Connect with us

    DC warning: ನಿರ್ಲಕ್ಷ್ಯ ತೋರಿದರೆ ಎಫ್‌ಐಆರ್‌ | ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

    DC, ADC

    ಮುಖ್ಯ ಸುದ್ದಿ

    DC warning: ನಿರ್ಲಕ್ಷ್ಯ ತೋರಿದರೆ ಎಫ್‌ಐಆರ್‌ | ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 SEPTEMBER 2024
    ಚಿತ್ರದುರ್ಗ: ತ್ಯಾಜ್ಯ ನೀರು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ಬೇಜವಾಬ್ದಾರಿತನ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಕಾರಣಕ್ಕಾಗಿ ಎಫ್‌ಐಆರ್‌ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

    ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ಕಾಮಗಾರಿಗಳ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಸಲಹಾ ಮತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಚಿತ್ರದುರ್ಗ ನಗರದ ಒಳ ಚರಂಡಿ ಜಾಲದ ಮಾರ್ಗಗಳ ನಕ್ಷೆಯನ್ನು ಸಿದ್ದಪಡಿಸಬೇಕು. ವೆಟ್‌ವಲ್‌ (ತೇವ ಬಾವಿ)ಗಳ ಸಾರ್ಮಥ್ಯಕ್ಕೆ ತಕ್ಕಂತೆ ನಗರದಲ್ಲಿನ ಕಲುಷಿತ ನೀರು ವೆಟ್‌ವೆಲ್‌ ಸೇರುತ್ತಿಲ್ಲ. ಇದರ ಬದಲಾಗಿ ನಗರದ ರಸ್ತೆಗಳ ಮೇಲೆಯ ಚರಂಡಿ ನೀರು ಹರಿದಾಡುವ ಪ್ರಸಂಗ ಎದುರಾಗಿದೆ. ಇದು ಸಾರ್ವಜನಿಕ ಸ್ವಾಸ್ಥ್ಯಕ್ಕೆ ಕಂಟಕವಾಗುತ್ತದೆ ಎಂದರು.

    ಕ್ಲಿಕ್ ಮಾಡಿ ಓದಿ: ಬೆಳೆ ಹಾನಿಯಿಂದ ಹೆಚ್ಚಿದ ಸಾಲದ ಹೊರೆ | ರೈತ ಆತ್ಮಹತ್ಯೆ

    ವೆಟ್‍ವೆಲ್ ನಿರ್ಮಿಸುವ ವೇಳೆಯಲ್ಲಿಯೇ ತ್ಯಾಜ್ಯ ನೀರು ವೆಟ್‍ವೆಲ್ ಸೇರುವಂತೆ ಕೊಳಚೆ ನೀರು ಸಂಪರ್ಕ ಜಾಲವನ್ನು ಅಭಿವೃದ್ಧಿ ಪಡಿಸಬೇಕಿತ್ತು. ಆದರೆ ನಗರ ಸಭೆ ಹಾಗೂ ಒಳಚರಂಡಿ ಮಂಡಳಿಯ ಸಮನ್ವಯತೆ ಕೊರತೆಯಿಂದ ವೆಟ್‍ವೆಲ್ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಕೊಳಚೆ ನೀರು ಸೇರುತ್ತಿಲ್ಲ ಎಂದು ತಿಳಿಸಿದರು.

    ವಾರ್ಡ್‍ಗಳ ತ್ಯಾಜ್ಯ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ದೂರು ನೀಡುತ್ತಾರೆ. ನಗರಸಭೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಈ ರೀತಿಯ ವರ್ತನೆಯಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ರಾಜ ಕಾಲುವೆ ಸೇರಿದಂತೆ ಇತರೆ ಕಾಲುವೆ ಪ್ರದೇಶಗಳಲ್ಲಿ ನಗರಸಭೆಯಿಂದ ಸಮೀಕ್ಷೆ ನಡೆಸಿ ನಿಯಮಾನುಸಾರ ಬಫರ್ ಜೋನ್‍ಗಳನ್ನು ಗುರುತಿಸಬೇಕು. ಜಲಮೂಲಗಳ ಬಫರ್ ಜೋನ್‍ಗಳಲ್ಲಿ ಯಾವುದೇ ಕಟ್ಟಡ ನಿರ್ಮಾಣಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.

    ಅಮೃತ್‌ ಯೋಜನೆಯಡಿ, ಮೊಳಕಾಲ್ಮೂರು, ನಾಯಕನಹಟ್ಟಿ, ಹೊಳಲ್ಕೆರೆ ಪಟ್ಟಣದಲ್ಲಿ ಮೇಲ್ಮಟ್ಟದ ಜಲಸಂಗ್ರಹಾಗಾರಗಳನ್ನು ನಿರ್ಮಿಸಲು ಅವಶ್ಯಕತೆ ಇರುವ ಸ್ಥಳವನ್ನು ಮುಖ್ಯಾಧಿಕಾರಿಗಳು ಗುರುತಿಸಿ ಹಸ್ತಾತರಿಸುವ ಕೆಲಸ ಮಾಡಬೇಕು. ಈಗಾಗಲೇ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪೂರ್ಣಗೊಂಡು ಪಾಲನೆ ಮತ್ತು ನಿರ್ವಹಣೆಯ ಅವಧಿ ಮುಗಿದ ಕಾಮಗಾರಿಗಳನ್ನು ಸಂಬಂಧಪಟ್ಟ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಹಸ್ತಾಂತರ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

    ಕ್ಲಿಕ್ ಮಾಡಿ ಓದಿ: ಭದ್ರಾ ಮೇಲ್ದಂಡೆ ಯೋಜನೆ ಅನುದಾನ | ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ

    ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುಮಿತಾ ರಘು, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಮಂಜುಳ ಶ್ರೀಕಾಂತ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಮಂತ ಕುಮಾರ್, ಚಿತ್ರದುರ್ಗ ನಗರ ಸಭೆ ಆಯುಕ್ತೆ ರೇಣುಕಾ.ಎಂ ಸೇರಿದಂತೆ ಇತರೆ ನಗರಸಭೆಗಳ ಪೌರಾಯುಕ್ತರು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top