Connect with us

    ಮಧ್ಯಾಹ್ನ ಊಟ ಬೇಡ ಎಂದು ಹೇಳಿ ಹೋದ ಮಗ ಶವವಾಗಿ ವಾಪಾಸು | ರೇಣುಕಾಸ್ವಾಮಿ ಕೊಲೆಗೆ ಮರುಗಿದ ಚಿತ್ರದುರ್ಗ

    ರೇಣುಕಾಸ್ವಾಮಿ ಕೊಲೆಗೆ ಮರುಗಿದ ಚಿತ್ರದುರ್ಗ

    ಮುಖ್ಯ ಸುದ್ದಿ

    ಮಧ್ಯಾಹ್ನ ಊಟ ಬೇಡ ಎಂದು ಹೇಳಿ ಹೋದ ಮಗ ಶವವಾಗಿ ವಾಪಾಸು | ರೇಣುಕಾಸ್ವಾಮಿ ಕೊಲೆಗೆ ಮರುಗಿದ ಚಿತ್ರದುರ್ಗ

    CHITRADURGA NEWS | 11 JUNE 2024

    ಚಿತ್ರದುರ್ಗ: ಅಮ್ಮ ಕೆಲಸಕ್ಕೆ ಹೋಗಿ ಬರುತ್ತೇನೆ, ಮಧ್ಯಾಹ್ನ ಊಟ ಬೇಡ ಎಂದ ಮಗ, ನಾನು ಡ್ಯೂಟಿಗೆ ಹೋಗುತ್ತಿದ್ದೇನೆ, ಗರ್ಭಿಣಿ ನೀನು ಮಾತ್ರೆ ನುಂಗುವುದನ್ನು ಮರೆಯಬೇಡ ಎಂದು ಪತಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಶವವಾಗಿ ಮನೆಗೆ ಮರಳುತ್ತಿದ್ದಾನೆ.

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ, ನಟ ದರ್ಶನ್ ಹಾಗೂ ಅವರ ಬೆಂಬಲಿಗರಿಂದ ಕೊಲೆಯಾಗಿದ್ದಾರೆ ಎನ್ನುವ ಸುದ್ದಿ ಮಂಗಳವಾರ ಬೆಳಗ್ಗೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಸ್ವತಃ ದರ್ಶನ್ ಅಭಿಮಾನಿಗಳು ವಿಚಲಿತರಾಗಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಬಂಧನ

    ಚಿತ್ರದುರ್ಗದ ತುರುವನೂರು ರಸ್ತೆಯ ವಿಆರ್‍ಎಸ್ ಕಾಲೋನಿಯಲ್ಲಿರುವ ರೇಣುಕಾಸ್ವಾಮಿ ಮನೆಯಲ್ಲಿ ನೀರವ ಮೌನ ಆವರಿಸಿದೆ. ಶನಿವಾರ ಬೆಳಗ್ಗೆ ಮನೆಯಿಂದ ಡ್ಯೂಟಿಗೆ ಹೋಗಿದ್ದ ಮಗ ಬೆಂಗಳೂರಿನಲ್ಲಿ ಕೊಲೆಯಾಗಿ ಚಿತ್ರದುರ್ಗಕ್ಕೆ ಶವವಾಗಿ ಮರಳುತ್ತಿದ್ದಾನೆ.

    ಕೆಇಬಿ ಇಲಾಖೆಯ ನಿವೃತ್ತ ನೌಕರ ಶಿವಾನಂದಗೌಡ ಹಾಗೂ ರತ್ನಪ್ರಭ ದಂಪತಿಗಳ ಪುತ್ರ ರೇಣುಕಾಸ್ವಾಮಿ. ಚಿತ್ರದುರ್ಗದಲ್ಲಿ ಅಪೊಲೊ ಮೆಡಿಕಲ್ ಸ್ಟೋರ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು.

    ಇದನ್ನೂ ಓದಿ: ಐಟಿಐ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

    ಒಂದು ವರ್ಷದ ಹಿಂದಷ್ಟೇ, 2023 ಜೂನ್ 28 ರಂದು ಹರಿಹರ ಮೂಲದ ಸಹನಾ ಜೊತೆಗೆ ರೇಣುಕಾಸ್ವಾಮಿ ಮದುವೆಯಾಗಿತ್ತು. ಅವರ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ.

    ನಟಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ ಕಾರಣಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ.

    ಇದನ್ನೂ ಓದಿ: ಪೊಲೀಸ್ ತನಿಖೆಗೆ ಕೈ ಜೋಡಿಸುತ್ತಿದ್ದ ಅಗಸ್ತ್ಯ ಇನ್ನಿಲ್ಲ

    ಈ ವಿಚಾರ ತಿಳಿದು ಸ್ಥಳೀಯರು, ರೇಣುಕಾಸ್ವಾಮಿ ಒಡನಾಡಿಗಳು ಅವನು ಅಂತಹ ಹುಡುಗನಲ್ಲ. ತೀರಾ ಮುಗ್ದ, ಸೌಮ್ಯ ಸ್ವಭಾವದವನು. ಎಂದೂ ಗಲಾಟೆ, ಗದ್ದಲಗಳಲ್ಲಿ ಭಾಗಿಯಾದವನಲ್ಲ ಎಂದು ಪ್ರತಿಕ್ರಿಯಿಸಿದರು.

    ರೇಣುಕಾಸ್ವಾಮಿ ಹಿಂದೂ ಪರ ಸಂಘಟನೆಗಳಲ್ಲೂ ಸಕ್ರೀಯನಾಗಿ ತೊಡಗಿಸಿಕೊಳ್ಳುತ್ತಿದ್ದ ಎನ್ನುವ ವಿಚಾರ ತಿಳಿದು ಬಂದಿದೆ. ಮೂರು ವರ್ಷಗಳ ಹಿಂದೆ ಬಜರಂಗದಳದಲ್ಲಿ ಸುರಕ್ಷಾ ಪ್ರಮುಖ್ ಜವಾಬ್ದಾರಿ ಇತ್ತು.

    ಇದನ್ನೂ ಓದಿ: ದೇಸಿ ಪ್ರಮಾಣ ಪತ್ರ ವಿತರಣೆ | ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗಿ

    ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಉತ್ಸವ, ಅವರ ಬಡಾವಣೆಯ ಗಣೇಶೋತ್ಸವ, ಇತ್ತೀಚೆಗೆ ನಡೆದ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಎಂದು ಸ್ನೇಹಿತರು ತಿಳಿಸಿದ್ದಾರೆ.

    ಶನಿವಾರದಿಂದ ರೇಣುಕಾಸ್ವಾಮಿಗೆ ಹುಡುಕಾಟ:

    ರೇಣುಕಾಸ್ವಾಮಿ ಶನಿವಾರ ಬೆಳಗ್ಗೆ ಮನೆಯಿಂದ ತಮ್ಮ ಸ್ಕೂಟಿಯಲ್ಲಿ ಮೆಡಿಕಲ್ ಸ್ಟೋರ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಾರೆ. ಆನಂತರ ಅವರು ಮನೆಯವರು ಸಂಪರ್ಕಕ್ಕೆ ಸಿಕ್ಕಿಲ್ಲ.

    ಅಂದು ರಾತ್ರಿಯೂ ಮನೆಗೆ ಬಂದಿಲ್ಲ. ಮರು ದಿನ ತಂದೆ ತಾಯಿ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಚಳ್ಳಕೆರೆ ಗೇಟ್‍ನಲ್ಲಿ ಅವರ ಸ್ಕೂಟಿ ಪತ್ತೆಯಾಗಿದೆ. ಅದರ ಕೀ ಇರಲಿಲ್ಲ. ತಳ್ಳಿಕೊಂಡು ಮನೆಗೆ ತಂದು ನಿಲ್ಲಿಸಿದ್ದಾರೆ.

    ಇದನ್ನೂ ಓದಿ: ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 

    ಸೋಮವಾರ ಮಧ್ಯಾಹ್ನ ಕಾಮಾಕ್ಷಿಪಾಳ್ಯ ಪೊಲೀಸರು ರೇಣುಕಾಸ್ವಾಮಿ ಅವರ ತಂದೆಗೆ ಪೋನ್ ಮಾಡಿ ಬೆಂಗಳೂರಿಗೆ ಬರಲು ತಿಳಿಸಿದ್ದರು.

