Connect with us

    ನ್ಯಾಯ ಪೀಠದ ಮುಂದೆ ದೇವರು; ಜಾರಿಯಾಯ್ತು ಸರ್ಚ್ ವಾರೆಂಟ್

    Search Warrant

    ತಾಲೂಕು

    ನ್ಯಾಯ ಪೀಠದ ಮುಂದೆ ದೇವರು; ಜಾರಿಯಾಯ್ತು ಸರ್ಚ್ ವಾರೆಂಟ್

    ಚಿತ್ರದುರ್ಗ ನ್ಯೂಸ್.ಕಾಂ

    ಆಡಳಿತ ಮತ್ತು ವಾರಸುದಾರಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ವಿವಾದಕ್ಕೆ ಕಾರಣವಾಗಿದ್ದ ದೇವರಿಗೆ ಇದೀಗ ಸರ್ಚ್‌ ವಾರೆಂಟ್‌ ಜಾರಿಯಾಗಿದೆ. ಹೊಸದುರ್ಗ ತಾಲೂಕಿನ ದೊಡ್ಡತೇಕಲವಟ್ಟಿ- ಸಿರಿಗೊಂಡನಹಳ್ಳಿ ನಿಟ್ಟಿನ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ದೇವಸ್ಥಾನ ಚರ್ಚೆಗೆ ಗ್ರಾಸವಾಗಿದೆ.

    ದೊಡ್ಡತೇಕಲವಟ್ಟಿ ಗ್ರಾಮದ ದೇವಾಲಯದ ದೇವರ ಮೂರ್ತಿಯನ್ನು ಹೊರಕ್ಕೆ ತೆಗೆದುಕೊಂಡು ಹೋದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್‌ ಕಮಿಷನರ್‌, ದೇವರ ಮೂರ್ತಿ ಇದೆಯೋ, ಇಲ್ಲವೋ ಎಂಬುದನ್ನು ಬುಧವಾರ ರಾತ್ರಿ ಪರಿಶೀಲಿಸಿತು. ದೇವರ ಸರ್ಚ್ ವಾರೆಂಟ್ ಅನ್ನು ಹೊಸದುರ್ಗ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಪೀಠವು ಜಾರಿ ಮಾಡಿತ್ತು.

    ಗ್ರಾಮದಲ್ಲಿ ಕುರುಬ ಸಮುದಾಯದ ಕಂಸಾಗರ ಬೀರಲಿಂಗೇಶ್ವರ ದೇವರ ಪುರಾತನ ದೇವಾಲಯವಿದ್ದು, ದಶಕಗಳ ಹಿಂದೆ ಅದರ ಆಡಳಿತ ಮತ್ತು ವಾರಸುದಾರಿಕೆ ವಿಚಾರವಾಗಿ ಸಮುದಾಯದ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿತ್ತು. ದೊಡ್ಡತೇಕಲವಟ್ಟಿ ಹಾಗೂ ಸಿರಿಗೊಂಡನಹಳ್ಳಿ ಗ್ರಾಮಗಳ ಕುರುಬ ಸಮುದಾಯಕ್ಕೆ ದೇವರು ಸೇರಿದೆ ಎಂದು ಹೊಸದುರ್ಗ ನ್ಯಾಯಾಲಯ 1982ರಲ್ಲಿ ಆದೇಶ ನೀಡಿತ್ತು.

    ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಾಟ; ರೋಗಿಗಳ ಪರದಾಟ

    ಈ ನಡುವೆ 2015ರಲ್ಲಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿದ್ದ ಇಂಡೆಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ ಸಮಾರಂಭಕ್ಕೆ ಒಂದು ಗುಂಪಿನವರು ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಕರೆದುಕೊಂಡು ಹೋಗಿದ್ದರು. ನೂತನ ಈ ದೇವಸ್ಥಾನದ ಪ್ರಾರಂಭೋತ್ಸವ ಧಾರ್ಮಿಕ ಸಮಾರಂಭ ಮುಕ್ತಾಯವಾದರೂ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಮೂಲಸ್ಥಾನಕ್ಕೆ ಕಳಿಸದೇ, ನೂತನ ಇಂಡೆಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿಯೇ ಕೂರಿಸಿಕೊಂಡಿದ್ದರು. ಇದರಿಂದ ಬೇಸರಗೊಂಡ ಇನ್ನೊಂದು ಗುಂಪಿನವರು ತಕರಾರು ತೆಗೆದಿದ್ದರಿಂದ ವಿವಾದ ತೀವ್ರ ಉಲ್ಬಣಗೊಂಡಿತು. ನ್ಯಾಯಕ್ಕಾಗಿ ಭಕ್ತರು ಹೊಸದುರ್ಗ ಜೆಎಂಎಫ್ ಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

