ಲೋಕಸಮರ 2024
ಶುರುವಾಯ್ತು ಮತದಾನ ಸಂಭ್ರಮ | ಮತಗಟ್ಟೆಗಳತ್ತ ಮತದಾರನ ಹೆಜ್ಜೆ
CHITRADURGA NEWS | 26 APRIL 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಶುಭ ಶುಕ್ರವಾರ ಮತದಾನ ಪ್ರಾರಂಭವಾಗಿದೆ. ಬಹುತೇಕ ಕಡೆ ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ಮತಗಟ್ಟೆಗಳ ಮುಂದೆ ಹಾಜರಾದ ಮತದಾರರು ಹಕ್ಕು ಚಲಾಯಿಸಿ ಸಂಭ್ರಮಿಸಿದರು.
ವಾಯುವಿಹಾರಕ್ಕೆ ತೆರಳಿದವರು, ತರಕಾರಿ, ಹಾಲು ತೆಗದುಕೊಂಡು ಹೋಗಲು ಬಂದವರು, ಮೊಮ್ಮಕ್ಕಳ ಜತೆ ಕ್ರೀಡಾಂಗಣಕ್ಕೆ ಬಂದವರು ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಲೋಕಸಭಾ ಕ್ಷೇತ್ರದ 8 ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ 18,56,876 ಮತದಾರರು ಇದ್ದು, 2,168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ 9,904 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ. 368 ಮೈಕ್ರೋ ಅಬ್ಸರ್ವಗಳನ್ನು ನೇಮಕ ಮಾಡಲಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಮತಗಟ್ಟೆಗಳ ಪೈಕಿ 1167 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: ವೋಟರ್ ಕಾರ್ಡ್ ಇಲ್ಲ ಅಂದ್ರು ವೋಟ್ ಮಾಡಿ | ಈ ದಾಖಲೆ ಇರಲಿ
ಚುನಾವಣಾ ಕಣದಲ್ಲಿ 18 ಪುರುಷ ಹಾಗೂ 2 ಮಹಿಳೆಯರು ಸೇರಿ 20 ಅಭ್ಯರ್ಥಿಗಳು ಇದ್ದಾರೆ. ಆದ್ದರಿಂದ ಈ ಬಾರಿಯ ಮತದಾನದಲ್ಲಿ 2 ಬ್ಯಾಲೆಟ್ ಯುನಿಟ್ಗಳನ್ನು ಇಡಲಾಗಿದೆ. ಇದರಲ್ಲಿ 20 ಅಭ್ಯರ್ಥಿಗಳು ಒಂದು ನೋಟಾ ಸೇರಿ 21 ವಿವರಗಳನ್ನು ಬ್ಯಾಲೆಟ್ ಯುನಿಟ್ನಲ್ಲಿ ನಮೂದು ಮಾಡಲಾಗಿದೆ.
2168 ಮತಗಟ್ಟೆಗಳಿಗೆ 4336 ಬ್ಯಾಲೆಟ್ ಯುನಿಟ್, 2168 ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ಗಳು ಬಳಕೆಯಾಗಿವೆ. ಮುಂಜಾಗೃತವಾಗಿ 947 ಬ್ಯಾಲೆಟ್ ಯುನಿಟ್, 642 ಕಂಟ್ರೋಲ್ ಯುನಿಟ್ ಹಾಗೂ 745 ವಿವಿಪ್ಯಾಟ್ಗಳನ್ನು ಹೆಚ್ಚುವರಿವಾಗಿ ಮೀಸಲು ಇರಿಸಿ ಸದ್ಧಪಡಿಸಿಕೊಳ್ಳಲಾಗಿದೆ.
ಅಗತ್ಯ ಇರುವ ಮತದಾನ ಅಧಿಕಾರಿ ಹಾಗೂ ಸಿಬ್ಬಂದಿ ಬಲಕ್ಕೆ ಅನುಗುಣವಾಗಿ ಶೇ.20 ರಷ್ಟು ಹೆಚ್ಚುವರಿ ಸಿಬ್ಬಂದಿಗೆ ತರಬೇತಿ ನೀಡಿ ಮೀಸಲು ಇರಿಸಲಾಗಿದೆ.