Connect with us

    Novel: 3. ಎಲ್ಲರೂ ಲಿಂಗವಂತರಾದರು

    Habbida Malemadhyadolage

    ಸಂಡೆ ಸ್ಪಷಲ್

    Novel: 3. ಎಲ್ಲರೂ ಲಿಂಗವಂತರಾದರು

    CHITRADURGA NEWS | 15 SEPTEMBER 2024

    ಹೊತ್ತುಮುಳುಗುವುದಕ್ಕೆ ಪಡುವಲ ಗುಡ್ಡದ ಮೇಲೆ ಮಾರುದ್ದ ಇದ್ದಾಗ ಇದ್ದಕ್ಕಿದ್ದಂತೆ ಐದಾರು ಕುದುರೆಗಳು ಮತ್ತು ಮೂರು ಒಂಟೆಗಳ ಮೇಲೆ ಸಾಮಾನು ಹೇರಿಕೊಂಡು ಸುಮಾರು ಮುವ್ವತ್ತು ಜನ ಗೌನಳ್ಳಿಯಲ್ಲಿ ಬಂದಿಳಿದರು. ಅವರು ಮೂಡಲಗುಡ್ಡದ ಸಂತೆಕಣಿವೆ ಮಾರ್ಗವಾಗಿ ಬಂದಿದ್ದರು.

    ಅವರ ಹಿಂದೆಯೇ ಒಂದು ಮೇನಾ ಹೊತ್ತ ಏಳೆಂಟು ಮಂದಿಯೂ ಬಂದರು. ಊರ ಮೂಡಲಿಗೆ ಗುಡಿಯಿಲ್ಲದೆ ಬಯಲಲ್ಲಿ ನಿರಿಸಿದ್ದ ಆಂಜನೇಯನ ಕಲ್ಲು ವಿಗ್ರಹದ ಬಳಿ ಅವರೆಲ್ಲಾ ಜಮಾಯಿಸಿದ್ದರು. ಮೇನಾದಿಂದ ಹೊರಬಂದ ಮಧ್ಯ ವಯಸ್ಸು ದಾಟಿದ್ದ ಕಾವಿ ವಸ್ತ್ರಧಾರಿಗಳು ಹತ್ತಿರದಲ್ಲಿ ಹಳ್ಳ ಯಾವ ಕಡೆಗಿದೆ ಎಂಬುದನ್ನು ವಿಚಾರಿಸಿ, ಹತ್ತಿರದಲ್ಲೇ ಹರಿಯುತ್ತಿದ್ದ ಹಳ್ಳದ ನೀರನ್ನು ಕುಡಿದು ಬರಲು ಒಬ್ಬರನ್ನು ಅತ್ತ ಕಳಿಸಿದ್ದರು.

    ಅವರು ಮರಳಿ ಬಂದು ನೀರು ‘ಭೇಸ್ ಇದೆ’ ಎಂದು ತಿಳಿಸಿದಾಗ ಹಳ್ಳದ ಪಡುವಲ ದಂಡೆ ಗುಂಟಾ ಸೊಂಪಾಗಿ ಬೆಳೆದಿದ್ದ ನಾಲ್ಕಾರು ಮಾವಿನ ಮರಗಳ ಅಕ್ಕಪಕ್ಕದಲ್ಲಿ ತಾವು ತಂದಿದ್ದ ಗುಡಾರಗಳನ್ನು ಬಿಡಿಸಲು ಸೂಚಿಸಿದರು.

    ಅವರ ತಂಡದಲ್ಲಿದ್ದ ಕಟ್ಟುಮಸ್ತಾದ ಐದಾರು ಯುವಕರು ಒಂಟೆಗಳ ಮೇಲೆ ಕಟ್ಟಿದ್ದ ಗುಡಾರಗಳನ್ನು ಬಿಚ್ಚಿ ಇಳಿಸಿ ಅವುಗಳನ್ನು ಅಗಲಿಸಿ ಗೂಟ ಬಡಿದು ಗುಡಾರಗಳನ್ನು ಎತ್ತಿ ನಿಲ್ಲಿಸತೊಡಗಿದರು. ಎಂಟು ಗುಡಾರಗಳನ್ನು ಎತ್ತಿಕಟ್ಟ ನಡುವೆ ಒಂದು ಕಾವಿ ಬಣ್ಣದ ಗುಡಾರವನ್ನು ನಿಲ್ಲಿಸಿದರು.

    ಸ್ವಾಮಿಗಳನ್ನು- ಹೊತ್ತ ಮೇನೆ ಅಲ್ಲಿಗೆ ಆಗಮಿಸಿತು. ಸ್ವಾಮಿಗಳು ಮೇನೆಯಿಂದಿಳಿದು ಹಳ್ಳ. ಇಳಿದು ತಿಳಿ ನೀರಲ್ಲಿ ಮುಖ, ಕೈಕಾಲು ತೊಳೆದುಕೊಂಡು ತಲೆ ಎತ್ತಿ. ನಮಸ್ಕರಿಸಿ ಎರಡು ಬೊಗಸೆ ನೀರು ಕುಡಿದು ಗುಡಾರದ ಬಳಿಗೆ ಬಂದರು.

    ಬಂದವರಲ್ಲಿ ಕೆಲವರು ಸಂಜೆಗೆ ಅಡಿಗೆ ಮಾಡಲು ಕಲ್ಲು ಗುಂಡುಗಳನ್ನು ತಂದು ಒಲೆ ಹೂಡಿ ಹಳ್ಳದ ದಂಡೆಯಲ್ಲಿದ್ದ ಒಣ ಕಡ್ಡಿ ಕಂಪೆಗಳನ್ನು ಒಲೆಯೊಳಗೆ ಹಾಕಿ ಬೆಂಕಿ ಕಾಣಿಸಿದರು. ಒಂದಿಬ್ಬರು ಜೋಳ ಬೀಸಲು ಅಲ್ಲಿಗೆ ಬಂದಿದ್ದ ಹಳ್ಳಿಗರನ್ನು ಬೀಸುವ ಕಲ್ಲು ಕೇಳಿದರು. ಹಳ್ಳಿಯ ಜನರಲ್ಲಿ ಒಂದಿಬ್ಬರು ಅವರನ್ನು ಊರೊಳಗೆ ಕರೆದೊಯ್ದರು. ಅμÉ್ಟೂತ್ತಿಗೆ ಗುರುಗಳ ಪಾರುಪತ್ಯೆಗಾರರು, ‘ಸ್ವಾಮೀಜಿಯವರು ಶ್ರೀಶೈಲ ಪರ್ವತದ ಪಂಚ ಪೀಠಗಳಲ್ಲಿ ಒಂದಾದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ ಜಗದ್‍ಗುರುಗಳು, ಲಿಂಗವಂತರಲ್ಲದವರಿಗೆ ಲಿಂಗಧಾರಣೆ, ಶಿವಪೂಜಾ ಮಹತ್ವ, ವಿಭೂತಿ, ರುದ್ರಾಕ್ಷಿ, ಮಂತ್ರ ಇವುಗಳ ಮಹತ್ವವನ್ನು ಪ್ರಚುರಪಡಿಸಲು ವರ್ಷಕ್ಕೆ, ಎರಡು ವರ್ಷಕ್ಕೆ ಒಮ್ಮೆ ದೇಶಕ್ಕೆ ಸರ್ಕಿಟು ಬರುತ್ತಾರೆ. ಇಲ್ಲಿಂದ ಮುಂದೆ ತೆಂಕಲ ಸೀಮೆಗೆ ಹೋಗಿ ಕೊನೆಗೆ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿ ಪರೂತಕ್ಕೆ ಹೊರಡುತ್ತಾರೆ’ ಎಂದು ತಿಳಿಸಿದರು.

    ಆ ಸಮಯಕ್ಕೆ ಊರಿನ ಮುದುಕರೊಬ್ಬರು ನೊರೆ ಹಾಲು ತುಂಬಿದ್ದ ತಂಬಿಗೆಯನ್ನು ಪಾರುಪತ್ಯೆಗಾರರ ಕೈಯಲ್ಲಿರಿಸಿ “ಇದು ಆಕಳ ಹಾಲು ಸ್ವಾಮಿ, ಇದೇ ಈಗ ಆಕಳು ಮನೆಗೆ ಬಂದಿತ್ತು, ನೊರೆ ಹಾಲು ತಂದೆ, ಸ್ವಾಮೇರಿಗೆ ಕೊಡ್ರಿ” ಎಂದು ಭಿನ್ನವಿಸಿದರು.

    ಅವರೆಲ್ಲಾ ಎಷ್ಟು ದೂರದಿಂದ ಬಂದಿದ್ದರೋ ಹಳ್ಳದ ನೀರಲ್ಲಿ ಮುಖ ತೊಳೆದು, ತಿಳಿ ನೀರು ಕುಡಿದ ಬಳಿಕ ಸ್ವಲ್ಪ ಸುಧಾರಿಸಿಕೊಂಡಂತೆ ಕಂಡು ಬಂದಿದ್ದರು. ಪಾರುಪತ್ಯೆಗಾರರು ಸ್ವಾಮೀಜಿರಿದ್ದ ಗುಡಾರದ ಒಳಹೊಕ್ಕು ಸ್ವಾಮಿಗಳಿಗೆ ಏನು ಹೇಳಿದರೋ, ಸ್ವಲ್ಪ ಸಮಯಕ್ಕೆ ಸ್ವಾಮೀಜಿ ಹೊರಗೆ ಬಂದು “ನೀವೆಲ್ಲಾ ಯಾವ ಜಾತಿಯವರು, ಊರಲ್ಲಿ ಎಷ್ಟು ಜಾತಿ ಜನ ಇದ್ದೀರಿ” ಎಂದು ವಿಚಾರಿಸಿಕೊಂಡರು.

    ಹಾಲು ತಂದಿದ್ದ ಮುದುಕಪ್ಪ “ನಾವು ಕುಂಚಿಟಿಗರು, ಆವಿನ ಕಾಮರಾಯ, ಉಂಡೆ ಎತ್ತರ, ಹೊಸಳ್ಳಿ ಈರಬಡಪ್ಪನ ವಂಶಸ್ಥರು. ನಮ್ಮಲ್ಲಿ ಕೆಲವರು ಉಜ್ಜಿನಿಸಿದ್ದಪ್ಪನ ಭಕ್ತರು ಮತ್ತೆ ಕೆಲವರು ಹೇಮಾವತಿ ಹೆಂಜೇರಿ ಸಿದ್ದಪ್ಪನ ಭಕ್ತರು ಇದ್ದೀವಿ. ನಾವ್ಯಾರೂ ಮಾಂಸ, ಮದ್ದು ಮುಟ್ಟಲ್ಲ. ಎದ್ರೆ ಬಸವ, ಬಿದ್ರೆ ಶಿವ ಅಂತೀವಿ” ಅಂದರು.

    ಸ್ವಾಮೀಜಿ ಹಳ್ಳಿಗರ ಮುಖಗಳನ್ನು ಸೂಕ್ಷ್ಮವಾಗಿ ಗಮನಿಸಿ, “ನಿಮ್ಮಲ್ಲಿ ಕೆಲವರು ಮಾತ್ರ ವಿಭೂತಿ ಧರಿಸಿದ್ದೀರಿ ಎಲ್ಲರೂ ಯಾಕೆ ವಿಭೂತಿ ಧರಿಸಿಲ್ಲ” ಎಂದು ವಿಚಾರಿಸಿದರು. “ಸ್ವಾಮೇರೆ ಇವು ಬ್ಯಾಸಾಯಕ್ಕೋಗಿ ಬಂದೊರೆ. ಇನ್ನಾ ಮಕ, ಕೈಕಾಲು ತೊಳಕಂಡಿಲ್ಲ. ಅದ್ರೆ ಈಬತ್ತಿ ಹಚ್ಚಂಡಿಲ್ಲ”, ಒಬ್ಬರು ಉತ್ತರಿಸಿದರು.