    ಈ ಕೋರ್ಟಿನಿಂದ ಹೈಕೋರ್ಟ್‌ವರೆಗೂ ಅಫೀಲು ಆಗಿದ್ದರು, ಇದರ ಪರಿಣಾಮವಾಗಿ ಹೈಕೋರ್ಟ್ ಏಕಸದಸ್ಯ ಪೀಠವು 2020ರಲ್ಲಿ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿ ಯಾವ ದೇವಸ್ಥಾನದಲ್ಲಿ ಇರಬೇಕು ಎಂಬ ಬಗ್ಗೆ ಎರಡು ಗುಂಪಿನವರು ಪರಸ್ಪರ ಸಂಧಾನ ಮಾಡಿಕೊಂಡು, ವಿವಾದ ಇತ್ಯರ್ಥ ಮಾಡಿಕೊಳ್ಳುವವರೆಗೂ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ನೂತನ ಇಂಡೆಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸಬೇಕು. ಯಾವುದೇ ಧಾರ್ಮಿಕ ಕಾರ್ಯಗಳಿಗೆ ಹೊರಗಡೆ ಎಲ್ಲಿಯೂ, ಯಾವುದೇ ಕಾರಣಕ್ಕೂ ದೇವರನ್ನು ಕರೆದುಕೊಂಡು ಹೋಗಬಾರದು ಎಂದು ಹೈಕೋರ್ಟ್ ಆದೇಶ ಮಾಡಿತ್ತು.

    ಈ ಆದೇಶದ ಹಿನ್ನಲೆಯಲ್ಲಿ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯು ನೂತನ ಇಂಡೆಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿಯೇ ಇತ್ತು. ಆದರೆ, ಹೈಕೊರ್ಟ್ ಅದೇಶ ಉಲ್ಲಂಘಿಸಿ ನ.28ರ ಬೆಳಿಗ್ಗೆ ಈ ದೇವಸ್ಥಾನದಲ್ಲಿದ್ದ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪೂಜಾರಿಗಳು ಎಲ್ಲಿಯೋ ಹೊರಗಡೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಎಂಬ ಸಂಶಯದ ಹಿನ್ನೆಲೆಯಲ್ಲಿ ದೇವರ ಹುಡುಕಿ ದೇವಸ್ಥಾನಕ್ಕೆ ತಂದಿಡಬೇಕು ಎಂದು ಗ್ರಾಮದ ಎಂ.ಬಸವರಾಜು ಎಂಬಾತ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ದೂರಿನ ಹಿನ್ನೆಲೆಯಲ್ಲಿ ಶ್ರೀರಾಂಪುರ ಠಾಣೆ ಪಿಎಸ್‌ಐ ಅವರು ಇಂಡೆಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸ್ಥಳಕ್ಕೆ ಬಂದು ಈ ದೇವಸ್ಥಾನದ ಒಳಗೆ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿ ಇದೆಯೋ, ಇಲ್ಲವೋ ಎಂಬ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಯಾರು ಪೊಲೀಸರ ತನಿಖೆ ಕಾರ್ಯಕ್ಕೆ ಸಹಕರಿಸಲಿಲ್ಲ. ಇದರ ಪರಿಣಾಮವಾಗಿ ಹೊಸದುರ್ಗ ಜೆಎಂಎಫ್ ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್.ಶಿವರಾಜು ಅವರಿದ್ದ ನ್ಯಾಯಪೀಠದಲ್ಲಿ ವಕೀಲರಾದ ಎಚ್‌.ಆರ್.ಷಡಾಕ್ಷರಪ್ಪ ಅವರು ಹೈಕೊರ್ಟ್ ಅದೇಶ ಉಲ್ಲಂಘಿಸಿ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಎಲ್ಲಿಯೋ ಹೊರಗಡೆ ತೆಗೆದುಕೊಂಡು ಹೋಗಿದ್ದಾರೆ ಎಂದು ವಾದ ಮಂಡಿಸಿ, ಈ ಬಗ್ಗೆ ಸರ್ಚ್ ವಾರೆಂಟ್ ಜಾರಿ ಮಾಡಬೇಕು ಎಂದು ಹೈಕೋರ್ಟ್ ಆದೇಶದ ಪರವಾಗಿ ಮನವಿ ಸಲ್ಲಿಸಿದರು.

