಸೀಮೆ, ಚಿತ್ರದುರ್ಗದಂತಹ ಜಿಲ್ಲೆಯಲ್ಲೂ ಬೆಳೆಯಬಹುದಾದ ಭತ್ತದ ತಳಿ ಆವಿಷ್ಕಾರವಾಗಿದೆ. ಇದರ ಮೊದಲ ಪ್ರಯೋಗ ಸಿರಿಗೆರೆ ಬೃಹನ್ಮಠದ ಶಾಂತಿವನದ ಸಮೀಪದಲ್ಲಿರುವ ಜಮೀನಿನಲ್ಲಿ ಯಶಸ್ವಿಯಾಗಿ ಮಾಡಲಾಗಿದೆ.

    ಹೌದು, ಏಳೆಂಟು ತಿಂಗಳ ಹಿಂದೆ ಸಿರಿಗೆರೆಯಲ್ಲಿ ನಡೆದ ಸಭೆಯೊಂದರಲ್ಲಿ ಕೃಷಿ ವಿಜ್ಞಾನಿಗಳು ಕಡಿಮೆ ನೀರು ಬಳಕೆ ಮಾಡಿ, ಬಯಲು ಸೀಮೆಯಲ್ಲಿ ರಾಗಿ, ಜೋಳದ ಮಾದರಿಯಲ್ಲೇ ಬೆಳೆಯಬಹುದಾದ ಏರೊಬಿಕ್ ಭತ್ತದ ತಳಿ ಬಗ್ಗೆ ರೈತರಲ್ಲಿ ಹೊಸ ಕನಸೊಂದನ್ನು ಬಿತ್ತಿದ್ದರು.

    ಇದನ್ನೂ ಓದಿ: ಬಯಲು ಸೀಮೆಯಲ್ಲೂ ಬೆಳೆಯುವ ಭತ್ತದ ತಳಿ ಅಭಿವೃದ್ಧಿ | ಏರೋಬಿಕ್ ಭತ್ತದ ಬಗ್ಗೆ ರೈತರಲ್ಲಿ ಹೊಸ ಕನಸು ಬಿತ್ತಿದ ಕೃಷಿ ವಿಜ್ಞಾನಿಗಳು

    ಆಗ, ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಈ ಭತ್ತದ ತಳಿ ಬಗ್ಗೆ ಆಸಕ್ತಿ ವಹಿಸಿ ಎಲ್ಲ ಮಾಹಿತಿ ಸಂಗ್ರಹಿಸಿ, ಮೊದಲು ಇದನ್ನು ಮಠದ ಜಮೀನಿನಲ್ಲಿ ಬೆಳೆದು ಯಶಸ್ವಿಯಾದರೆ ರೈತರಿಗೆ ಬೀಜ ಕೊಡೋಣ ಎಂಬ ನಿರ್ಧಾರಕ್ಕೆ ಬಂದಿದ್ದರು.

    ಏರೊಬಿಕ್ ಭತ್ತದ ತಳಿ

    ಏರೊಬಿಕ್ ಭತ್ತದ ತಳಿ

    ಈಗ್ಗೇ 45 ದಿನಗಳ ಹಿಂದೆ ಸಿರಿಗೆರೆ ಮಠದ ಶಾಂತಿವನದ ಬಳಿ ಮುಕ್ಕಾಲು ಎಕರೆ ಜಮೀನಿನಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಮಳೆ ಇಲ್ಲದ ಕಾರಣ 15 ದಿನಗಳಿಗೊಮ್ಮೆ ನೀರು ಬಿಡಲಾಗಿದೆ. ಈಗ ಉತ್ತಮ ಫಸಲು ಬಂದಿದೆ.

    ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಏರೊಬಿಕ್ ಭತ್ತದ ತಳಿ ಬಗ್ಗೆ ವಿಶ್ವಾಸ ಮೂಡಿದೆ. ಇದರ ಸಾಧಕ-ಬಾದಕ ನೋಡಿಕೊಂಡು ಮುಂದಿನ ದಿನಗಳಲ್ಲಿ ರೈತರು ಬೆಳೆಯುವತ್ತ ಗಮನಹರಿಸಬಹುದು ಎನ್ನುವ ದೂರದೃಷ್ಟಿ ಹೊಂದಿದ್ದೇವೆ.

    | ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ

    ಏರೊಬಿಕ್ ಭತ್ತದ ತಳಿ ವಿಶೇಷವೇನು:

    ಹಳೆಯ ಪದ್ಧತಿ ಪ್ರಕಾರ ಭತ್ತ ನಾಟಿ ಮಾಡುವಾಗ ಬೇರುಗಳು ಆಳವಾಗಿ ಇಳಿಯುತ್ತಿದ್ದವು. ಆದರೆ, ಹೊಸ ತಳಿಗಳು ಬೇರು ಮೇಲೆ ಇರುತ್ತಿದ್ದ ಪರಿಣಾಮ ಹೆಚ್ಚು ನೀರು ಬೇಡುತ್ತಿದ್ದವು. ಬೇರು ಆಳಕ್ಕೆ ಹೋದರೆ ಭೂಮಿಯೊಳಗಿನ ತೇವಾಂಶ ಪಡೆದು ಬೆಳೆಯುತ್ತವೆ. ಈ ರೀತಿಯ ತಳಿಯನ್ನು ಕ್ರಾಸಿಂಗ್ ಮಾಡಿ ಏರೋಬಿಕ್ ಎಂದು ಅಭಿವೃದ್ಧಿಪಡಿಸಿದ್ದು ಇದನ್ನು ರಾಗಿ, ಜೋಳದಂತೆ ಭಿತ್ತನೆ ಮಾಡಿ ಬೆಳೆಯಬಹುದು. ನಾಟಿ ಮಾಡುವ ಅವಶ್ಯಕತೆ ಇಲ್ಲ. ಇದರಲ್ಲಿ ನೀರು ನಿಲ್ಲಿಸುವ ಅಗತ್ಯವೂ ಇಲ್ಲ.