    ಸರಿ ನಿಮ್ಮಲ್ಲಿ ಇಷ್ಟ ಪಟ್ಟೋರಿಗೆ ಲಿಂಗಧಾರಣೆ ದೀಕ್ಷೆ ಕೊಡತೀವಿ. ನಾಳೆ ಬೆಳಿಗ್ಗೆ ಮೈ ತೊಳಕಂಡು, ವಿಭೂತಿ ಧರಿಸಿಗಂಡು ಬನ್ನಿ” ಅಂದರು ಕತ್ತಲಾಗುತ್ತಿತ್ತು. ಬಂದವರಲ್ಲಿ ಇಬ್ಬರು ಪಂಜುಗಳನ್ನು ಹಚ್ಚಿ ಅಲ್ಲೊಂದು ಇಲ್ಲೊಂದು ಕಟ್ಟಿದರು.

    ಸ್ವಾಮೀಜಿ ಗುಡಾರದೊಳಗೆ ನಡೆಯುತ್ತಲೇ ಪಾರುಪತ್ಯೆಗಾರರು ಹಳ್ಳಿಗರ ಬಳಿ ಬಂದು “ನಿಮ್ಮಲ್ಲಿ ಯಾರಾದರೂ ಮಾಂಸ ಗೀಂಸಾ ತಿಂತೀರಾ, ಸುಳ್ಳು ಹೇಳಬೇಡಿ. ಮಾಂಸ ತಿನ್ನೋರಿಗೆ ಶಿವದೀಕ್ಷೆ ಕೊಡೋದಿಲ್ಲ. ದೀಕ್ಷೆ ತಗಂಡ್ ಮೇಲೆ ಶಿವಪೂಜೆ ಮಾಡಲೆ ನೀರು ಸೈತ ಕುಡಿಯಂಗಿಲ್ಲ. ಬೆಳಿಗ್ಗೆ ಏಳುತ್ತೆ ನಸಿಗ್ಗಲ್ಲೆ ಶಿವಪೂಜೆ ಮಾಡಬೇಕು. ಊಟ ಪಾಟ ಮಾಡಬೇಕಾದರೆ ಮೊದಲು ಶಿವಪ್ಪನ ಪೂಜೆ ಮಾಡಿ, ನೈವೇದ್ಯ ಮಾಡಬೇಕು. ರಾತ್ರೀನು ಹಿಂಗೇ ಮಾಡಬೇಕು. ಹೆಂಗನ್ನೂ ಕೂಡಾ ಹಿಂಗೇ ಮಾಡಬೇಕು. ಇಷ್ಟಲಿಂಗಾನ -ಯಾವಾಗ್ಲೆ ಎದೆ ಮೇಲೆ ಶಿವದಾರದಿಂದ ಕಟ್ಟಿ ಕೊರಳಿಗೆ ತೂಗು ಹಾಕ್ಕೊಳ್ಳಬೇಕು.

    ಸ್ವಲ್ಪ ದಿನ ಕಳೆದ ಮೇಲೆ ಎಲ್ಲಾ ರೂಢಿ ಆಗಿಬಿಡುತ್ತೆ. ಇನ್ನೊಂದು ವಿಚಾರ ಅಂದ್ರೆ ಎದೆ ಮೇಲೆ ಇಷ್ಟಲಿಂಗ ಕಳ್ಕೊಂಡು ಸುಳ್ಳು ಘಟವಟಾ ಹೇಳಂಗಿಲ್ಲ. ನೀವು ಮಾಡೋ ಎಲ್ಲಾ ಕಾವ್ಯಗಳೂ ಲಿಂಗಪ್ಪ ಮೋಡುತ್ತಿದ್ದಾನೆ. ಮೋಸಾ ಮಾಡಂಗಿಲ್ಲ, ತಿಳೀತೇ” ಎಂದು ಗಂಭೀರವಾಗಿ, ನಿಧಾನವಾಗಿ ತಿಳಿಸಿದರು.

    ಹಳ್ಳಿಗರಿಗೆ ಪಾರುಪತ್ತೇದಾರರು ಹೇಳಿದ್ದರಲ್ಲಿ ಯಾವುದೂ ಕಷ್ಟ ಆಚರಣೆಯಾಗಿರಲಿಲ್ಲ. ಆದರೂ ಸ್ವಾಮೀಜಿಯವರತ್ರ ಮಾತಾಡಬೇಕು ಅಂದುಕೊಂಡರು. ಹಳ್ಳಿಗರು ಮನೆಕಡೆ ಹೊರಡುವಾಗ “ನಿಮ್ಮಲ್ಲಿ ಆಕಳ ಹಾಲ ಸಿಗುತ್ತಿದ್ದರೆ ತಂದು ಕೊಡಿ, ದುಡ್ಡು ಕೊಡುತ್ತೇವೆ” ಎಂದು ಪಾರುಪತ್ಯೆಗಾರರು ಸೂಚಿಸಿದರು.

    ಹಿಂದಿನ ಅಧ್ಯಾಯ ಓದಿ: 2 ಕರುವುಗಲ್ಲು ನೆಟ್ಟು ಊರು ಕಟ್ಟಿದರು

    ಹಳ್ಳಿಗರು ಮನೆಕಡೆ ಮರಳುತ್ತಾ “ನಾಳೆ ಬೆಳಿಗ್ಗೆ ಲಿಂಗ ಧಾರಣೆ ಮಾಡತೀವಿ, ಮೈ ತೊಳಕಂಡ್ ಇಬೂತಿ ದರಿಸ್ಕಂಡ್ ಬರ್ರಿ ಅಂತ ಸ್ವಾಮೀಜಿ ಹೇಳಿದಾರೆ.

    ಇದನ್ನ ಎಲ್ಲಾರಿಗೂ ತಿಳಿಸ್‍ಬೇಕು, ಕಂಡ್ರಪ್ಪಾ ನಿಮ್ ನಿಮ್ ಮನೆ ಮಗ್ಗುಲರಿಗೆ ಹೇಳಪ್ಪಾ, ಬಂದೋರ್ ಬಲ್ಲ.” ಹೀಗೆ ಮಾತಾಡಿಕೊಳ್ಳುತ್ತಾ ತಮ್ಮ ತಮ್ಮ ಮನೆಗಳನ್ನು ತಲುಪಿದರು.

    ಮಾರನೇ ದಿನ ಬೆಳಗಿನಲ್ಲಿ ಶ್ರೀಶೈಲದ ತಂಡದ ಜಾಗದಿಂದ ಗಂಟೆಗಳ ಸದ್ದು ಕೇಳಿ ಬಂದವು. ಹಳ್ಳಿಗರು ತಾವೂ ಎದ್ದು ದನಕರುಗಳ ಸಗಣಿ ಬಳಿಯುವುದು, ಕೆಲವರು ನೀರು ತರುವುದು ಮಾಡುತ್ತಿದ್ದರು. ಇದಿರಿಗೆ ಸಿಕ್ಕವರಿಗೆಲ್ಲಾ ಲಿಂಗ ದೀಕ್ಷೆ ಸಮಾಚಾರ ಮುಟ್ಟಿಸುತ್ತಾ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದರು. ಬೆಳಗಿನ ಚಿಕ್ಕೊಂಬೊತ್ತಿಗೆ ನಾಲ್ಕಾರು ಜನ ಸ್ನಾನ ಮಾಡಿ ವಿಭೂತಿ ಧರಿಸಿಕೊಂಡು ಲಿಂಗ ದೀಕ್ಷೆಗೆ ಬರುವವರನ್ನು ಅಣಿಗೊಳಿಸುತ್ತಿದ್ದರು.

    ಗೌನಳ್ಳಿಯ ಸುಮಾರು ಐವತ್ತು ಜನ, ಅದರಲ್ಲಿ ಅರ್ಧದಷ್ಟು ಹೆಂಗಸರು ಸ್ವಾಮೀಜಿ ಬಿಡಾರದತ್ತ ನಡೆದರು. ಅಲ್ಲಿ ಸ್ವಾಮೀಜಿ ಗುಡಾರದ ಬಳಿ ತಂಡದ ಅರ್ಧ ಜನ ಜಮಾಯಿಸಿದ್ದರು. ಇವೆರೆಲ್ಲಾ ಅಲ್ಲಿಗೆ ತಲುಪುತ್ತಲೇ ಪಾರುಪತ್ಯೆಗಾರರು ಸ್ವಾಮೀಜಿಯವರಿದ್ದ ಗುಡಾರದೊಳಗೆ ಹೋಗಿ ಅವರಿಗೆ ಸುದ್ದಿ ಮುಟ್ಟಿಸಿದರು.

    ಸ್ವಲ್ಪ ಹೊತ್ತಿನಲ್ಲಿ ಹೊರ ಬಂದ ಅವರಿಗೆ ಹಳ್ಳಿಯ ಜನ ಅಡ್ಡಬಿದ್ದರು. ಸೊಂಟದ ಮೇಲೆ ಬರಿಮೈಯಲ್ಲಿದ್ದ ಕೆಂಪು ಅಂಗವಸ್ತ್ರ ಹೊದ್ದುಕೊಂಡಿದ್ದ ಸ್ವಾಮೀಜಿ ಹಳ್ಳಿಗರನ್ನು ಅವಲೋಕಿಸಿ ತಾವಿರುವಲ್ಲೇ ಕುಳಿತುಕೊಳ್ಳಲು ಕೈ ಎತ್ತಿ ಸೂಚಿಸಿದರು. ಅವರ ಶಿಷ್ಯರು ತಂದಿತ್ತ ಆಸನದ ಮೇಲೆ ಕುಳಿತು ಗಂಟಲು ಸರಿ ಮಾಡಿಕೊಂಡು ಕೆಲವು ಮಂತ್ರಗಳನ್ನು ಉಚ್ಚರಿಸಿದರು. ಅನಂತರ “ನೀವೆಲ್ಲಾ ಸ್ನಾನ ಮಾಡಿ ಬಂದಿದ್ದೀರಾ” ಎಂದು ವಿಚಾರಿಸಿಕೊಂಡರು.

    ಹಳ್ಳಿಗರೆಲ್ಲಾ ಒಕ್ಕೊರಲಿನಿಂದ “ಹೂಂ ಸ್ವಾಮಿ” ಅಂದರು. ಆಗ ಸ್ವಾಮೀಜಿ ನಿಧಾನವಾಗಿ “ನೀವೆಲ್ಲಾ ಯಾವ ಕಾರ್ಯ ಮಾಡಿದರೂ ಮೊದಲು ಪೂಜೆ ಮಾಡ್ತೀರ. ಬೇಸಾಯ ಹೂಡಬೇಕಾದರೆ ಮತ್ತು ಮಾನೋಮಿಯಲ್ಲಿ ನಿಮ್ಮ ಕುಳ, ಕೂರಿಗೆ, ಕುಡುಗೋಲು, ಹಾರೆ, ಸನಿಕೆ ಎಲ್ಲಾನ್ನೂ ಪೂಜೆ ಮಾಡ್ತೀರ, ಧಾನ್ಯದ ರಾಶಿ ಪೂಜೆ ಮಾಡಿ ಕಾಳು ಮನೆಗೆ ಒಯ್ಯತೀರಿ, ಕಾರಹಬ್ಬದಾಗೆ ಕರೆಕಂಬಳಿ ಗದ್ದುಗೆ ಮಾಡಿ ಅದರ ಮೇಲೆ ಎತ್ತು ನಿಲ್ಲಿಸಿ ಪೂಜೆ ಮಾಡಿ ಅದರ ಎರಡು ಕಾಲುಗಳಿಗೆ ಮೂಗುತಿ ಮುಟ್ಟಿಸುತೀರಿ. ಇವೆಲ್ಲಾ ಏನು ಆಚರಣೆಗಳು ಅಂದ್ರೆ, ನಿಮ್ಮ ಈ ಆಚರಣೆಗಳಲ್ಲಿ ಕಾಣದ ದೈವಕ್ಕೆ ಪೂಜೆ ಮಾಡಿ ನಿಮ್ಮ ಭಕ್ತಿಯನ್ನು ಅರ್ಪಿಸುತ್ತೀರಿ”. ಸ್ವಾಮೀಜಿ ನಿಧಾನವಾಗಿ ಗಂಭೀರವಾಗಿ ಹೇಳುತ್ತಿದ್ದುದನ್ನು ಹಳ್ಳಿಜನ ಸಖೇದಾಶ್ಚರಗಳಿಂದ ಆಲಿಸುತ್ತಿದ್ದರು.