    ವಾದ ಪರಿಶೀಲಿಸಿದ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್.ಶಿವರಾಜು ಅವರು ಸರ್ಚ್ ವಾರೆಂಟ್ ಜಾರಿ ಮಾಡಿ, ತನಿಖೆಗಾಗಿ ವಕೀಲರಾದ ಸಿದ್ದಲಿಂಗದೇವರು ಹಾಗೂ ಕೆ.ಎಂ.ಸುಮಾ ಅವರನ್ನು ಕೋರ್ಟ್ ಕಮಿಷನರ್ ಆಗಿ ನೇಮಕ ಮಾಡಿದರು.

    ಈ ಹಿನ್ನಲೆಯಲ್ಲಿ ಸರ್ಚ್ ವಾರೆಂಟ್ ಕೋರ್ಟ್ ಕಮಿಷನರ್ ಆಗಿ ನೇಮಕವಾದ ವಕೀಲರಾದ ಸಿದ್ದಲಿಂಗದೇವರು ಹಾಗೂ ಕೆ.ಎಂ.ಸುಮಾ ಅವರು ಇಂಡೆಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಬಳಿಗೆ ಬುಧವಾರ ಸಂಜೆ ಭೇಟಿ ನೀಡಿ, ದೇವಸ್ಥಾನ ಸಮಿತಿಯವರೊಂದಿಗೆ ಸುಮಾರು 3 ತಾಸು ತನಿಖೆ ಮಾಡಿ, ಕೊನೆಗೆ ದೇವಸ್ಥಾನದ ಬೀಗ ತೆಗೆಸಿ ಪರಿಶೀಲಿಸಿದಾಗ ಒಳಗೆ ಇಂಡೆಮಲ್ಲಿಕಾರ್ಜುನಸ್ವಾಮಿ ದೇವರು ಮಾತ್ರವಿದ್ದು, ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿ ಇಲ್ಲದಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

    ಕೆಲ ವರ್ಷಗಳಿಂದಲೂ ದೊಡ್ಡತೇಕಲವಟ್ಟಿ ಗ್ರಾಮದೊಳಗಿನ ದೇವಸ್ಥಾನದಲ್ಲಿ ನೆಲೆಸಿದ್ದ ಶ್ರೀ ಕಂಸಾಗರ ಬೀರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿ ಯಾವ ದೇವಸ್ಥಾನದಲ್ಲಿ ಇರಬೇಕು ಎಂಬ ವಿಚಾರವಾಗಿ ಗ್ರಾಮದ ಭಕ್ತರಲ್ಲಿಯೇ ಎರಡು ಗುಂಪುಗಳು ಸೃಷ್ಟಿಯಾಗಿದ್ದವು. ಒಂದು ಗುಂಪು ಗ್ರಾಮದ ಹಳೆಯ ದೇವಸ್ಥಾನದಲ್ಲಿ ಇರಬೇಕು ಅಂತ. ಇನ್ನೊಂದು ಗುಂಪು ಮತ್ತೊಂದು ಹೊಸ ದೇವಸ್ಥಾನದಲ್ಲಿ ಇರಬೇಕು ಎಂದು ಒತ್ತಾಯಿಸಿದ್ದರ ಪರಿಣಾಮ ತೀವ್ರ ವಿವಾದ ಸೃಷ್ಟಿಯಾಗಿತ್ತು.

    Click to comment

    Leave a Reply

    Your email address will not be published. Required fields are marked *

    More in ತಾಲೂಕು

    To Top