ಹೊಸದುರ್ಗ
ಬಾಗೂರು ಮೈಲಾರಲಿಂಗೇಶ್ವರ ದೇವಾಲಯ ಲೋಕಾರ್ಪಣೆ | ಭಕ್ತರ ಸಮ್ಮುಖದಲ್ಲಿ ದೋಣಿಸೇವೆ
CHITRADURGA NEWS | 19 FEBRUARY 2024
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ ಮೈಲಾರಲಿಂಗೇಶ್ವರ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ 3 ದಿನ ಧಾರ್ಮಿಕ ವಿಧಿಗಳನ್ವಯ ಸಮಾರಂಭ ಅಚ್ಚುಕಟ್ಟಾಗಿ ನಡೆದವು.
ನಿತ್ಯ 5 ರಿಂದ 6 ಸಾವಿರ ಜನರು ಆಗಮಿಸಿದ್ದರು. ಲಾಡು, ಪಾಯಸವನ್ನು ಭಕ್ತರಿಗೆ ಉಣಬಡಿಸಲಾಯಿತು. ಭಂಡಾರಪ್ರಿಯ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಬಂದವರ ಹಣೆ ತುಂಬಾ ಭಂಡಾರವೇ ರಾರಾಜಿಸುತ್ತಿತ್ತು.
ಭಾನುವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಧುರೆಯ ವಿ.ವಿಜಯಕುಮಾರ್ ನೇತೃತ್ವದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ವಿಧಿಗಳನ್ವಯ ಅದ್ದೂರಿಯಾಗಿ ನಡೆಯಿತು. ಪ್ರಾಣಪ್ರತಿಷ್ಠಾಪನಾ ಹೋಮ, ಪೂರ್ಣಾಹುತಿ ಹೋಮದ ನಂತರ ಬೆಳಿಗ್ಗೆ 9.50ಕ್ಕೆ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಕಳಶಾರೋಹಣ ನೆರವೇರಿಸಿದರು. ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ವೈಭವಯುತವಾಗಿ ನಡೆಯಿತು.
ಕಳಶಾರೋಹಣದ ನಂತರ ದೇವಾಲಯದ ಮುಂಭಾಗದಲ್ಲಿ ದೋಣಿಸೇವೆ ಅದ್ದೂರಿಯಾಗಿ ನಡೆಯಿತು. ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಸಾವಿರಾರು ಜನರು ದೋಣಿಗೆ ಬಾಳೆಹಣ್ಣು ಅರ್ಪಿಸಿದರು, ಕೆಲವರು ಹಾಲು, ತುಪ್ಪವನ್ನು ಅರ್ಪಿಸಿ, ಭಕ್ತಿ ಮೆರೆದರು. ನಂತರ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ದೀಪ ಬೆಳಗಿದ ನಂತರ 40 ಜನ ಗೊರವಯ್ಯರು ದೋಣೆಯಲ್ಲಿ ಸೇವೆ ಮಾಡುವುದನ್ನು ಕಂಡ ಭಕ್ತರು ಏಳುಕೋಟಿ, ಏಳುಕೋಟಿ, ಚಾಂಗಮಲೋ ಎಂದು ಉದ್ಘಾರವೆತ್ತಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮೈಲಾರಲಿಂಗೇಶ್ವರ ಪ್ರಾರಂಭೋತ್ಸವದ ಕಾರ್ಯಕ್ರಮಗಳಲ್ಲಿ ದೋಣಿಸೇವೆ ವಿಶೇಷವಾಗಿತ್ತು.
ಇದನ್ನೂ ಓದಿ: ತರಳಬಾಳು ಹುಣ್ಣಿಮೆ ಆಚರಣೆ | ಸಿರಿಗೆರೆ ಸದ್ಧರ್ಮ ನ್ಯಾಯಪೀಠಕ್ಕೆ ಬಿಡುವು
ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ನೂರೊಂದು ದೇವಾಲಯ ಹೊಂದಿರುವ ಬಾಗೂರಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ದೇವರಿಗೆ ಅಪಾರ ಭಕ್ತರು ಇದ್ದಾರೆ. ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಒಂದು ಪ್ರಾಮುಖ್ಯತೆ ನೀಡಿ, ನಂಬಿ ನಡೆಯಲಾಗುತ್ತಿದೆ ಎಂದು ಹೇಳಿದರು.