    “ಈಗ ನೀವು ನಿಮ್ಮ ಮನೆ ದೈವಗಳಿಗೆ ನಡೆದುಕೊಳ್ಳಿರಿ. ಆ ದೈವಗಳ ನೆಲೆ ಎಲ್ಲೆತೋ, ವರ್ಷಕ್ಕೋ ಎರಡು ವರ್ಷಕ್ಕೋ ನೀವು ಅಲ್ಲಿಗೆ ಹೋಗಿ ಬರಲಿಕ್ಕೆ ಸಾಧ್ಯ ಆಗದೆ ಇರಬೌದು. ನಿಮ್ಮೆಜಮಾನು ನಿನ್ನೆ ಸಂಜೆ ಹೇಳಿದ್ರು “ನಾವು ಎದ್ರೆ ಬಸವಾ ಬಿದ್ರೆ ಶಿವಾ’ ಅಂತ ದೈವವನ್ನು ನೆನಸ್ಕಳ್ತಿವಿ ಅಂತ. ಬಸವ ಅಂದ್ರೆ ನೀವು ಬ್ಯಾಸಾಯಕ್ಕೆ ಹೂಡೋ ಎತ್ತಲ್ಲ. ಆತ ಮಹಾಶರಣ ಕಲ್ಯಾಣದ ಬಸವಣ್ಣ. ಈತ ಜನಕಲ್ಯಾಣಕ್ಕೆ ಹುಟ್ಟಿ ಬಂದವನು. ಅವನ ಹೆಸರು ನಿಮ್ಮ ಹಳ್ಳೀತನಕ ಮುಟ್ಟೆತೇ ಅಂದ್ರೆ ಆ ಮಹಾಶರಣ ಎಂಥಾ ಕ್ರಾಂತಿ ಮಾಡಿರಬೌದು. ಅದನ್ನ ಒಬ್ಬ ಮನುಷ್ಯ ತನ್ನ ಜೀವಮಾನದಲ್ಲಿ ಮಾಡಾಕೆ ಸಾಧ್ಯ ಇಲ್ಲ. ಬಸವಣ್ಣನ ದೈವ ಕೂಡಲ ಸಂಗಮದೇವ. ಅಂದ್ರೆ ಶಿವ. ಶಿವನಿಗೆ ರೂಪ, ಆಕಾರ ಇಲ್ಲ. ನಿಮ್ಮ ಕಣ್ಣಿಗೆ ಕಾಣುವ ಈ ವಿಶ್ವದ ಪ್ರತಿರೂಪ.

    ಅವನನ್ನ ಲಿಂಗದ ರೂಪದಲ್ಲಿ ನಾವು ಆರಾಧಿಸ್ತೀವಿ. ಲಿಂಗಪ್ಪನನ್ನ ಬಟ್ಟೆಯಲ್ಲೋ, ಕರಡಿಗೆಯಲ್ಲೋ ಇಟ್ಟು ಎದೆ ಮೇಲೆ ಇಟ್ಟುಕೊಳ್ತಿವಿ. ಅಂದರೆ ನಮ್ಮ ಹೃದಯದ ಮೇಲೆ ಧರಿಸ್ತೀವಿ. ಲಿಂಗಪ್ಪ ನಮ್ಮನ್ನ ಸದಾ ಎಚ್ಚರಿಸುತಾ ಇದ್ದಾನೆ. ಇದರಲ್ಲಿ ಹೆಣ್ಣು ಗಂಡು ಅಂತ ಭೇದ ಇಲ್ಲ. ಮಡಿ ಮೈಲಿಗೆ ಸೂತಕ ಅಂತ ವಿಚಾರ ಇಲ್ಲ”. ಸ್ವಾಮೀಜಿ ನಿಧಾನಕ್ಕೆ ಹೇಳುತ್ತಿದ್ದಾಗ ಹಳ್ಳಿಯ ಇಬ್ಬರು ತಲೆ ಎತ್ತಿ ಮೇಲೇರುತ್ತಿರುವ ಹೊತ್ತನ್ನ ನೋಡಿದರು.

    ಕೂಡಲೆ ಅವರ ಶಿಷ್ಯರಿಗೆ “ಎಲ್ಲಾರಿಗೂ ಪಾದೋದಕ ಚಿಮುಕಿಸಿರಿ. ಅವರು, ‘ಅಲ್ಲಿ ಲಿಂಗಗಳ ತರಪ್ಪಾ’ ಅಂದು “ಒಬ್ಬೊಬ್ಬರಾಗಿ ಎದ್ದು ಬರಿ ನಿಮಗಳು ಲಿಂಗಪ್ಪನನ್ನು ಕೊಡುತ್ತೀನಿ” ಅನ್ನುತ್ತಲೇ ಸ್ವಾಮೀಜಿ ಶಿಷ್ಯರ, ಕಾವಿ ಬಣ್ಣನ ಚೀಲದಲ್ಲಿದ್ದ ಲಿಂಗದ ಚೀಲಗಳನ್ನು ತಂದು ಸ್ವಾಮೀಜಿ. ಮುಂದಿರಿಸಿದರು.

    ಹಳ್ಳಿ ಜನ ಒಬ್ಬೊಬ್ಬರಾಗಿ ಎದ್ದು ಬಂದು ಸ್ವಾಮೀಜಿ. ತಮ್ಮ ಕೈಯಿಂದ ಎತ್ತಿಕೊಡುವಾಗ “ಓಂ ನಮಃ ಶಿವಾಯ” ಅನ್ನುತ್ತಿದ್ದುದನು”. ಇವರೂ ಅನುಸರಿಸಿ ಲಿಂಗಪ್ಪರನ್ನು ಪಡೆದುಕೊಂಡರು.

    ಎಲ್ಲರನ್ನೂ ಮತ್ತೆ ಕೂಡಲು ತಿಳಿಸಿ “ನಿಮ್ಮ ನಿಮ್ಮ ತಲೆ ಮೇಲೆ ವಲ್ಲಿ ಅಥವಾ ಸೆರಗು ಹೊದ್ದುಕೊಳ್ಳಿರಿ. ಇಷ್ಟಲಿಂಗವನ್ನು ತೆಗೆದು ಎಡ ಅಂಗೈನಲ್ಲಿ ಪ್ರತಿμÁ್ಠಪಿಸಿಕೊಳ್ಳಿ. ನಮ್ಮ ಶಿಷ್ಯರು ಬಂದು ಉದಕ ಅಂದರೆ. ನೀರು ವಿಭೂತಿ, ಪಡೆ ನೀಡುತ್ತಾರೆ. ಉದಕದಿಂದ ಲಿಂಗಪ್ಪರನ್ನು ತೊಳೆದು ಶುಭ್ರಬಟ್ಟೆಯಲ್ಲಿ ತಿಳೆದು ಒರೆಸಿ ಅವರಿಗೆ ವಿಭೂತಿ ಧರಿಸಿ, ಪತ್ರೆಗಳಿಂದ ಅಲಂಕರಿಸಿರಿ. ಈಗ ನಾನು ಮಾಡುತ್ತೇನೆ, ನೀವೂ ಹೀಗೇ ಮಾಡಿ.

    ಎಲ್ಲರಿಗೂ ಸುವಾಸನಾ ಕಡ್ಡಿ ಕೊಡುತ್ತಾರೆ. ಅವುಗಳಿಂದ ಶಿವಪ್ಪನಿಗೆ ಬೆಳಗಿ ಕಡ್ಡಿ ಕೆಳಗಿಟ್ಟು ಇಷ್ಟಲಿಂಗವನ್ನು ತದೇಕ ದೃಷ್ಟಿಯಿಂದ ವೀಕ್ಷಣೆ ಮಾಡಿ ಕಣ್ಣಿಗೊತ್ತಿಕೊಂಡು ಲಿಂಗಪ್ಪನ ಚೀಲಕ್ಕೆ ಸೇರಿಸಿ” ಎಂದು ಸ್ವಾಮೀಜಿ ತಮ್ಮ ಎಡಗೈ ಅಂಗೈಯಲ್ಲಿದ್ದ ಲಿಂಗವನ್ನು ತದೇಕ ದೃಷ್ಟಿಯಿಂದ ತುಂಬಾ ಹೊತ್ತು ನೋಡಿದರು.

    ಎಲ್ಲರೂ ಲಿಂಗವಂತರಾದರು

    ಅಮೇಲೆ “ಪ್ರತಿ ಸರ್ತಿ ಹೀಗೆ ಮಾಡಬೇಕು. ನಿಮಗೆ ಕೆಲಸಕ್ಕೆ ಹೊತ್ತಾಗಿರಬೇಕು. ಈಗ ಹೋಗಿ ಸಂಜೆ ಹೊತ್ತು ಮುಳುಗುತ್ತಲೇ ಮತ್ತೆ ಬನ್ನಿ. ಈ ಇನ್ನಷ್ಟು ವಿಷಯ ತಿಳಿಸುತ್ತೀವಿ”. ಸ್ವಾಮೀಜಿ ಹೇಳುತ್ತಲೇ ಎಲ್ಲರೂ ದಡ ಬಡ ಎದ್ದರು. ಕೆಲವರ ಕಣ್ಣು ಮಂಜಾಗಿದ್ದವು. ಮತ್ತೆ ಕೆಲವರು ಮೂಕರಾಗಿದ್ದರು. ಎಲ್ಲರೂ ಸ್ವಾಮೀಜಿಗೆ ಅಡ್ಡಬಿದ್ದು ತಮ್ಮ ತಮ್ಮ ಮನೆಕಡೆ ಹೊರಟರು.

    ಈ ಪ್ರಸಂಗ ಕೆಲವರ ಮೇಲೆ ತುಂಬಾ ಪ್ರಭಾವ ಬೀರಿತ್ತು. ಕೆಲವರು “ಸ್ವಾಮಿ ನಮಗೆಲ್ಲಾ ಲಿಂಗಪ್ಪರನ್ನು ಕೊಟ್ಟಿರಲ್ಲಾ ಎಷ್ಟು ಸಾವಿರ ಲಿಂಗಗಳನ್ನು ತಂದಿರಬೌದು” ಅಂತ ಆಶ್ಚರ ಪಟ್ಟುಕೊಂಡರು. “ನಮ್ಮಂಥವರಿಗೆ ಲಿಂಗಧಾರಣೆ ಮಾಡಿದರೆ ಸ್ವಾಮಿಗೆ ಅವರ ಮಠಕ್ಕೆ ಏನು ಲಾಭ” ಇತ್ಯಾದಿ ವಿಚಾರ ಮಾಡಿದ್ದರು ಕೆಲವರು. ಎಲ್ಲರಿಗೂ ಹಸಿವಾಗಿತ್ತು. ಮತ್ತೆ ಮುಖ ಕೈಕಾಲು ತೊಳೆದುಕೊಂಡು ಸ್ವಾಮೀಜಿ ತೋರಿಸಿದ ಹಾಗೆ ಲಿಂಗಪೂಜೆ ಮಾಡಿ. ಊಟ ಮಾಡಿ, ಲಿಂಗಪ್ಪನ ಚೀಲವನ್ನು ಕೊರಳಲ್ಲಿ ಕಟ್ಟಿಕೊಂಡು ಬೇಸಾಯಕ್ಕೆ ಕೆಲವರು, ಮತ್ತೆ ಕೆಲವರು ಅನ್ಯ ಕೆಲಸಗಳಲ್ಲಿ ತೊಡಗಿಕೊಂಡರು.

