ಹಿರಿಯೂರು
Bhadra work: ನೋಟಿಸ್ ನೀಡಿಲ್ಲ, ಬೆಳೆ ಪರಿಹಾರ ಕೊಡುತ್ತಿಲ್ಲ | ಭದ್ರಾ ಕಾಮಗಾರಿ ನಡೆಸಲು ಬಿಡುವುದಿಲ್ಲ
CHITRADURGA NEWS | 04 OCTOBER 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಲು ಪೈಪ್ ಅಳವಡಿಸುವ ಮುನ್ನ ರೈತರಿಗೆ ನೋಟಿಸ್ ನೀಡಿಲ್ಲ ಎಂದು ಆರೋಪಿಸಿ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕೆಲವು ಹಳ್ಳಿಗಳ ರೈತರು ಪೈಪ್ ಅಳವಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿಗೆ ಭದ್ರಾ ಯೋಜನೆಯ ನೀರು ಬರುವುದು ತಡವಾದರೆ ನೆಲದಲ್ಲಿ ಹೂತಿರುವ ಪೈಪುಗಳು ಉಳಿಯಲು ಸಾಧ್ಯವೇ? ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾಕುವ ಪೈಪ್‌ಗಳಿಗೆ ಖಾತರಿ ಯಾರು? ಇಂತಹ ಹುಚ್ಚಾಟಗಳನ್ನು ಸ್ಥಗಿತಗೊಳಿಸಿ ಮೊದಲು ಭದ್ರಾ ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರಿಸಲಿ ಎಂದು ಆಗ್ರಹಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಮೂಲಕ ಜುಲೈನಿಂದ ಅಕ್ಟೋಬರ್‌ವರೆಗೆ ಮಳೆಗಾಲದಲ್ಲಿ ಜವನಗೊಂಡನಹಳ್ಳಿ ಹೋಬಳಿಯ 13,000 ಹೆಕ್ಟೇರ್ ಪ್ರದೇಶಕ್ಕೆ ತುಂತುರು ನೀರಾವರಿ ಹಾಗೂ ಆರು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಪೈಪ್ ಅಳವಡಿಸಲು ಅಮೃತ ಕನ್‌ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ.
ಅಜ್ಜಂಪುರದ ಸಮೀಪದ ವೈ ಜಂಕ್ಷನ್ ಬಳಿ ಚಿತ್ರದುರ್ಗ ಮತ್ತು ತುಮಕೂರು ಶಾಖಾ ಕಾಲುವೆಗಳ ಕವಲು ಇದೆ. ವೈ ಜಂಕ್ಷನ್ ಜವನಗೊಂಡನಹಳ್ಳಿಯಿಂದ ಅಂದಾಜು 200 ಕಿ.ಮೀ. ದೂರದಲ್ಲಿದೆ. ಅಲ್ಲಿ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅನುದಾನದ ಕೊರತೆಯಿಂದ ಎರಡು ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಮೊದಲೇ ಪೈಪ್ ಅಳವಡಿಸುವ ತರಾತುರಿ ಏನಿದೆ ಎಂದು ರೈತರು ಪ್ರಶ್ನಿಸಿದರು.
ರೈತರಿಗೆ ನೋಟಿಸ್ ನೀಡಿಲ್ಲ ಎನ್ನುವುದು ಸರಿಯಲ್ಲ. ಏಪ್ರಿಲ್‌ನಲ್ಲಿಯೇ ತಹಶೀಲ್ದಾರ್, ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅಮೃತ ಕಂಪನಿ ವ್ಯವಸ್ಥಾಪಕ ಸೂರ್ಯನಾರಾಯಣ್ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಆಕಾಶದಲ್ಲಿ ವಿಸ್ಮಯ | ಬರಿಗಣ್ಣಿಗೆ ಗೋಚರಿಸಲಿದೆ ಅಟ್ಲಾಸ್ ಧೂಮಕೇತು
ಕೆಲಸ ಮಾಡುತ್ತಿರುವ 33 ಹಳ್ಳಿಗಳ ವ್ಯಾಪ್ತಿಯಲ್ಲಿ ಒಂದೆರಡು ಹಳ್ಳಿಗಳಲ್ಲಿ ಮಾತ್ರ ರೈತರು ವಿರೋಧಿಸಿದ್ದಾರೆ. ಉಳಿದ ಹಳ್ಳಿಗಳಲ್ಲಿ ರೈತರು ಸಂಪೂರ್ಣ ಸಹಕರಿಸುತ್ತಿದ್ದಾರೆ. ರೈತರಿಗೆ ತುಂತುರು ಹನಿ ನೀರಾವರಿ ಕಲ್ಪಿಸುವುದು ಯೋಜನೆ ಉದ್ದೇಶ. ಭೂ ಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಜಮೀನಿನಲ್ಲಿ ಬೆಳೆ ಇದ್ದರೆ ಪರಿಹಾರ ಕೊಡುತ್ತಿದ್ದೇವೆ. ನಾವು ಪ್ರೆಷರ್ ಲೈನ್ ಮಾತ್ರ ನಿರ್ಮಿಸುತ್ತಿದ್ದು, ಗುತ್ತಿಗೆ ಅವಧಿ ಎರಡು ವರ್ಷವಿದೆ ಎಂದು ಸ್ಪಷ್ಟಪಡಿಸಿದ್ದಾರೆ.