ನಮ್ಮ ಪೂರ್ವಜರು ಆಚರಿಸಿದ ಸಂಪ್ರದಾಯಗಳನ್ನು ನಾವು ಮುಂದುವರಿಸಬೇಕು. ಧರ್ಮವನ್ನು ರಕ್ಷಿಸಿದರೆ, ಧರ್ಮವೂ ನಮ್ಮನ್ನು ರಕ್ಷಿಸುತ್ತದೆ ಎಂದರು.
ಸಾಲ ಮಾಡಿ, ಕಷ್ಟದಿಂದ ಹಬ್ಬ ಆಚರಿಸಿ ಎಂದು ಯಾವ ದೇವರೂ ಹೇಳಿಲ್ಲ. ನಿಮ್ಮ ಅಭ್ಯುದಯ ದೇವರಿಗೂ ಪ್ರಿಯವಾಗುತ್ತದೆ. ಸಂಸ್ಕಾರವಿಲ್ಲದಿದ್ದರೆ ವ್ಯಕ್ತಿ ರಾಕ್ಷಸ ರೂಪ ತಾಳುತ್ತಾನೆ. ದುಂದು ವೆಚ್ಚ, ಆಡಂಬರದ ಜೀವನಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಸಂತಸದಿಂದ ಹಬ್ಬಗಳನ್ನು ಆಚರಿಸಬೇಕು. ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಹಬ್ಬ ಹರಿದಿನಗಳಲ್ಲಿ ದೇವರ ಕಾರ್ಯ ಮಾಡುವಾಗ ಗ್ರಾಮಸ್ಥರು ಒಟ್ಟಾಗಿ ಭಾಗವಹಿಸಬೇಕು ಎಂದರು.
ಇದನ್ನೂ ಓದಿ: ಮಠಗಳಲ್ಲಿ ಹೋಮ – ಹವನ ನಾಚಿಕೆಗೇಡಿನ ಸಂಗತಿ| ಚಿಂತಕ ಎಸ್.ಜಿ.ಸಿದ್ದರಾಮಯ್ಯ
ಕೆಪಿಸಿಸಿ ಸದಸ್ಯ ಎಂ.ಪಿ ಶಂಕರ್, ಧರ್ಮದರ್ಶಿ ಎಂ.ಕೆ.ಮಲ್ಲೇಶಪ್ಪ, ಉಪ್ಪಾರ ಸಮುದಾಯದ ತಾಲ್ಲೂಕು ಅಧ್ಯಕ್ಷ ಪಿ.ಕೆ. ಪರಪ್ಪ, ಬಗರ್ ಹುಕುಂ ಸಮಿತಿ ಸದಸ್ಯ ಕೆ. ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ, ಭಗೀರಥ ಸಾಂಸ್ಕೃತಿಕ ನೌಕರರ ಸಂಘದ ಅಧ್ಯಕ್ಷ ಆರ್. ಲಕ್ಷ್ಮಯ್ಯ, ಐಲಾಪುರದ ಕೆ. ಭೈರಲಿಂಗಪ್ಪ, ಉಪನ್ಯಾಸಕ ಸುರೇಶ್ ಕೆ., ಶಿಕ್ಷಕ ರವಿಕುಮಾರ್ ಐಲಾಪುರ, ಸಿಪಿಐ ದಿಲೀಪ್ ಕುಮಾರ್, ರಂಗಸ್ವಾಮಿ ಎಂಜಿನಿಯರ್ ಸುರೇಶ್, ಡಿ.ಜಯಣ್ಣ, ಚನ್ನಗಿರಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಚಂದ್ರಪ್ಪ ಎಂ.ಜಿ., ಭಗೀರಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಮಲ್ಲೇಶಪ್ಪ, ಸಾಹಿತಿ ಬ. ಮೈಲಾರಪ್ಪ ಮಂಟೇನಹಳ್ಳಿ ನವೀನ್, ಬಿ.ವಿ.ನಗರದ ಹರೀಶ್ ಇದ್ದರು.