    ಕುಂಚಿಟಿಗರು ಕುಂಚಿಟಿಗ ಲಿಂಗಾಯತರಾದರು:

    ಲಿಂಗಧಾರಣೆ ಮಾಡಿಸಿಕೊಂಡ ಎಲ್ಲರಲ್ಲೂ ಅವರ್ಣನೀಯ ಭಾವನೆಗಳು ಮೂಡಿದ್ದವು. ಕೆಲವರ ಮನೆಗಳಲ್ಲಿ ತಮ್ಮ ಮಗ, ಸೊಸೆ ಲಿಂಗಪೂಜೆ ಮಾಡುವುದನ್ನು ನೋಡಿದ ಅಜ್ಜ ಅಜ್ಜಿಯರು ‘ನಮ್ಮೂ ಲಿಂಗಪ್ಪಗಳ ಕಟ್ಟಿಸಪ್ಪಾ’ ಎಂದು ಬೇಡಿಕೊಂಡಿದ್ದರು. ಅಂತೂ ಊರಲ್ಲಿ ಇದೊಂದು ಪವಾಡವನ್ನೇ ಮಾಡಿತ್ತು. ಸದ್ಯ ಗೌನಳ್ಳಿಯಲ್ಲಿ ಬೇರೆ ಜಾತಿಯ ಜನರಿಲ್ಲದೆ ಎಲ್ಲರೂ ಕುಂಚಿಟಿಗರಾಗಿದ್ದವರು ಕುಂಚಿಟಿಗ ಲಿಂಗಾಯ್ತರಾಗಿದ್ದರು.

    ಹೊತ್ತು ಹೋಗದಿರುತ್ತದೆಯೇ, ಸಂಜೆಯಾಯಿತು. ಹೊತ್ತು ಮುಳುಗುತ್ತಲೇ, ಬೆಳಿಗ್ಗೆ ಲಿಂಗ ಕಟ್ಟಿಸಿಕೊಂಡವರೆಲ್ಲಾ ಮುಖ ಕೈಕಾಲು ತೊಳೆದುಕೊಂಡು ಹಣೆಗೆ ವಿಭೂತಿ ಧರಿಸಿಕೊಂಡು ಸ್ವಾಮೀಜಿ ಬಿಡಾರಕ್ಕೆ ತಲುಪಿದರು. ಇವರೆಲ್ಲಾ ಆಗಮಿಸುತ್ತಲೇ ಸ್ವಾಮೀಜಿ ತಮ್ಮ ಗುಡಾರದಿಂದ ಹೊರಬಂದು ಆಸನದ ಮೇಲೆ ಕುಳಿತರು. ಕೂಡಲೇ ಹಳ್ಳಿಗರು ಒಬ್ಬೊರಾಗಿ ಎದ್ದು ಸ್ವಾಮೀಜಿ ಪಾದಕ್ಕೆ ಅಡ್ಡಬಿದ್ದರು.

    ಸ್ವಾಮೀಜಿ ಎಲ್ಲರ ಮುಖಗಳನ್ನು ಅವಲೋಕಿಸಿ, “ಇವತ್ತಿನಿಂದ ನಿಮಗೆಲ್ಲಾ ಹೊಸ ಅನುಭವ ಆಗುತ್ತಿದೆ. ಮಕ್ಕಳು ಜನಿಸಿದ ಒಂಬತ್ತನೇ ದಿನ ಲಿಂಗಧಾರಣೆ ಮಾಡಬೇಕು. ಮಗುವಿನ ಕಿವಿಯಲ್ಲಿ ‘ಓಂ ನಮಃ ಶಿವಾಯ’ ಎಂದು ಮೂರು ಬಾರಿ ಉಸರಬೇಕು. ಅಂದಿನಿಂದ ಮಗುವಿನ ಕೊರಳಲ್ಲಿ ಲಿಂಗದಕಾಯಿ ಕಟ್ಟಬೇಕು. ಜಂಗಮರು ಸಿಕ್ಕರೆ ಅವರನ್ನು ಬರಮಾಡಿಕೊಂಡು ಅವರ ಸ್ನಾನ ಮಾಡಿಸಿ, ಅವರ ಪಾದ ಪೂಜೆ ಮಾಡಿ ಆ ಪಾದೋದಕವನ್ನು ಮನೆಗೆಲ್ಲಾ ಚಿಮುಕಿಸಬೇಕು. ಅನಂತರ ಕ್ರೀಯ ತೆಗೆದುಕೊಳ್ಳಬೇಕು. ಅಂದರೆ ಗುರುವಿನ ಮತ್ತು ನಿಮ್ಮ ಇಷ್ಟಲಿಂಗದ ಪೂಜೆಯನ್ನು ನೀವೇ ಮಾಡಬೇಕು. ಅನಂತರ ಗುರುಗಳು ಮಗುವಿಗೆ ಶಿವಮಂತ್ರ ಹೇಳಿ ಲಿಂಗಧಾರಣೆ ಮಾಡುತ್ತಾರೆ”.

    “ಇದೇ ರೀತಿ ಮದುವೆಯಲ್ಲಿ ಮತ್ತು ತೀರಿಕೊಂಡಾಗ ಗುರುಗಳು ಬಂದು ಪೂಜಾ ಕೈಂಕರ್ಯ ಮಾಡುತ್ತಾರೆ. ಯಾವುದೇ ಸಂದರ್ಭದಲ್ಲಿ ನೀವು ನಿವ ಇಷ್ಟಲಿಂಗವನ್ನು ಬಿಟ್ಟಿರಬಾರದು. ಸದಾ ಎದೆಯ ಮೇಲೆ ಧರಿಸಿಕೊಳ್ಳಬೇಕು. ಶಿವ ಎಲ್ಲರಿಗೂ ಒಳ್ಳೇದು ಮಾಡುತ್ತಾನೆ. ಈ ರೀತಿ ಶಿವಪೂಜೆ ಮಾಡುತ್ತ ಮಾಡುತ್ತಾ ನೀವು, ನಿಮ್ಮ ಶರೀರವನ್ನು ಶಿವನ ಆಲಯ ಮಾಡಬೇಕು. ನಿಮ್ಮ ಕಾಲೇ ಕಂಭ, ದೇಹವೇ ದೇಗುಲ, ಹೀಗೆ ಮಾಡುತ್ತಾ ಮಾಡುತ್ತಾ ನಿಮ್ಮ ಆರೋಗ್ಯ ವರ್ಧಿಸುತ್ತದೆ. ಇದನ್ನು ನೀವು ಮನಗಾಣುತ್ತೀರಿ.”

    “ನಿಮ್ಮೂರಿನ ಎಲ್ಲರಿಗೂ ಲಿಂಗ ಧಾರಣೆ ಆಗಿದೆಯಾ, ಕೆಲವರಿಗೆ ಆಗಿಲ್ಲದಿದ್ದರೆ ಮುಂದಿನ ಸರ್ಕಿಟಿನಲ್ಲಿ ಮಾಡುವ”. ಹೀಗೆನ್ನುತ್ತಲೇ “ಗುರುಗಳೇ ನಮ್ಮಲ್ಲಿ ಕೆಲವರು ನಸೀಗ್ಗೆಲೆ ಸಿವುಡು ಕಟ್ಟೋಕೆ ಹೋಗಿದ್ದು, ಬಿಸಿಲಾದ್ರೆ ಪೈರಿನ ದಂಟುಗಳು ಬಿಸಿಲಿಗೆ ಒಣಗಿ ಮುರುಕಮಾವೆ. ಅವರಿಗೂ ಲಿಂಗಧಾರಣೆ ಮಾಡಿದ್ರೆ ಸೆಂದಾಕಿತ್ತು” ಊರಿನ ಹಿರಿಯರೊಬ್ಬರು ಮಾತಾಡಿದ್ದರು.

    “ಆಯಿತು ನಾವು ತೆಂಕಲ ಸೀಮೆಯಿಂದ ವಾಪಾಸ್ ಬತ್ತಿವಲ್ಲ ಆಗ ಮಾಡೋಣ* ಸ್ವಾಮೀಜಿ ಆಶ್ವಾಸನೆ ನೀಡಿದರು. ಅವರೇ ಮುಂದುವರಿದು “ನಾಳೆ ನಸುಕಿನಲ್ಲಿ ನಮ್ಮ ಸರ್ಕೀಟು ತೆಂಕಲ ನಾಡಿಗೆ ಹೊರಡುತ್ತದೆ. ಎಂಟತ್ತು ಮೈಲಿ ದೂರದಲ್ಲಿ ಯಾವ ಊರು ಇದೆ. ಅಲ್ಲಿಗೆ ಮಧ್ಯಾಹ್ನ ತಲುಪಿ ಸುಧಾರಿಸಿಕೊಂಡು ಮುಂದಕ್ಕೆ ಹೋಗಬೇಕು”. ಸ್ವಾಮೀಜಿ ತಮ್ಮ ಯೋಜನೆಯನ್ನು ತಿಳಿಸಿದರು.

    ಕೂಡಲೇ ಹಳ್ಳಿಯ ಹಿರಿಯನೊಬ್ಬ “ಗುರುಗಳೆ ನೀವು ಮಧ್ಯಾನ್ನಕ್ಕೆ ಮಾರಿಕಣಿವೆ ತಲುಪಬೌದು. ಅಲ್ಲಿ ಹೊಳೆ ಹರೀತೈತೆ. ದಂಡಿ ಮರಗಿಡ ಐದಾವೆ ಅಲ್ಲಿ ಒಂದು ರಾತ್ರಿ ಇದ್ದು ಮುಂದಕ್ಕೆ ಅಂದ್ರೆ ಉತ್ತೇರೆ ಕಮರದಾಗ ನೆಟ್ಟಗೆ ತೆಂಕಲಿಗೆ ಹೋಗಬೇಕು. ದನಕರು ಓಡಾಡಿರೋ ಹಾದಿ ಐದಾವೆ. ಆದ್ರೆ ಹತ್ತು ಹನ್ನೆರಡು ಮೈಲಿ ಯಾವ ಊರು ಉದ್ಯಾನ ಇಲ್ಲ. ನೀರಿನ ಹಳ್ಳ ಸಿಗ್ತಾವೆ ನೀವು ಅಡಿವ್ಯಾಗೇ ತಂಗಬೇಕಾಗುತ್ತೆ.” ಸ್ವಲ್ಪ ಆತಂಕದಿಂದಲೇ ಮಾತಾಡಿದ್ದ “ನೀರಿದ್ರೆ ಸಾಕು ಬಿಡು, ಒಂದು ರಾತ್ರಿ ಕಾಡೀನಾಗೇ ಬಿಡಾರ ಮಾಡ್ತೀವಿ ಸ್ವಾಮೀಜಿ ತಮ್ಮ ತೀರ್ಮಾನ ತಿಳಿಸಿದರು.

    ಅμÉ್ಟೂತ್ತಿಗೆ ಊರಿನ ಏಳೆಂಟು ಜನ ತಮ್ಮ ತಲೆ ಮೇಲೆ ಹುಲ್ಲು ಹೊರೆ ತಂದು ಇಳಿಸಿದರು. “ಕುದುರೆ ಒಂಟೆಗಳಿಗೆ ಮೇವಿನ ತೊಂದರೆ ಇಲ್ಲ. ಪರವಾ ಇಲ್ಲ ನೀವು ತಂದಿದಿರಿ. ಇವತ್ತು ರಾತ್ರಿ ಕುದುರೆಗಳಿಗೆ ಮೇವು ಹಾಕಿ ಉಳಿದಿರೊ ಕಂದ್ರಾನ ನೀವು ನಾಳೆ ಬೆಳಗ್ಗೆ ತಗಂಡೋಗಿ.” ಸ್ವಾಮಿಜಿ ತಿಳಿಸಿದರು.

    ಕತ್ತಲಾಗಿತ್ತು ಹಳ್ಳಿಗರು ಮನೆಗಳಿಗೆ ಹೊರಡಲು ಅಣೆಯಾದರು, “ಬೆಳಗಿನಲ್ಲಿ ಐದಾರು ಜನ ಬಂದು ದಾಟಿಸಿ ಹೋಗಿ” ಎಂದು ಸ್ವಾಮೀಜಿಯವರು ಏರ್ಪಡಿಸಿದರು.

