ಮುಖ್ಯ ಸುದ್ದಿ
ರೈತರಿಗೆ ಶುಭಸುದ್ದಿ | 2 ತಿಂಗಳಲ್ಲಿ 6640 ಕೃಷಿ ಪಂಪ್ಸೆಟ್ ಸಕ್ರಮ | ಬೆಸ್ಕಾಂ ಅಧಿಕಾರಿಗಳ ಭರವಸೆ
CHITRADURGA NEWS | 7 JANUARY 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಬೆಸ್ಕಾಂ ಅಧಿಕಾರಿಗಳು ಶುಭ ಸುದ್ದಿ ಕೊಟ್ಟಿದ್ದಾರೆ.
2024 ಮಾರ್ಚ್ ಅಂತ್ಯದ ವೇಳೆಗೆ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ ರೈತರ 6640 ಕೃಷಿ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬೆಸ್ಕಾಂ(BESCOM) ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (KPTCL) ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಡಕೆ ಧಾರಣೆ | ವಾರಾಂತ್ಯ ಶನಿವಾರದ ಅಡಿಕೆ ವಹಿವಾಟು
6640 ಕೃಷಿ ಪಂಪ್ಸೆಟ್ಗಳ ಅಕ್ರಮ ಮಾಡಲು 133 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮಾರ್ಚ್ ಅಂತ್ಯದ ಒಳಗಾಗಿ ಜಿಲ್ಲೆಯಲ್ಲಿರುವ 6640 ಅಕ್ರಮ ಕೃಷಿ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಲಾಗುತ್ತದೆ.
ಇದರಿಂದಾಗಿ 2020–21ರಿಂದ ಸಕ್ರಮಕ್ಕೆ ಬಾಕಿ ಇದ್ದ ಕೃಷಿ ಪಂಪ್ಸೆಟ್ಗಳ ಪೈಕಿ ಒಂದೇ ಹಂತದಲ್ಲಿ ಅರ್ಧದಷ್ಟು ಪಂಪ್ಸೆಟ್ಗಳು ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಿವೆ.
2023 ಸೆಪ್ಟೆಂಬರ್ವರೆಗೆ ಜಿಲ್ಲೆಯಲ್ಲಿ 13,065 ಕೃಷಿ ಪಂಪ್ಸೆಟ್ ಸಕ್ರಮಕ್ಕೆ ರೈತರಿಂದ ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ 6,640 ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶವಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ.
ಇನ್ನೂ 7,459 ಕೃಷಿ ಪಂಪ್ಸೆಟ್ಗಳು ಸಕ್ರಮಕ್ಕೆ ಬಾಕಿ ಉಳಿಯಲಿದ್ದು, ಮತ್ತೊಂದು ಹಂತದಲ್ಲಿ ಇವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
ಅರ್ಜಿಯ ಹಿರಿತನದ (ಸೀನಿಯಾರಿಟಿ) ಆಧಾರದ ಮೇಲೆ ಕೃಷಿ ಪಂಪ್ಸೆಟ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಸಭೆಗೆ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬೆಸ್ಕಾಂ ಅಧಿಕಾರಿಗಳ ಈ ಆಶ್ವಾಸನೆಗೆ ಅನುಮಾನ ವ್ಯಕ್ತಪಡಿಸಿದ್ದು, ಕೃಷಿ ಪಂಪ್ಸೆಟ್ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷದಿಂದ ನಾನೇ ಕಾಯುತ್ತಿದ್ದೇನೆ. ಅರ್ಜಿಯ ಹಿರಿತನದ ಆಧಾರದ ಮೇಲೆ ಅಧಿಕಾರಿಗಳು ಆಯ್ಕೆ ಮಾಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಮಠಾಧೀಶರು
ಆದರೆ, ಈಗ ಅನುದಾನ ಲಭ್ಯವಾಗಿದ್ದು, ಮಾರ್ಚ್ ಅಂತ್ಯದ ಹೊತ್ತಿಗೆ ಅರ್ಹತೆ ಪಡೆದ ಎಲ್ಲ ಕೃಷಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, 2018-19 ರಿಂದ ಕೃಷಿ ಪಂಪ್ಸೆಟ್ಗಳ ಅಕ್ರಮ ಸಕ್ರಮಕ್ಕೆ ಸರಿಯಾದ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಸಮಸ್ಯೆಯಾಗಿದೆ ಎಂದರು.