    ಇದನ್ನೂ ಓದಿ: ಚಿತ್ರದುರ್ಗದ ಸಂಸದ, ನಾಡಿನ ಮುಖ್ಯಮಂತ್ರಿಯೇ ಆದರು

    ಸಾಮಾನ್ಯವಾಗಿ ಈಗ ಇರುವ ಪದ್ಧತಿಯಲ್ಲಿ ಭತ್ತ ಬೆಳೆಯಲು 1 ಕೆ.ಜಿ ಭತ್ತ ಬೆಳೆಯಲು 5 ಸಾವಿರ ಲೀಟರ್ ನೀರಿನ ಅವಶ್ಯಕತೆ ಬರುತ್ತದೆ. ಆದರೆ, ಏರೋಬಿಕ್ ಭತ್ತ ಬೆಳೆಯಲು ಕೇವಲ 500 ರಿಂದ 2 ಸಾವಿರ ಲೀಟರ್ ನೀರು ಸಾಕಾಗುತ್ತದೆ. ಇಲ್ಲಿ ನೀರಿನ ಉಳಿತಾಯವಾಗುತ್ತದೆ.

    ಏರೋಬಿಕ್ ಭತ್ತ ಬೆಳೆಯಲು ಎಷ್ಟು ಖರ್ಚು ಬರಬಹುದು:

    ಏರೋಬಿಕ್ ವಿಧಾನದಲ್ಲಿ ಭತ್ತ ಬೆಳೆಯಲು ಒಂದು ಎಕರೆಗೆ ಕನಿಷ್ಟ 10 ರಿಂದ 13 ಸಾವಿರ ರೂ. ಖರ್ಚು ಬರುತ್ತದೆ. ಈ ತಳಿಗೆ ಸೂರ್ಯನ ಕಿರಣಗಳು ಈ ತಳಿಗೆ ಅತ್ಯವಶ್ಯ. ರಾಸಾಯನಿಕ ಬಳಸದೇ, ಫರ್ಟಿಲೈಜರ್ಸ್ ಇಲ್ಲದೆ ಕುರಿ, ಕೋಳಿ, ದನದ ಗೊಬ್ಬರ ಬಳಸಿಕೊಂಡು ಈ ತಳಿಯನ್ನು ಬೆಳೆಯಬಹುದು.

    ಇದನ್ನೂ ಓದಿ: ಬಬ್ಬೂರು ಫಾರ್ಮ್‌ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

    ಇನ್ನೂ ಈ ತಳಿಯನ್ನು ಅಡಕೆ ಹಾಕಿದ ರೈತರು ಕೂಡಾ ಅಡಕೆ ನಾಟಿ ಮಾಡಿದ 1 ರಿಂದ 3 ವರ್ಷಗಳವರೆಗೆ ಅಡಿಕೆ ಸಾಲುಗಳ ನಡುವೆ ಬೆಳೆಯಬಹುದು. ನಾಟಿ ಮಾಡದ 4 ತಿಂಗಳಲ್ಲೇ ಉತ್ತಮ ಇಳುವರಿ ದೊರೆಯುತ್ತದೆ ಎಂದು ರೈತರಿಗೆ ತಿಳಿಸಿದರು.

    ಏರೊಬಿಕ್ ಭತ್ತದ ತಳಿ

    ಏರೊಬಿಕ್ ಭತ್ತದ ತಳಿ

    ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಬಿತ್ತನೆಗೆ ಎಕರೆಗೆ 25 ಕೆ.ಜಿ ಭತ್ತದ ಬೀಜ ಬೇಕಾಗುತ್ತದೆ. ಆದರೆ, ಏರೋಬಿಕ್ ಪದ್ಧತಿಯಲ್ಲಿ ಒಂದು ಎಕರೆಗೆ 5 ಕೆ.ಜಿ. ಬೀಜ ಸಾಕಾಗುತ್ತದೆ. ಈ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಇರುವುದು ರೈತರಿಗೆ ವರದಾನವಾಗಲಿದೆ.

    ಮಳೆ ಆಶ್ರಯಿಸಿ ಎಲ್ಲಾ ರೀತಿಯ ಭೂಮಿಯಲ್ಲಿ ಈ ಭತ್ತದ ತಳಿಯನ್ನು ಬೆಳೆಯಬಹುದು. ಕಡಿಮೆ ನೀರು ಬಳಸಿ ಭತ್ತ ಬೆಳೆಯಬಹುದು ಎನ್ನುವುದು ವಿಶೇಷವಾಗಿದ್ದು, ಇದು ರೈತ ಸ್ನೇಹಿಯಾಗಿದೆ.

    | ಪ್ರೊ.ಎಚ್.ಇ.ಶಶಿಧರ್, ಏರೊಬಿಕ್ ಭತ್ತ ತಳಿ ತಜ್ಞ ಹಾಗೂ ಕೃಷಿ ವಿಜ್ಞಾನಿ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top