    ಮಾರನೇ ದಿನ ಬೆಳಗಿನಲ್ಲಿ ಶ್ರೀಶೈಲದ ಸ್ವಾಮೀಜಿಯವರ ಶಿವಪೂಜೆಯ ಗಂಟೆ ದನಿ ಕೇಳುತ್ತಲೇ ಮೊದಲೇ ಮಾತಾಡಿಕೊಂಡಿದ್ದ ಐದು ಜನ ಎದ್ದು ಶಿವಪೂಜೆ ಮಾಡಿಕೊಂಡು ಸ್ವಾಮಿಗಳ ಬಿಡಾರದತ್ತ ನಡೆದರು. ಅμÉ್ಟೂತ್ತಿಗೆ ಎಲ್ಲಾ ಗುಡಾರಗಳನ್ನು ಬಿಚ್ಚಿ ಒಂಟೆ, ಕುದುರೆಗಳ ಮೇಲೆ ಹೇರಲಾಗಿತ್ತು, ಸ್ವಲ್ಪ ಹೊತ್ತಿನಲ್ಲೇ ಅವರೆಲ್ಲಾ ಹೊರಟರು. ಗೌನಳ್ಳಿಗರು ಅವರೊಡನೆ ಹೊರಟು ಮೈಲು ದೂರ ನಡೆದು ಮಾರಿಕಣಿವೆಯ ಹಾದಿಗೆ ತಲುಪಿಸಿದರು.

    ಹಿಂದೆಯೇ ಸ್ವಾಮೀಜಿಯವರ ಮೇನಾವನ್ನು ನಾಲ್ಕು ಜನ ಧಡೂತಿ ಆಸಾಮಿಗಳು ಹೊತ್ತು ಬಂದು ಕೂಡಿಕೊಂಡರು. ಮೇನಾ ಹೊತ್ತವರು ಹೆಜ್ಜೆ ಹೆಜ್ಜೆಗೂ ಸದ್ದು ಮಾಡುತ್ತಾ ವೇಗವಾಗಿ ನಡೆಯುತ್ತಿದ್ದರು. ಅವರನ್ನು ಸಾಗ ಹಾಕಿ ಊರು ತಲುಪಿದಾಗ ಬೆಳಕು ಹರಿಯುತ್ತಿತ್ತು.

    ಶ್ರೀಶೈಲ ಪರ್ವತದ ಸ್ವಾಮೀಜಿಯವರ ಈ ಲಿಂಗಧಾರಣಾ ಪಠ್ಯಟನವನ್ನು ಹಳ್ಳಿಗರು ನಾನಾ ರೀತಿಯಲ್ಲಿ ವಿಶ್ಲೇಷಿಸಿದರು. ‘ಅಷ್ಟು ದೂರದಿಂದ ಬಂದು ತೆಂಕಲು ಸೀಮೆಗೆ ಹೋಗಿ ಅಲ್ಲೆಲ್ಲಾ ಲಿಂಗ ಇಲ್ಲದವರಿಗೆ ಲಿಂಗಧಾರಣೆ ಮಾಡುವುದು, ಶಿವಪೂಜೆ, ರುದ್ರಾಕ್ಷಿ, ವಿಭೂತಿ ಧರಿಸುವುದು ಇವೇ ಇವರ ಉದ್ಯೋಗವೆ.

    ದೇಶದ ಜನರೆಲ್ಲಾ ಲಿಂಗ ಧರಿಸಿದರೆ ಇವರಿಗೇನು ಲಾಭ ಮಾಂಸ ಮದ್ಯ ತಿನ್ನುವವರು, ಹೆಂಡ ಕುಡಿಯುವವರು ಬೇರೆ ಎಲ್ಲಾ ಕದ ಇದ್ದಾರೆ. ಅವರನ್ನು ತಿನ್ನಬೇಡಿ ಹೆಂಡ ಕುಡಿಬೇಡಿ ಅಂತ ಹೇಳಿದರೆ ಕೇಳ್ತಾರಹ ಇವರು ಪಂಚಪೀಠ ಅಂತ ಹೇಳ್ತಾರೆ. ಆ ಸ್ವಾಮಿಗಳೂ ಇಂಗೇ ಮಾಡ್ತಾರಾ” ಇತ್ಯಾದಿ ಮಾತಾಡಿಕೊಂಡರು.

    ‘ಇವರ ಜತೇಲಿ ಒಳ್ಳೆ ಕಾಡು ಮನುಷ್ಯರಂಗೆ ಇರೋ ಮುವ್ವತ್ತು ನಲವತ್ತು ಜನ ಇದ್ದಾರೆ. ಅವರಿಗೆಲ್ಲಾ ಏನು ಕೂಲಿ ಕೊಟ್ಟಾರು. ಮೇನಾ ಹೊರೋ ಜನ ಅಂತೂ ಒಳ್ಳೆ ಧಡೂತಿಯಾಗಿ ಇದ್ದೂ ಚುರುಕಾಗಿದಾರೆ. ಅವರು ದೊಡ್ಡ: ಮ್ಯಾಲೆ ಹೋಗ್ತಾರೆ. ಈ ಒಂಟೆಗಳು ನಾಕೈದು ಪಲ್ಲದಷ್ಟು ಭಾರ ಹೊತ್ಕಂದ – ದೂರ ದೂರ ಹೆಜ್ಜೆ ಹಾಕ್ತಾ ನಡೆದ್ರೆ ನಮ್ ಕೈಲಿ ಅವುಗಳ ಜತೆ ಓಡೋಕ: ಆಗಲ್ಲ. ಅಂತೂ ಇವು ಏನೋ ದೊಡ್ಡ ಉದ್ದೇಶ ಇಟ್ಟಂಡೇ ಹಿಂಗೆ ಮಾಡ್ಯ. ಐದಾರೆ. ಅಂದುಕೊಂಡವರೇ ಹೆಚ್ಚು.

    ಲಿಂಗ ಕಟ್ಟಿಸಿಕೊಂಡು ಬೆಳಿಗ್ಗೆ ಸಂಜೆ ಶಿವಪೂಜೆ ಮಾಡುವುದು, ಹಣೆಯಲ್ಲಿ ವಿಭೂತಿ ಧರಿಸಿಕೊಂಡು ಒಂದು ರೀತಿಯ ಶಾಂತಿಯನ್ನು ಅನುಭವಿಸುತ್ತಿದ್ದುದನ್ನು ಲಿಂಗ ಕಟ್ಟಿಸಿಕೊಂಡಿಲ್ಲದವರು ನೋಡಿ ‘ಎಳ್ಳು ದಿನಕ್ಕೆ ” ಏಟು ಬದಲಾಗಿದ್ದೀರೋ ಮಾರಾಯ’ ಎಂದು ಮಾತಾಡುತ್ತಾ ಒಳಗೇ ಸಂಕಟ ಅನುಭವಿಸುತ್ತಿದ್ದರು. ಹೆಂಗಸರು ಹಣೆಯಲ್ಲಿ ವಿಭೂತಿ ಧರಿಸಿಕೊಂಡು.

    ಶಿವಪೂಜೆ ಮಾಡುವಾಗ ತಲೆ ಮೇಲೆ ಸೆರಗು ಹೊದ್ದುಕೊಂಡು ಕಣ್ಣು. ಮುಚ್ಚಿಕೊಂಡು ‘ಓಂ ನಮಃ ಶಿವಾಯ’ ಹೇಳಿಕೊಳ್ಳುತ್ತಿದ್ದರು. ಊರಿನ ಹೆಂಗಸರಲ್ಲಿ ಕೆಲವರು ಮಾತ್ರ ಲಿಂಗಧಾರಣೆ ಮಾಡಿಸಿಕೊಂಡಿರಲಿಲ್ಲ. ‘ನೀವು ನಿಂಗಾಯ್ತರಾಗಿ ಬಿಟ್ರಿ ನಮ್ ಗತಿ ಏನು? ನಾವು ಕುಂಚಿಗರು ಅಮ್ತಾಲೇ ಇರಬೇಕಾ. ಪರ್ವತದ ಸ್ವಾಮಿಗಳ ತಿರಿಕ್ಯಾಂಡ್ ಬಂದು ಉಳಿದೋರಿಗೆಲ್ಲಾ ಲಿಂಗ ಕಡ್ತಾರಂತೆ. ಎಂದು ಬತ್ತಾರೋ ಏನೋ ಅಂದುಕೊಂಡರು.

    “ಅವರು ಯಾವಾಗಾನ ಬರಿ ಬಂದಾಗ ಲಿಂಗ ಕಟ್ಟುತೀವಿ ಅಮ್ಮ ಹೇಳಿದಾರೆ ಅಂದ್ರೆ ಬಂದೇ ಬತ್ತಾರೆ. ಯಾಕಂದ್ರೆ ನಮ್ಮೂರು, ಹಳ್ಳದ ಪಕ್ಕದ ಮಾವಿನ ತೋಪು ಅವರಿಗೆ ಬಾಳ ಹಿಡಿಸೈತೆ. ಒಂದೆಲ್ಡ್ ದಿನ ಇಲ್ಲಿದ್ದು ಜಾತ್ರೆ ಸಮಯಕ್ಕೆ ಶ್ರೀಶೈಲಕ್ಕೆ ಹೋಗ್ತಾರಂತೆ. ಅಲ್ಲಿ ತಂಕ ತಡಕಳ್ಳಿ. ನೀವು ನಿಂಗಾಯ್ತರಾಗ್ತಿರಾ” ಸಮಾಧಾನದ ಮಾತಾಡಿಕೊಂಡರು.

    ಕುಂಚಿಟಿಗರು ಮೂಲತಃ ಒಂದು ಬುಡಕಟ್ಟು ಜನಾಂಗ. ಇವರ ಆಚರಣೆಗಳು ಈ ಸಂಸ್ಕøತಿಯನ್ನು ಬಿಂಬಿಸುತ್ತವೆ. ಗೌನಳ್ಳಿ ನಿವಾಸಿಗಳೆಲ್ಲರು ಕುಂಚಿಟಿಗರಾಗಿದ್ದು ಇವರ ಜೀವನ ಪದ್ಧತಿಯಲ್ಲಿ ದೈವಕ್ಕೆ ತುಪ್ಪದ ದೀನ ಬೆಳಗಿಸುವುದು, ಅದಕ್ಕೆಂದೇ ಒಂದು ಆಕಳು ಅಥವಾ ಎಮ್ಮೆಯನ್ನು ‘ಜೆನಿಗೆ’ ಆಕಳ ಅಥವಾ ಎಮ್ಮೆ ಎಂದು ಅಲಾದಿಯಾಗಿ ಬಿಟ್ಟು ಅದರ ಹಾಲು ತುಪ್ಪವನ್ನು – ದೈವಕ್ಕೆ ಮೀಸಲು ಅರ್ಪಿಸುತ್ತಿದ್ದರು.

    ಹೆಣ್ಣಮಕ್ಕಳಿಗೆ ವಿಶಿಷ್ಟ ಆಚರಣೆಗಳಿದ್ದುವು. ಋತುಮತಿಯರಾದ ಮಹಿಳೆಯರು ಪ್ರತಿ ತಿಂಗಳು ಮುಟ್ಟಾದಾಗ ಎರಡು ಹಗಲು ಒಂದು ರಾತ್ರಿ ವಾಸಿಸುವ ಮನೆಯಿಂದ ಹೊರಗೆ ಇರಬೇಕಾಗಿತ್ತು. ಹೊರಗೆ ಸ್ನಾನ ಮಾಡಿ ಮೈಲಿಗೆ ಸೀರೆಯನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಎರಡನೇ ಸಂಜೆ ಸ್ನಾನ ಮಾಡಿ ಮಡಿ ಸೀರೆ ಉಡುತ್ತಿದ್ದರು. ಉಟ್ಟಿದ್ದ ಸೀರೆಯನ್ನು ಅವರೇ ಮಡಿ ಮಾಡಿಕೊಳ್ಳುತ್ತಿದ್ದರು. ನಂತರ ಆಕಳ ಕರುವಿನ ಈ ಮೂತ್ರವನ್ನು ಸಿಂಪಡಿಸಿಕೊಂಡು ಶುದ್ಧ ಮಾಡುತ್ತಿದ್ದರು.

