ಮುಖ್ಯ ಸುದ್ದಿ
ಬಯಲುಸೀಮೆ ಜನರ ದಶಕದ ಕನಸು ನನಸಾಗಿಸಿದ ‘ಮೋದಿ’ | ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಂತರ ರಾಷ್ಟ್ರೀಯ ಸ್ಪರ್ಶ
CHITRADURGA NEWS | 9 JANUARY 2024
ಚಿತ್ರದುರ್ಗ (CHITRADURGA): ಬಯಲು ಸೀಮೆ ಚಿತ್ರದುರ್ಗ ಜನರ ದಶಕದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸಾಗಿಸಿದ್ದಾರೆ. ರೈಲ್ವೆ ನಿಲ್ದಾಣಗಳ ಸ್ಥಿತಿ ಕಾರಣಕ್ಕೆ ಜಿಲ್ಲೆಯಲ್ಲಿ ರೈಲುಗಳು ಸಂಚಾರವನ್ನು ಸಹ ಸಹ ಮರೆತಿದ್ದ ಜನರಿಗೆ ಇದೀಗ ಮೋದಿ ‘ಅಮೃತ‘ ನೀಡಿದ್ದಾರೆ. ಎಲ್ಲ ನಗರಗಳಂತೆ ಕೋಟೆನಾಡಿನವರು ಸಹ ರೈಲಿನಲ್ಲಿ ಸಂತೋಷದಿಂದ ಪಯಣಿಸಲು ಯೋಜನೆ ರೂಪಿಸಿ ಕಾರ್ಯ ಕೈಗೊಂಡಿದ್ದಾರೆ.
ಕಾಮಗಾರಿಯ ಸ್ಪರ್ಶವನ್ನು ಕಾಣದ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೇಲ್ದರ್ಜೆಗೇರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಭೇಟಿ ನೀಡಿ, ಕಾಮಗಾರಿ ಸ್ಥಳ ವೀಕ್ಷಿಸಿ ಮಾತನಾಡಿ, ‘ಚಿತ್ರದುರ್ಗ, ಚಳ್ಳಕೆರೆ ಹಾಗೂ ಚಿಕ್ಕಜಾಜೂರು ರೈಲು ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಅಂದಾಜು ₹16 ಕೋಟಿ ವೆಚ್ಚಕ್ಕೆ ಟೆಂಡರ್ ಕರೆಯಲಾಗಿದೆ’ ಎಂದರು.
ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ದರ ಏರಿಕೆ
‘ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆಯ ಕಾಮಗಾರಿ ಹೊರತುಪಡಿಸಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೂಲ ಸೌಕರ್ಯ ಹಾಗೂ ಆಡಳಿತಾತ್ಮಕ ಕಚೇರಿ ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
‘₹2.36 ಕೋಟಿ ವೆಚ್ಚದಲ್ಲಿ ಚಳ್ಳಕೆರೆ ರೈಲು ಫ್ಲಾಟ್ ಫಾರಂ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೈಸೂರಿನಲ್ಲಿ ನಡೆದ ರೈಲ್ವೆ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಜಿಲ್ಲೆಯ ರೈಲು ನಿಲ್ದಾಣ ಅಭಿವೃದ್ಧಿಗೆ ಸುಮಾರು ₹ 18 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶೀಘ್ರವೇ ಅಮೃತ್ ಯೋಜನೆಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡುವರು’ ಎಂದು ವಿವರಿಸಿದರು.
ಸದ್ಯ ಚಿತ್ರದುರ್ಗ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರಂನಲ್ಲಿ ಮಾತ್ರ ಪ್ರಯಾಣಿಕ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ. 2ನೇ ಫ್ಲಾಟ್ ಫಾರಂ ಇಲ್ಲದ ಕಾರಣ ಓವರ್ ಬ್ರಿಡ್ಜ್ ನಿರ್ಮಿಸಿಲ್ಲ. ಮೂರನೇ ರೈಲ್ವೇ ಹಳಿಯಲ್ಲಿ ಗೂಡ್ಸ್ ರೈಲುಗಳು ಮಾತ್ರ ಕಾರ್ಯಚರಣೆ ನಡೆಸುತ್ತಿವೆ. ನೇರ ರೈಲ್ವೇ ಮಾರ್ಗ ಯೋಜನೆಯಲ್ಲಿ ಸಂಪೂರ್ಣವಾಗಿ ರೈಲ್ವೇ ನಿಲ್ದಾಣವನ್ನು ನಿರ್ಮಾಣ ಮಾಡಲಿದ್ದು, ಆ ಸಂದರ್ಭದಲ್ಲಿ ಎರಡು ಫ್ಲಾಟ್ ಫಾರಂಗಳನ್ನು ನಿರ್ಮಿಸಿ, ಪ್ರಯಾಣಿಕರ ಅನುಕೂಲಕ್ಕೆ ಓವರ್ ಬ್ರಿಡ್ಜ್ ಸೌಲಭ್ಯ ಕಲ್ಪಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದರು.
ಹಳೆಯ ಪಿ.ಬಿ. ರಡ್‌ನಲ್ಲಿ ರೈಲ್ವೇ ಗೇಟ್ ಬಳಿ ಬ್ರಿಡ್ಜ್ ನಿರ್ಮಿಸುವ ಕಾಮಗಾರಿಗೆ ಎನ್.ಓ.ಸಿ ನೀಡುವಂತೆ ರೈಲ್ವೇ ಅಧಿಕಾರಿಗಳು ಪತ್ರ ಬರೆದಿದ್ದು, ಶೀಘ್ರವೇ ಎನ್.ಓ.ಸಿ ನೀಡುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅವರಿಗೆ ಕರೆ ಮಾಡಿ ಸೂಚನೆ ನೀಡಿದರು.
ರೈಲ್ವೆ ಇಲಾಖೆ ಉಪ ವ್ಯವಸ್ಥಾಪಕ ರಾಮಸುಬ್ಬಯ್ಯ, ಡಿವಿಜಿನಲ್ ಕಮರ್ಷಿಯಲ್ ಮ್ಯಾನೇಜರ್ ಲೋಹಿತಾಶ್ವ, ಬ್ರಿಡ್ಜ್ ಡೆಪ್ಯೂಟಿ ಇಂಜಿನಿಯರ್ ಉನ್ನೀಕೃಷ್ಣನ್, ಸಹಾಯಕ ವಿಭಾಗೀಯ ಅಭಿಯಂತರ ನಿತ್ಯಾನಂದ ಸ್ವಾಮಿ, ಟ್ರಾಪಿಕ್ ಇನ್ಸ್‍ಪೆಕ್ಟರ್ ಬಿ.ಹನುಮಂತು, ಸ್ಟೇಷನ್ ಸೂಪರಿಡೆಂಟ್ ಇ.ಮಂಜುನಾಥ್, ಆರ್‍ಪಿಎಫ್ ಎಸ್‍ಐ ಜಯಣ್ಣ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಸೇರಿದಂತೆ ರೈಲ್ವೆ ಇಲಾಖೆ ಸಿಬ್ಬಂದಿ ಇದ್ದರು.