    ವೀರಶೈವ ಲಿಂಗಾಯತ, ಜಂಗಮ ಸಮಾಜದ ಖಂಡನೆ:

    ರೇಣುಕಾಸ್ವಾಮಿ ಕೊಲೆಯನ್ನು ವೀರಶೈವ ಲಿಂಗಾಯತ ಹಾಗೂ ಜಂಗಮ ಸಮಾಜದ ಮುಖಂಡರು ಖಂಡಿಸಿದ್ದಾರೆ.

    ಸಮಾಜದ ಮುಖಂಡರಾದ ಎಸ್.ಷಣ್ಮುಖಪ್ಪ ಸುದ್ದಿಗಾರರ ಜೊತೆ ಮಾತನಾಡುತ್ತಾ, ಈ ಕೊಲೆ ನಿಜಕ್ಕೂ ಅಚ್ಚರಿ ಮೂಡಿಸಿದೆ. ರೇಣುಕಾಸ್ವಾಮಿ ಹಾಗೂ ಅವರ ತಂದೆ ಇಬ್ಬರೂ ಸೌಮ್ಯ ಸ್ವಭಾವದವರು. ಅವರ ಮನೆಗೆ ಪಂಚಪೀಠಗಳ ಮಠಾಧೀಶರು ಆಗಾಗ ಬಂದು ಹೋಗುತ್ತಿದ್ದರು. ಅವರ ಮನೆಯ ಮೊದಲ ಮಹಡಿ ಮಠಾಧೀಶರ ವಾಸ್ತವ್ಯಕ್ಕೆ ಸೀಮಿತವಾಗಿತ್ತು ಎಂದು ಸ್ಮರಿಸಿದರು.

    ಇದನ್ನೂ ಓದಿ: ಜೆಇಇ ಫಲಿತಾಂಶ | ರಾಷ್ಟ್ರಮಟ್ಟದಲ್ಲಿ ಚಿತ್ರದುರ್ಗದ SRS ಪಿಯು ವಿದ್ಯಾರ್ಥಿಗಳ ಸಾಧನೆ

    ರೇಣುಕಾಸ್ವಾಮಿಯನ್ನು ಚಿಕ್ಕ ಮಗುವಿನಿಂದಲೂ ನೋಡಿದ್ದೇನೆ. ಇತ್ತೀಚೆಗೆ ಆತನ ಪತ್ನಿಯ ಸೀಮಂತ ಕಾರ್ಯ ಆಗಿದೆ. ಯಾರೇ ಈ ಕೊಲೆ ಮಾಡಿದ್ದರೂ ಶಿಕ್ಷೆ ಆಗಬೇಕು. ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

    ಜಂಗಮ ಸಮಾಜದ ಮುಖಂಡರಾದ ಷಡಾಕ್ಷರಯ್ಯ ಮಾತನಾಡಿ, ರೇಣುಕಾಸ್ವಾಮಿಯನ್ನು ಶನಿವಾರದಿಂದಲೇ ಎಲ್ಲ ಕಡೆ ಹುಡುಕಾಡಿದ್ದೇವೆ. ಆದರೆ, ಕೊಲೆಯಾಗಿರುವುದು ದುರ್ದೈವ. ಸಾತ್ವಿಕ ಸ್ವಭಾವದ ವ್ಯಕ್ತಿ.

    ಇದನ್ನೂ ಓದಿ: ಕೆರೆ ಏರಿ ಮೇಲೆ ಲಾರಿ ಪಲ್ಟಿ | ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿ

    ಮದುವೆಯಾಗಿ ಒಂದು ವರ್ಷ ಆಗಿದೆ. ಪತ್ನಿ ಮೂರು ತಿಂಗಳ ಗರ್ಭಿಣಿ. ಯಾರೇ ಹತ್ಯೆ ಮಾಡಿದ್ದರೂ ಜಂಗಮ ಸಮಾಜ ಇದನ್ನು ಖಂಡಿಸುತ್ತದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

    ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರೆ ಕರೆದು ಬೈದು ಬುದ್ದಿ ಹೇಳಬಹುದಿತ್ತು. ಅವರ ತಂದೆ ತಾಯಿಗೆ ಈ ವಿಚಾರ ಹೇಳಬಹುದಿತ್ತು. ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ, ಕೊಲೆ ಮಾಡಿರುವುದು ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top