    ಶ್ರೀಶೈಲ ಪರ್ವ್ವತದ ಜಗದ್ಗುರುಗಳಿಂದ ಲಿಂಗದೀಕ್ಷೆ ಪಡೆದುಕೊಂಡಾದ ಬಳಿಕ ಕೆಲವು ಮುದುಕಿಯರು ತೀವ್ರ ಗೊಂದಲಕ್ಕೀಡಾಗಿದ್ದರು. ಸ್ವಾಮೀಜಿಯವರು ‘ಗಂಗೆಗೆ ಕಟ್ಟಿಲ್ಲ, ಲಿಂಗಕ್ಕೆ ಹೊಲೆ ಇಲ್ಲ. ಲಿಂಗವಂತರಿಗೆ ಮೈಲಿಗೆ, ಸೂತಕಗಳಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದು ಮುದುಕಿಯರಿಗೆ ತಮ್ಮ ಸಂಪ್ರದಾಯಗಳಿಗೆ ವಿರುದ್ದ ನಡೆಯಾಗಿ ಕಂಡಿತ್ತು.

    ಹೆಂಗಸರು ಸೂತಕವಾದಾಗ ತಮ್ಮ ಇಷ್ಟಲಿಂಗವನ್ನು ಬಿಚ್ಚಿ ದೇವರ ಗೂಡಿನಲ್ಲಿಟ್ಟು ಯಾರಾದರೂ ಪೂಜೆ ಮಾಡಿರಿ’ ಎಂದು ಸಲಹೆ ನೀಡಿದ್ದರು. ಆದರೆ ಗುರುಗಳು ಇಷ್ಟಲಿಂಗವನ್ನು ಯಾವಾಗಲೂ ಎದೆಯ ಮೇಲೆ ಧರಿಸಬೇಕೆಂದು ಅಪ್ಪಣೆ ಕೊಡಿಸಿದ್ದುದರಿಂದ ಇಷ್ಟ ಲಿಂಗವನ್ನು ಮೈತೊಳೆದುಕೊಳ್ಳುವಾಗ ಮಾತ್ರ ಬಿಚ್ಚಿಟ್ಟು ಅನಂತದ ಧರಿಸಿಕೊಳ್ಳಬೇಕು. ಆದ್ದರಿಂದ ‘ಸೂತಕವಾದಾಗ ಇಷ್ಟಲಿಂಗವನ್ನು  ದೇವರ ಗೂಡಿನಲ್ಲಿಡುವುದು ಅಪಚಾರ’ವೆಂದು ಹಿರಿಯರೇ ವಿಶದಪಡಿಸಿದ್ದರು.

    ಮಡಿ ಮೈಲಿಗೆ ಸೂತಕಗಳಿಲ್ಲವೆಂದ ಬಳಿಕ ಮುಟ್ಟಾದ ಹೆಂಗಸರು ಮೈತೊಳೆದುಕೊಂಡು ಮನೆಯೊಳಗೇ ಇರಬಹುದೆಂದು ಕೆಲವರ ವಾದಿಸಿದ್ದರು. ವಾದವಿವಾದಗಳು ನಡೆದು, ಸ್ವಾಮಿಗಳ ಆದೇಶದಂತೆ ಹಳ ಪದ್ಧತಿಯನ್ನು ಕೈಬಿಟ್ಟರು. ಇದರಿಂದ ಅಜ್ಜಿಯವರಿಗೆ ಮತ್ತೆ ಕೆಲವು ನಿμÁ್ಠವದ ಹೆಂಗಸರಿಗೆ ಮುಜುಗರ ಇದ್ದರೂ ಅನೇಕರು ‘ಬಿಡುಗಡೆ’ ಹೊಂದಿದವರದ ನಿರುಮ್ಮಳವಾಗಿರತೊಡಗಿದರು. ಇದರಿಂದ ಕೇಡಾದರೆ ಶಿವನೇ ಕಾಪಾಡುತ ಅಂದುಕೊಂಡು.

    ಲಿಂಗ ಕಟ್ಟಿಸಿಕೊಂಡಾಗಿನಿಂದ ಹಳ್ಳಿಗರಲ್ಲಿ ಒಂದು ಸದಾ ಎದೆಯ ಮೇಲೆ ಲಿಂಗವನ್ನು ಧರಿಸುವುದು ಮತ್ತು ಮಾಡದೆ ಬೆಳಿಗ್ಗೆ ನೀರು ಸೈತ ಕುಡಿಯದಿರುವುದು ಒಂದು ಆಚರಣೆ. ಯಾದರೆ, ಲಿಂಗ ಧರಿಸಿದ ದೇಹವನ್ನು ‘ದೇವಾಲಯ ಮಾಡಿಕೊಳ್ಳುವುದ ಹೇಗೆ ಎಂಬುದು ತಿಳಿಯದಾಗಿತ್ತು.

    ‘ತನ್ನ ಕಾಲೇ ಕಂಬ ದೇಹವೇ ದೇಗು ಅಂತ ಬಸವಣ್ಣ ಎಲ್ಲರಿಗೂ ಅರ್ಥವಾಗುವ ಭಾμÉಯಲ್ಲಿ ಹೇಳಿ ಅದರಂತೆ ನಡೆದುಕೊಂಡಿದ್ದಾನೆ. ಎಲ್ಲ ಶರಣರೂ ಅದರಂತೆ ಬದುಕಿ ಶಾಂತಿ, ನೆಮ್ಮ ಕಂಡುಕೊಂಡಿದ್ದಾರೆ. ಆದ್ದರಿಂದ ನೀವೂ ಕೂಡಾ ಹೀಗೆಯೇ ಬದುಕಬೇಕ ಎಂದು ಸ್ವಾಮೀಜಿ ಹೇಳಿದ್ದರು.

    ಆಣೆ ಪ್ರಮಾಣ ಮಾಡುವಾಗ ಎರ ಮುಟ್ಟಿಕೊಳ್ಳುತ್ತಿದ್ದುದು ಮೊದಲಿನಿಂದಲೂ ಆಚರಣೆಯಲ್ಲಿದ್ದ ನಡೆಯಾಗಿ, ತ್ತು. ಈಗ ಎದೆ ಮೇಲೆ ಲಿಂಗಪ್ಪನನ್ನು ಧರಿಸಿಕೊಂಡು ಸದಾ ಎಚ್ಚರದಿಂದ ಇರಬೇಕಾಗಿತ್ತು. ಈ ಶರೀರ ಏನೇನೋ ಮಾಡುತ್ತದಲ್ಲ. ಆವಾಗ ದೇವರು ಏನು ಮಾಡುತ್ತಾನೆ. ರಾತ್ರಿ ಮಲಗುವ ಮುನ್ನ ‘ಶಿವನೇ ಕಾಪಾಡಪ್ಪಾ’ ಅಂದು ಕಣ್ಣು ಮುಚ್ಚುವುದು. ಬೆಳಿಗ್ಗೆ ಎಚ್ಚರಾಗುತ್ತಲೇ ‘ಶಿವನೇ ಪರಮಾತ್ಮ’ ಎಂದು ಅವನನ್ನು ನೆನಸುವುದು ಯಾಂತ್ರಿಕವಾಗಿಯಾದರೂ ಶಿವನನ್ನು ಸ್ಮರಿಸುವುದು ಇದರ ಇಂಗಿತವಾಗಿತ್ತು. ಬದಲಾವಣೆಯಾಗಿದೆ. ಲಿಂಗಪೂ ಆದರೂ ಸಾಧ್ಯವಾದಷ್ಟು ಸತ್ಯದ ನಡೆಯಲ್ಲಿ ಸಾಗಬೇಕು ಅಂದುಕೊಂಡಿದ್ದವರೇ ಬಹಳ. ಗೌನಳ್ಳಿಯ ಬಹುಪಾಲು ಭೂಮಿ ಮಂಗರಾಯನ ಕೆರೆಯ ಅಂಗಳವಾಗಿದ್ದು ಹೊಯ್ದೆ ಮಣ್ಣು ಬೆಳೆ ಕೊಯ್ದಾದ ಮೇಲೆ ಬಂಡೆಯಂತೆ ಗಡುಸಾಗಿರುತ್ತಿತ್ತು.

    ಶಿವರಾತ್ರಿಯಿಂದ ಕಬ್ಬಿಣದ ಮಡಿಕೆ (ನೇಗಿಲು) ಹೂಡಿ ನೆಲವನ್ನು ಸೀಳಿ ಹಸನು ಮಾಡಬೇಕಿತ್ತು. ರೈತರು ತಿಂಗಳ ಬೆಳಕಲ್ಲಿ ಮಡಿಕೆ ಹೂಡಿ ‘ಚೋ’ ಎಂದು ಸದ್ದು ಮಾಡುತ್ತಾ ಉಳುಮೆ ಮಾಡುತ್ತಿದ್ದರು. ಬೆಳಗಿನ ಉಂಬೊತ್ತಿಗೆ ಬಂದ ಬುತ್ತಿಯನ್ನು ಉಂಡು ಬಿಸಿಲೇರುವ ತನಕ ಗೆಯ್ದು, ಎತ್ತುಗಳ ಕೊಳಪಟ್ಟಿ ಬಿಚ್ಚಿ ಬಣವೆಗಳಲ್ಲಿನ ಮರದ ನೆರಳಲ್ಲಿ ಕಣ್ಣಿ ಹಾಕಿ ಮೇವು ಹಾಕಿ ಮನೆಗೆ ಮರಳುತ್ತಿದ್ದರು.

    ಎಲ್ಲರೂ ಲಿಂಗವಂತರಾದರು

    ಹುಡುಗರು ಬಾವಿಗಳಲ್ಲಿ ಈಜಾಡಿ ಮನೆಗೆ ಬಂದು ಉಂಡು ಸಣ್ಣ ನಿದ್ದೆಗೆ ಜಾರುತ್ತಿದ್ದರು. ಹೊತ್ತು ಮುಳುಗಲು ಮಾರುದ್ದ ಇರುವಾಗ ಬಣವೆಗೆ ಹೋಗಿ ಒಣ ಹುಲ್ಲು ಹೊರೆ ಕಟ್ಟಿಕೊಂಡು ಎತ್ತುಗಳಿಗೆ ನೀರು ಕುಡಿಸಿ ಹುಲ್ಲಿನ ಹೊರೆಯೋ, ಕಲ್ಲಿಯನ್ನೋ ಹೊತ್ತು ಮನೆಗೆ ಹಿಂದಿರುಗುತ್ತಿದ್ದುದು ರೂಢಿಯಲ್ಲಿತ್ತು.

    ಹಗಲು ಅಡವಿಗೆ ಮೇಯಲು ಹೋಗಿರುತ್ತಿದ್ದ ದನಕರುಗಳು ಸಂಜೆಗೆ ಊರಿಗೆ ಮರಳುವಾಗ ಓಣಿ ತುಂಬಾ ಧೂಳೆಬ್ಬಿಸಿಕೊಂಡು ಬರುತ್ತಿದ್ದವು. ಇಂಥದೊಂದು ಸಂಜೆ ಕುದುರೆ ಮತ್ತು ಒಂಟೆಗಳ ಮೇಲೆ ಸವಾರಿ ಮಾಡಿಕೊಂಡು ಹಿಂಡು ಜನ ಬರುತ್ತಿದ್ದರು. ಅವರೆಲ್ಲಾ ಓಣಿ ಬಾಯಿಂದ ಊರು ತಲುಪಿದ ಮೇಲೆ ಎರಡು ತಿಂಗಳ ಹಿಂದೆ ಬಂದು ಹೋಗಿದ್ದ ಶ್ರೀಶೈಲ ಜಗದ್ಗುರುಗಳ ತಂಡವೆಂದು ತಿಳಿಯಿತು.