ಆಧ್ಯತೆಯ ಮೇರೆಗೆ ನಿರಂತರ ಜ್ಯೋತಿ ಸಂಪರ್ಕ:
ನಿರಂತರ ಜ್ಯೋತಿ ಯೋಜನೆಯಿಂದ ಹೊರಗುಳಿದ ಗ್ರಾಮ, ಹಟ್ಟಿ ಹಾಗೂ ಜನವಸತಿ ಪ್ರದೇಶಗಳನ್ನು ಪತ್ತೆ ಮಾಡಿ ಹೊಸ ಪ್ರಸ್ತಾವ ಸಲ್ಲಿಸಲು ‘ಬೆಸ್ಕಾಂ’ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬಿಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದ್ಯತೆಯ ಮೇರೆಗೆ ಸೌಲಭ್ಯ ಕಲ್ಪಿಸುವಾಗಿ ಆಶ್ವಾಸನೆ ನೀಡಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ತಾಲ್ಲೂಕಿನ ಹಲವು ಗ್ರಾಮಗಳು ನಿರಂತರ ಜ್ಯೋತಿಯಿಂದ ಹೊರಗುಳಿದಿವೆ. ಈ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಜನರು ಒತ್ತಡ ಹೇರುತ್ತಿದ್ದಾರೆ. ತಾಲ್ಲೂಕಿನ 12 ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಿದರೂ ಅನುμÁ್ಠನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಳ್ಳಕೆರೆ ನಗರಕ್ಕೆ 65/11 ಕೆ.ವಿ. ಸಾಮಥ್ರ್ಯದ ವಿದ್ಯುತ್ ಕೇಂದ್ರವಿದೆ. ಇತ್ತೀಚೆಗೆ 200ಕ್ಕೂ ಹೆಚ್ಚು ನೂತನ ಬಡಾವಣೆ ನಿರ್ಮಾಣವಾಗಿದ್ದು, ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇನ್ನೂ ಎರಡು ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ ತಿಪ್ಪಾರೆಡ್ಡಿಹಳ್ಳಿ ಹಾಗೂ ನನ್ನಿವಾಳದ ಸಮೀಪ ಸ್ಥಳ ಗುರುತಿಸಲಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲ ಎಂದು ರಘುಮೂರ್ತಿ ಸೂಚನೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಹಲವು ಕಡೆ ಪೂರ್ಣಗೊಳ್ಳುವ ಹಂತ ತಲುಪಿದೆ. ನಾಲೆಗಳಲ್ಲಿ ನೀರು ಹರಿಯಲು ಪಂಪ್ಹೌಸ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅವಶ್ಯಕತೆಯಿದೆ. 22 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದ್ದು, ಸಿದ್ಧತೆ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಕೊನೆಗಳಿಗೆಯಲ್ಲಿ ವಿದ್ಯುತ್ ನೆಪ ಮುಂದಿಟ್ಟರೆ ರೈತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಕ್ರಿಯಿಸಿದ ಮಹಾಂತೇಶ್ ಬೀಳಗಿ, ಭದ್ರಾ ಮೇಲ್ದಂಡೆ ಬಹುನಿರೀಕ್ಷಿತ ಯೋಜನೆ. ನೀರು ಹರಿಯುವ ಹಂತದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಾರದು. ನೀರಾವರಿ ಇಲಾಖೆಯ ಎಂಜಿನಿಯರುಗಳೊಂದಿಗೆ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕಳಪೆ ತಂತಿ ಬಳಸಲಾಗುತ್ತಿದೆ. ಇದು ಧೀರ್ಘ ಕಾಲ ಉಳಿಯುವುದಿಲ್ಲ. ಇದರಿಂದ ಮುಂದೆ ರೈತರು ಸಮಸ್ಯೆಗೆ ಸಿಲುಕುತ್ತಾರೆ. ಆದ್ದರಿಂದ ಗುಣಮಟ್ಟದ ತಂತಿ ಬಳಕೆ ಮಾಡಿ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು ಸಭೆಯಲ್ಲಿದ್ದರು.