ಮುಖ್ಯ ಸುದ್ದಿ
ಹೈವೇನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಸೂಚನೆ | ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಸಮಸ್ಯೆ ಕುರಿತು ಚರ್ಚೆ
CHITRADURGA | 8 JANUARY 2024
ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ, ಗಿರಿಯಮ್ಮನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ಹೊಟ್ಟೆಪ್ಪನಹಳ್ಳಿ ಬಳಿ ಸಾರ್ವಜನಿಕರು ಹೆದ್ದಾರಿ ದಾಟಲು ಓವರ್ ಬ್ರಿಡ್ಜ್ (over bridge) ಮಾಡುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.
ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೇತೃತ್ವದಲ್ಲಿ ಸೋಮವಾರ ನಡೆದ ದಿಶಾ ಸಭೆಯಲ್ಲಿ ಈ ಬಗ್ಗೆ ವಿವರವಾದ ಚರ್ಚೆ ನಡೆಯಿತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಅನೇಕ ಗ್ರಾಮಗಳನ್ನು ವಿಭಜಿಸಿಕೊಂಡು ಈ ಹೆದ್ದಾರಿ ಹೋಗಿದೆ.
ಇದನ್ನೂ ಓದಿ: ತನಿಖಾ ತಂಡದ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ
ಇದರಿಂದಾಗಿ ಊರುಗಳಲ್ಲಿ ಹೆದ್ದಾರಿ ದಾಟಿಯೇ ಅತ್ತಿಂದಿತ್ತ ಓಡಾಡುವಂತಾಗಿದೆ. ಬಿ.ಜಿ.ಕೆರೆಯಲ್ಲಿ ಶಾಲಾ ಮಕ್ಕಳು ಕೂಡಾ ಹೆದ್ದಾರಿ ದಾಟಿ ಹೋಗಬೇಕಾಗಿದೆ. ಆದರೆ, ರಸ್ತೆ ದಾಟಿ ಹೋಗಲು ಅಂಡರ್‍ಪಾಸ್, ಸ್ಕೈವಾಕ್ ಅಥವಾ ಮೇಲ್ಸೇತುವೆ ವ್ಯವಸ್ಥೆ ಇಲ್ಲದೆ ವಾಹನಗಳು ಹೋಗುವಾಗಲೇ ರಸ್ತೆ ದಾಟುವ ಪರಿಸ್ಥಿತಿಯಿದೆ.
ಈ ಬಗ್ಗೆ ಸಾರ್ವಜನಿಕರು ಅನೇಕ ಸಲ ಪ್ರತಿಭಟನೆ ನಡೆಸಿದ್ದರು. ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಈ ಸಂಬಂಧ ಸಚಿವ ನಾರಾಯಣಸ್ವಾಮಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಕೂಡಾ ಈ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬರುತ್ತಿವೆ. ತಕ್ಷಣ ಅಲ್ಲಿ ರಸ್ತೆ ದಾಟಲು ಅಂಡರ್‍ಪಾಸ್ ಮಾಡಿ, ಅಂಡರ್‍ಪಾಸ್ ಆಗುವವರೆಗೆ ಸ್ಕೈವಾಕ್ ಅಳವಡಿಸಿ ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಈ ಹೆದ್ದಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಪರಿಶೀಲನಾ ಸಭೆ ನಡೆಸಿದ್ದೇನೆ. ಬಿ.ಜಿ.ಕೆರೆ ಬಳಿ ಒಂದೇ ಜಾಗದಲ್ಲಿ ಕಳೆದ ಒಂದು ವರ್ಷದಲ್ಲಿ 6 ಜನ ಸ್ಥಳೀಯರು ಮೃತಪಟ್ಟಿದ್ದಾರೆ.
ಪ್ರತಿ ಸಲ ಅಪಘಾತ ನಡೆದಾಗಲೂ ಜನ ಹೆದ್ದಾರಿ ತಡೆದು ಗಲಾಟೆ ಮಾಡುತ್ತಾರೆ. ಈ ಸಂದರ್ಭದಲ್ಲಿ ನಿಯಂತ್ರಣ ಮಾಡಲು ಹೋದಾಗ ಜನ ಕೇಳುವ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವೇ ಇಲ್ಲ. ಅಲ್ಲಿ ರಸ್ತೆ ದಾಟಲು ವ್ಯವಸ್ಥೆಯೇ ಇಲ್ಲ ಎಂದರು.
ಒಂದು ಜಾಗದಲ್ಲಿ ನಡೆಯುತ್ತಿರುವ ಅಪಘಾತಗಳ ನಿಯಂತ್ರಣಕ್ಕಾಗಿ ಒಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ಆದ್ದರಿಂದ ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಅಪಘಾತಗಳಾಗದಂತೆ ತಡೆಯಿರಿ ಎಂದು ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಅಂಡರ್ ಪಾಸ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ರಸ್ತೆ ದಾಟಲು ಓವರ್ ಬ್ರಿಡ್ಜ್ ಮಾಡುತ್ತೇವೆ. ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ
ಈ ವೇಳೆ ಎಸ್ಪಿ ವಾಹನಗಳು ಕೂಡಾ ಆಕಡೆ-ಈಕಡೆ ಓಡಾಡಬೇಕಾಗುತ್ತದೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಬೇಕಾಗುತ್ತದೆ ಎಂದರು.
ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಬೈಕ್ ಕೂಡಾ ಓವರ್ ಬ್ರಿಡ್ಜ್ ಮೇಲೆ ಓಡಾಡುವಂತೆ ಅಗಲವಾಗಿ ನಿರ್ಮಾಣ ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಇದು ತುಂಬಾ ಜರೂರಾಗಿ ಆಗಬೇಕಾದ ಕೆಲಸ. ಆದ್ದರಿಂದ ಎರಡು ತಿಂಗಳ ಒಳಗಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಚಿತ್ರದುರ್ಗ ನಗರದ ಪಿಳ್ಳೆಕೇರೆನಹಳ್ಳಿ ಬಳಿ ಕೂಡಾ ಶಾಲಾ ಮಕ್ಕಳು ಎರಡೂ ಕಡೆಗೆ ಓಡಾಡುತ್ತಾರೆ. ಇಲ್ಲಿ ಎರಡೂ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿಯೂ ಒಂದು ಅಂಡರ್‍ಪಾಸ್ ನಿರ್ಮಾಣ ಮಾಡಿ ಎಂದು ಡಿಸಿ ದಿವ್ಯಪ್ರಭು ಸೂಚಿಸಿದರು.
ಸಚಿವ ಎ.ನಾರಾಯಣಸ್ವಾಮಿ ಈ ಎಲ್ಲಾ ಅಂಶಗಳನ್ನು ದಾಖಲು ಮಾಡಲು ಮಾಡಲಾಗುತ್ತಿದೆ. ಮುಂದಿನ ಸಭೆಯೊಳಗೆ ಮುಗಿಯಬೇಕು ಎಂದರು.