    ಅವರೆಲ್ಲಾ ನೇರವಾಗಿ ಊರ ಮೂಡಲಿಗಿದ್ದ ಮಾವಿನ ಮರದ ತೋಪಿನ ಕಡೆಗೆ ತೆರಳಿದರು. ಸ್ವಾಮೀಜಿಯವರ ಮೇನಾ ಹೊತ್ತವರು ಹಿಂದೆಯೇ ಬಂದರು. ಸ್ವಲ್ಪ ಹೊತ್ತಿಗೆ ಗುಡಾರಗಳನ್ನು ಹೂಡಿ ಒಂದಿಬ್ಬರು ತಲೆಯ ಮೇಲೆ ಚೀಲ ಹೊತ್ತು ಊರೊಳಗೆ ಬಂದು ಬೀಸುವಕಲ್ಲು ಬೇಕೆಂದು ಕೇಳಿದರು. ಅವರ ಜತೆಗೆ ಊರಿನ ಕೆಲವರು ಜತೆಯಾಗಿ ಎರಡು ಗೂಡೆ ಜೋಳದ ಹಿಟ್ಟು ಬೀಸಿಕೊಟ್ಟರು. ಅದು ಅವರ ಒಂದೂಟಕ್ಕೆ ಸಾಕಾಗಿತ್ತು.

    ಬಂದವರು ನಿಮ್ಮೂರಲ್ಲಿ ಒಂದು ವಾರ ಇರುತ್ತೇವೆ. ನಾಳೆಗೆ ಮತ್ತೆ ಜೋಳ ಬೀಸುವ ಎಂದು ಹಿಟ್ಟು ಹೊತ್ತು ತಮ್ಮ ಬಿಡಾರದತ್ತ ನಡೆದಿದ್ದರು.
    ಮಾರನೇ ದಿನ “ನಿಮ್ಮೂರಲ್ಲಿ ಜೋಳ ಬೆಳೆಯುತ್ತೀರಾ? ಬೆಳೆದಿದ್ದರೆ ಎರಡು ಪಲ್ಲಾ ಬೇಕು ದುಡ್ಡಿಗೆ ಕೊಡಿ” ಎಂದು ವಿಚಾರಿಸಿದ್ದರು.

    “ನಮ್ಮೂರಲ್ಲಿ ಯಾರೂ ಜೋಳ ಬೆಳೆಯುತ್ತಿಲ್ಲ. ರಾಗಿ ನವಣೆ, ಸಜ್ಜೆ ಬೆಳೆಯುತ್ತೇವೆ” ಎಂದು ತಿಳಿಸಿದಾಗ ‘ಒಂದು ಪಲ್ಲ ಸಜ್ಜೆ ಕೊಡಿ’ ಎಂದು ಕೇಳಿದಾಗ ನಾಲ್ಕು ಮನೆಯವರು ತಲಾ ಇಪ್ಪತ್ತೈದು ಸೇರು ಸಜ್ಜೆಯನ್ನು ಪುಕ್ಕಟ್ಟೆಯಾಗಿ ನೀಡಿದ್ದರು. ಸಜ್ಜೆಯನ್ನು ಹಸನು ಮಾಡಿ ಕೊಟ್ಟಾಗ, ಬೀಸಬೇಕು ಎಂದು ಮತ್ತೆ ಊರೊಳಕ್ಕೆ ಬಂದು ಏಳೆಂಟು ಮನೆಯ ಬೀಸೋಕಲ್ಲುಗಳಿಂದ ಹಳ್ಳಿಜನ ಹಿಟ್ಟು ಮಾಡಿಕೊಟ್ಟರು.

    ಅವರೆ ಕಾಯಿಬೆಳೆದವರು ಇಪ್ಪತ್ತು ಸೇರಿನಷ್ಟು ಹಸೀ ಅವರೆಕಾಳು ಸುಲಿದು ಕೊಟ್ಟಿದ್ದರು. ಬರೀ ಮೊಳಕೆಕಾಳು ತಿನ್ನುತ್ತಿದ್ದ ಸ್ವಾಮೀಜಿ ಸಜ್ಜೆ ರೊಟ್ಟಿ ಅವರೆ ಕಾಳು ಪಲ್ಯ ಉಂಡು ಹೊಟ್ಟೆ ಕೆಡಿಸಿಕೊಂಡರು. “ಗೌನಳ್ಳಿಯಲ್ಲಿ ವಾರೊಪ್ಪತ್ತು ತಂಗಿ ಸುಧಾರಿಸಿಕೊಳ್ಳಬೇಕು” ಎಂದು ಯೋಚಿಸಿದ್ದ ಸ್ವಾಮೀಜಿ ಆರೋಗ್ಯ ಸುಧಾರಿಸದಿದ್ದರೆ ಮುಂಚೆಯೇ ಊರು ಬಿಡುವ ಯೋಚನೆಯಲ್ಲಿದ್ದರು.

    ಸಂಜೆ ಬೇಸಾಯದಿಂದ ಹಿಂದಿರುಗಿದ್ದ ನಾಲ್ಕಾರು ಊರಜನ ಸ್ವಾಮೀಜಿ ಗುಡಾರದ ಬಳಿ ತೆರಳಿ, ತಾವು ಬಂದಿರುವುದನ್ನು ಪಾರಪತ್ಯೇಗಾರರಿಗೆ ತಿಳಿಸಿದ್ದರು. ಅವರು ಗುಡಾರದೊಳಗೆ ಹೋಗಿ ಸ್ವಾಮೀಜಿಯವರಿಗೆ ಸುದ್ದಿ ಮುಟ್ಟಿಸಿದ ಕೆಲ ಹೊತ್ತಿನಲ್ಲಿ ಸ್ವಾಮೀಜಿ ಹೊರಬಂದರು. ಕೂಡಲೇ ಹಳ್ಳಿಗ ಅಡ್ಡ ಬಿದ್ದು ನಮಿಸಿದರು.

    ಉಭಯ ಕುಶಲೋಪರಿ ಆದ ಮೇಲೆ ಸವ ಹಳ್ಳಿಯ ಕೆಲವರಿಗೆ ಲಿಂಗಧಾರಣೆ ಆಗಿಲ್ಲ. ಅವರೆಲ್ಲಾ ಲಿಂಗ ಕಟ್ಟಿಕೊಂಡು ಶಿವ ಪೂಜೆ ಮಾಡಲು ಉತ್ಸುಕರಾಗಿರುವುದನ್ನು ಸ್ವಾಮೀಜಿ ಗಮನಕ್ಕೆ ತಂದಲ “ಸರಿ ಅವರೆಲ್ಲಾ ನಾಳೆ ಬೆಳಗ್ಗೆ ಬಂದರೆ ಲಿಂಗಧಾರಣೆ ಮಾಡಿ ಬಿಡುವ ಅಂದರು ಹಳ್ಳಿಗರಿಗೆ ಖುಷಿಯಾಯಿತು.

    ಬೆಳಗಿನ ಚಿಕ್ಕುಂಬೊತ್ತಿಗೆ ಗೌನಳ್ಳಿಯ ಇಪ್ಪತ್ತೈದು ಜನ, ಅವರಲ್ಲಿ ಹೆಂಗಸರು ಶುಚಿರ್ಭೂತರಾಗಿ ಸ್ವಾಮೀಜಿ ತಂಗಿದ್ದ ಗುಡಾರದ ಬಳಿಗೆ ಆಗಮಿಸಿದರು.

    ಜತೆಯಲ್ಲಿ ಕೆಲವು ಜನ ಲಿಂಗ ಕಟ್ಟಿಸಿಕೊಂಡಿದ್ದವರೂ ಇದ್ದರು ಎಲ್ಲರಿಗೂ ಕುಳಿತುಕೊಳ್ಳಲು ತಿಳಿಸಿದ ಕೂಡಲೇ ಸ್ವಾಮೀಜಿ ಶಿಷ್ಯರು ‘ಓಂ ನಮಃ ಶಿವಾಯ’ ಎಂದು ಹೇಳುತ್ತಾ ಎಲ್ಲರಿಗೂ ಸ್ವಾಮೀಜಿ ಪಾದೋದಕವನ ಚಿಮುಕಿಸಿ, ಎಲ್ಲರ ಹಣೆಗೂ ವಿಭೂತಿ ಧಾರಣೆ ಮಾಡಿ ಎಲ್ಲರಿಗೂ ಸ್ವಾಮೀಜಿ ಹಸ್ತದಿಂದ ಲಿಂಗದ ಚೀಲಗಳನ್ನು ವಿತರಿಸಿದರು.

    ಅನಂತರ ಎಲ್ಲರಿಗೂ “ತಮ್ಮ ಇಷ್ಟಲಿಂಗಗಳನ್ನು ಎಡದ ಅಂಗೈಯಲ್ಲಿ ಪ್ರತಿಸ್ಥಾಪಿಸಿಕೊಳ್ಳಿ” ಎಂದು ನಿಧಾನವಾಗಿ ಹೇಳುತ್ತಾ “ಈಗ ನಾನು ಕೂಡಾ ಲಿಂಗಪೂಜೆ ಮಾಡ್ತೀ. ನೀವು ನನ್ನನ್ನು ಅನುಸರಿಸಿ” ಎಂದು ತಮ್ಮ ಶಿಷ್ಯರತ್ತ ನೋಡಿದರು. ಕೂಡಲಿ ಇಬ್ಬರು ಶಿಷ್ಯರು ಉದಕದ ಗಿಂಡಿ, ವಿಭೂತಿ ಪತ್ರೆ, ಪುಷ್ಪಗಳನ್ನು ಕೈಲಿಡಿದ. ಗ ಎಲ್ಲರ ಲಿಂಗಗಳಿಗೆ ಉದಕ ಚಿಮುಕಿಸಿದರು.

    ಹಿಂದಿನ ಅಧ್ಯಾಯ ಓದಿ: 1 ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

    ಸ್ವಾಮೀಜಿ “ಎಲ್ಲರೂ ಶುಭ ಬಟ್ಟೆಯಲ್ಲಿ ಲಿಂಗಪ್ಪರನ್ನು ಒರೆಸಿ ಮತ್ತೆ ಎಡ ಅಂಗೈಯಲ್ಲಿ ಪ್ರತಿμÁ್ಠಪಿಸಿಕೊಂಡ ವಿಭೂತಿ, ಪತ್ರೆ ಪುಷ್ಪಗಳಿಂದ ಅಲಂಕರಿಸಿರಿ. ಈಗ ಸುವಾಸನಿ ಕಡ್ಡಿಯಿಂದ ಲಿಂಗಪ್ಪರನ್ನು ಬೆಳಗಿರಿ ನಿಮ್ಮ ಮನೆಗಳಲ್ಲಿ ಕರ್ಪೂರದಾರತಿ ಮಾಡಬಹುದು. ಹೂ ಪತ್ರೆ ಉದುರಿಸಿ ತದೇಕ ಚಿತ್ತದಿಂದ ಲಿಂಗಪ್ಪರನ್ನು ನೋಡಿರಿ. ನೋಡುತ್ತಾ ನೋಡುತ್ತಾ ನೀವೆಲ್ಲಾ ಎಲ್ಲಿಗೋ ಹೋಗುತ್ತೀರಿ. ಶಿವಲಿಂಗ ಬಿಟ್ಟು ಬೇರೇನೂ ತ್ಯ ನಿಮಗೆ ಕಾಣಿಸುವುದಿಲ್ಲ. ಮನಸ್ಸಿನಲ್ಲಿ ಓಂ ನಮಃ ಶಿವಾಯ ಅನ್ನುತ್ತಲೇ ಕಣ್ಣು ಮುಚ್ಚಿಕೊಂಡರೆ ಲಿಂಗಪ್ಪನಲ್ಲದೆ ಬೇರೇನೂ ನಿಮಗೆ ಕಾಣಿಸುವುದಿಲ್ಲ. ಹೀಗೆ ನೀವು ಎಷ್ಟು ದೂರ ಸಾಗುತ್ತೀರೋ ಎಲ್ಲವೂ ಶಿವಮಯ”.

