ಮುಖ್ಯ ಸುದ್ದಿ
ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ | ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಎಚ್ಚರಿಕೆ
CHITRADURGA NEWS | 16 MARCH 2024
ಚಿತ್ರದುರ್ಗ: ಬಿಸಿಲಿನ ತಾಪ ದಿನದಿನಕ್ಕೂ ಹೆಚ್ಚಾಗುತ್ತಿದೆ. ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿದೆ. ಹೀಗಿರುವಾಗ ಎರಡು ದಿನಗಳಿಂದ ನಮ್ಮ ಗ್ರಾಮಕ್ಕೆ ವಿದ್ಯುತ್ ನೀಡಿಲ್ಲ. ಮನೆಗಳ ನಿರಂತರ ಜ್ಯೋತಿಗೂ ವಿದ್ಯುತ್ ಅಡಚಣೆ ಉಂಟಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ ಅನ್ನದಾತರು.
ಕ್ಲಿಕ್ ಮಾಡಿ ಓದಿ: https://chitradurganews.com/fixation-of-uniform-rate-for-drilling-of-borewell
ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದೇ, ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರುವ ಪರಿಣಾಮ ಎರಡು ದಿನಗಳಿಂದ ಕೃಷಿಗೆ ವಿದ್ಯುತ್ ಲಭ್ಯವಾಗುತ್ತಿಲ್ಲ. ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಮೀಪದ ಓಬಳಾಪುರ ಗ್ರಾಮದ ಕೃಷಿಕರು ಶುಕ್ರವಾರ ಸಿರಿಗೆರೆಯ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ನಮ್ಮ ಗ್ರಾಮದ ರೈತರ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಅದನ್ನು ಸರಿಪಡಿಸಲು ನಡೆಯುತ್ತಿದ್ದ ಕಾಮಗಾರಿಗೂ ಇಲಾಖೆಯ ಎಂಜಿನಿಯರ್‌ಗಳು ಸಹಕಾರ ನೀಡುತ್ತಿಲ್ಲ. ಗ್ರಾಮಸ್ಥರು ಒತ್ತಾಯಿಸಿದಾಗ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾರೆ. ಮತ್ತೆ ತೊಂದರೆ ಮರುಕಳಿಸುತ್ತಲೇ ಇರುತ್ತದೆ. ಇದನ್ನು ಗಮನಿಸಿ ಕಾಯಂ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: https://chitradurganews.com/49259-rashi-arecanut-price-in-hosanagar-market/
ವಿದ್ಯುತ್ ವಿತರಣಾ ಕೇಂದ್ರದ ಒಳ ಪ್ರವೇಶಿಸಿದ ರೈತರು, ಸರಬರಾಜು ಆಗುತ್ತಿದ್ದ ವಿದ್ಯುತ್ ಫೀಡರ್‌ಗಳನ್ನು ಬಂದ್ ಮಾಡಿಸಿ ಕಚೇರಿಗೆ ಬೀಗ ಹಾಕಿದರು. ಸೀಗೆಹಳ್ಳಿ- ಅಳಗವಾಡಿ–ಓಬಳಾಪುರ ವಿದ್ಯುತ್ ಮಾರ್ಗವನ್ನು ಸೋಮವಾರದೊಳಗೆ ಕಾಯಂ ಆಗಿ ಸರಿಪಡಿಸಬೇಕು. ಇಲ್ಲವಾದರೆ ಮಂಗಳವಾರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.