    “ಹೊತ್ತಾರ ಏಳುತ್ತಲೇ ಲಿಂಗಪೂಜೆ ಮಾಡಿ, ಸಂಜೆ ಊಟಕ್ಕೆ ಮುಂಚೆ ಲಿಂಗಪೂಜೆ ಮಾಡಿರಿ. ಲಿಂಗಪೂಜೆ ಮಾಡುವಾಗ ಯಾರು ಮಾತಾಡಿಸಿದರೂ ನಿಮಗೇನೂ ಕೇಳಿಸುವುದಿಲ್ಲ. ನಿಮ್ಮ ವ್ಯವಹಾರಗಳಲ್ಲಿ ಮೋಸ, ಸುಳ್ಳು ಪಳ್ಳಾ ಇರಬಾರದು. ಇದರಿಂದ ನಿಮಗೆ ನೆಮ್ಮದಿ ಸಿಗುತ್ತದೆ. ಅದೇ ಎಲ್ಲರಿಗೂ ಬೇಕಾಗಿರುವಂಥದು”. ಸ್ವಾಮೀಜಿ ಸ್ವಲ್ಪ ಹೊತ್ತು ಶಾಂತರಾಗಿ ಎಲ್ಲರ ಕಡೆಗೂ ದೃಷ್ಟಿಹರಿಸಿ ತಮ್ಮೆರಡೂ ಕೈಗಳನ್ನು ಮೇಲೆತ್ತಿ ಹರಿಸಿದರು.

    ಹಳ್ಳಿಗರಿಗೆ ಇದೊಂದು ವಿಶಿಷ್ಟ ಅನುಭವವಾಗಿತ್ತು. ಬಾಲ್ಯದಿಂದ ಈ ತನಕ ಅವರಿಗೆ ಇಂಥ ಅನುಭವವೇ ಆಗಿರಲಿಲ್ಲ. ನೇರಳೆಹಣ್ಣಿನ ಬಣ್ಣದ ಈ ಶಿವಲಿಂಗ ಪ್ರಪಂಚದ ಸ್ವರೂಪವೇ! ಎಲ್ಲಾ ಶಿವಾಲಯಗಳಲ್ಲೂ ಇಂಥದೇ ಶಿಲಾಮೂರ್ತಿಯನ್ನು ಪ್ರತಿμÁ್ಠಪಿಸಿ ಪೂಜಿಸಲಾಗುತ್ತಿದೆ. ಶಿವನ ಕಲ್ಪನೆಯೇ ಅವರಿಗೆ ತಿಳಿದಿರಲಿಲ್ಲ. ಆ ಗಳಿಗೆಯಿಂದ ಅವರೆಲ್ಲಾ ಲಿಂಗಾಯಿತ ಧಮ್ಮದ ಅನುಯಾಯಿಗಳಾಗಿದ್ದರು.

    ಸ್ವಾಮಿಗಳು ಮೇಲೇಳುವ ಸೂಚನೆ ತೋರಿದರು. ಎಲ್ಲಾ ಹಳ್ಳಿಗರೂ ಒಬ್ಬೊಬ್ಬರಾಗಿ ಮೇಲೆದ್ದು ಸ್ವಾಮೀಜಿರಿಗೆ ಅಡ್ಡಬಿದ್ದರು. ಕೇವಲ ಕೆಲವರು ಮಾತ್ರ ಕೆಲವು ವರಹಗಳನ್ನು ಸ್ವಾಮೀಜಿ ಮುಂದಿರಿಸಿದ್ದ ಹೂ ಪತ್ರೆಗಳ ಪಾತ್ರೆಯಲ್ಲಿ ಇಳಿಬಿಟ್ಟರು. ಎಲ್ಲರೂ ನಿಧಾನವಾಗಿ ತಮ್ಮ ತಮ್ಮ ಮನೆಗಳ ಕಡೆ ಹೊರಟಾಗ ಪಾರುಪತ್ಯೆಗಾರರು “ಯಾರಾದರೂ ನಿಮ್ಮನ್ನು ಎಂಥ ಲಿಂಗಾಯ್ತರೆಂದು ಕೇಳಿದರೆ ‘ಪರ್ವತದವರು’ ಅನ್ನಿರಿ” ಎಂದು ಗಟ್ಟಿಯಾಗಿ ಹೇಳಿದರು.

    ಸ್ವಾಮೀಜಿಗಳು ಶ್ರೀಶೈಲದತ್ತ ಪ್ರಯಾಣವನ್ನು ಒಂದು ದಿನ ಮುಂದೂಡಿದ್ದರು. ಅವರ ತಂಡದವರು ಒಂದು ಪಲ್ಲಾದಷ್ಟು ಸಜ್ಜೆ ಹಿಟ್ಟನ್ನು ಬೀಸಿಕೊಂಡು ಚೀಲಗಳಲ್ಲಿ ತುಂಬಿಕೊಂಡಿದ್ದರು. ಹೊರಡುವ ದಿನ ಬೆಳಗಿನಲ್ಲಿ ಎಂದಿನಂತೆ ಪೂಜಾ ಗಂಟೆ ಸದ್ದು ಕೇಳಿದ ಕೂಡಲೇ ಗೌನಳ್ಳಿಯ ಅರ್ಧದಷ್ಟು ಜನ ಅವರಿದ್ದಲ್ಲಿಗೆ ಓಡಿದ್ದರು. ಅವರಾಗಲೇ ಎಲ್ಲಾ ಗುಡಾರಗಳನ್ನು ಬಿಚ್ಚಿ ಕುದುರೆ, ಒಂಟೆಗಳ ಮೇಲೇರಿಸಿ ಪ್ರಯಾಣಕ್ಕೆ ಸಜ್ಜಾಗಿದ್ದರು.

    ಹಳ್ಳಿಗರು ತಾವಿದ್ದಲ್ಲಿಯೇ ಸ್ವಾಮೀಜಿರಿಗೆ ಅಡ್ಡಬಿದ್ದು ನಮಸ್ಕರಿಸಿದರು. ಸ್ವಾಮೀಜಿ ಮೇನೆಯೊಳಗೆ ಕುಳಿತುಕೊಳ್ಳುತ್ತಲೇ “ಶ್ರೀಶೈಲ ಮಲ್ಲಿಕಾರ್ಜುನ ಉಘೇ ಉಘೇ” “ಜಗದ್ಗುರು ಪಂಚಾಚಾರ್ಯರಿಗೇ” “ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶರಿಗೆ”, “ಮಾನವಧರ ಜಯವಾಗಲಿ” ಎಂದು ಜಯಘೋಷ ಮಾಡಿ ಮೇನೆಯನ್ನು ಮೇಲೆ ಹೊರಟರು. ಗೌನಹಳ್ಳಿಗರು ಅವರ ಮುಂದೆ ಹಿಂದೆ ಓಡುತ್ತಾ ಸಂತೆಕಣಿವೆ ಮುಟ್ಟಿಸಿ ಹಿಂತಿರುಗಿದ್ದರು.

    ಮೂಡಲಲ್ಲಿ ಜಗದಕಣ್ಣು ಸೂರದೇವ ಉದಯಿಸುತ್ತಿದ್ದ. ಒಂದು ಬೆಳಿಗ್ಗೆ ಕಳ್ಳಣಿವೆ ಮಾರ್ಗವಾಗಿ ಬಂದಿದ್ದ ಇಬ್ಬರು ದಾರಿ ಹೋಕರು ‘ಗುಡ್ಡದಾಚೆಗಿನ ಹಳ್ಳಿಗಳಿಗೆ ಪಿಂಡಾರೆಯವರು ನುಗ್ಗಿ ದಾಳಿ ಮಾಡಿ ಸಿಕ್ಕಿದ್ದನ್ನು ಲೂಟಿ ಮಾಡುತ್ತಿದ್ದಾರೆ ಉμÁರಾಗಿರಿ’ ಎಂದು ಎಚ್ಚರಿಕೆ ನೀಡಿ ಕೆಂದಗಾನಹಳ್ಳಿ ಕಡೆಗೆ ಹೋಗಿದ್ದರು.

    ಅವರು ಅತ್ತ ತೆರಳಿದ ಬಳಿಕ ಹಳ್ಳಿಗರೆಲ್ಲರೂ ಗಾಬರಿಯಾಗದೆ ‘ಹೊಲಗಳಲ್ಲಿ ಉಳುಮೆಗೆ ಹೋದವರು ದನಕರು ಕಾಯುವವರು ಹೊಸಬರೇನಾದರೂ ಊರಕಡೆ ಬರುವುದನ್ನು ಕಂಡರೆ ಕೂಡಲೇ ಕೇಕೇ ಹಾಕಿರಿ. ಈ ಸದ್ದಗಳು ಕೇಳಿದ ಕೂಡಲೇ ಊರಿನಲ್ಲಿರುವವರು ಕೈಯಲ್ಲಿ ಕೊಡ್ಲಿ, ಕುಡುಗೋಲು, ಲಟ್ಟ ಹಿಡಿದು- ಕೊಂಡು ನೀರೊಳೆ ಹಾದಿ ಮತ್ತು ಓಣಿ ಬಾಯಲ್ಲಿ ಮೋಪಾಗಿರಬೇಕು. ಪಿಂಡಾರೆಯವರು ಕುದುರೆಗಳ ಮೇಲೆ ಬರಬಹುದು. ದೂರದಲ್ಲೇ ಅವರಿಗೆ ಕವಣಿಗಲ್ಲು ಬೀಸಿರಿ’ ಮುಂತಾಗಿ ಸೂಚನೆ ನೀಡಿದ್ದಲ್ಲದೆ ರಾತ್ರಿ ಹೆಂಗಸರು ಮಕ್ಕಳನ್ನು ಮಾಳಿಗೆ ಮೇಲೆ ಮಲಗಿಸಿರಿ ಮತ್ತು ಗಂಡಸರು ರಾತ್ರಿ ಹೊತ್ತಲ್ಲಿ ಊರಲ್ಲಿ ಗಸ್ತು ತಿರುಗಬೇಕು’ ಎಂಬುದಾಗಿ ಕಾರ್ಯಾಚರಣೆ ನಡೆಸಿದ್ದರು, ಎಂಟು ಹತ್ತು ದಿನ ಕಳೆದರೂ ಯಾರೂ ಗೌನಳ್ಳಿಯತ್ತ ಸುಳಿದಿರಲಿಲ್ಲ.

    ಹೊಸಬರಿಗೆ ಗೌನಳ್ಳಿ ದುಸ್ಸಾಧ್ಯವೇ ಆಗಿತ್ತು. ಊರಿನಿಂದ ಎಂಟು ಹತ್ತು ಮೈಲಿಗಳ ಅಂತರದಲ್ಲಿ ಯಾವ ಹಳ್ಳಿ, ಹಟ್ಟಿ ಇರಲಿಲ್ಲ. ಹಾದಿಯೂ ಅಷ್ಟಕ್ಕμÉ್ಟ, ಪಡುವಲ ಗುಡ್ಡ ಮತ್ತು ಮೂಡಲ ಗುಡ್ಡದ ಸಾಲು ಸ್ವಾಭಾವಿಕ ರಕ್ಷಣೆ ನೀಡಿದ್ದವು. ಕಾಲು ಹಾದಿಗಳು ಮತ್ತು ದನಕರುಗಳು ಓಡಾಡಿದ ಹಾದಿಗಳು ಒಂದರೊಳಗೊಂದು ಸೇರಿ, ಹೊಸಬರನ್ನು ಹಾದಿ ತಪ್ಪಿಸುವಲ್ಲಿ ಆಯಶಸ್ವಿಯಾಗಿದ್ದವು. ಕಳ್ಳಣಿವೆ ಮತ್ತು ಸಂತೆ ಕಣಿವೆಗಳಲ್ಲಿ ಪರಿಚಿತರು ಮಾತ್ರ ಪಲೀಸಾಗಿ ತಿರುಗಾಡಬಹುದಿತ್ತು. ಹೀಗಾಗಿ ಪಿಂಡಾರೆಯವರಾಗಲಿ ಮತ್ಯಾರೇ ದಾಳಿಕೋರರು ಸುಳಿದಿರಲಿಲ್ಲ.

    ಮುಂದುವರೆಯುವುದು…

    Click to comment

    Leave a Reply

    Your email address will not be published. Required fields are marked *

    More in ಸಂಡೆ ಸ್ಪಷಲ್

    To Top