ಮುಖ್ಯ ಸುದ್ದಿ
ರೇಣುಕಾಸ್ವಾಮಿ ಕುಟುಂಬದ ಜತೆ ನಾವಿದ್ದೇವೆ | ಚಲನಚಿತ್ರ ವಾಣಿಜ್ಯ ಮಂಡಳಿ
CHITRADURGA NEWS | 15 JUNE 2024
ಚಿತ್ರದುರ್ಗ: ದೇಶದಲ್ಲೇ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಶನಿವಾರ ನಗರದ ವಿಆರ್‌ಎಸ್ ಬಡಾವಣೆ ನಿವಾಸಿ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು. ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ.ಸುರೇಶ್, ಸಾರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ 15ಕ್ಕೂ ಹೆಚ್ಚು ಸದಸ್ಯರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಕ್ಕೆ ಸ್ವಾಂತನ ಹೇಳಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ.ಸುರೇಶ್, ‘ಇದು ಅತ್ಯಂತ ದುಃಖಕರ ಸುದ್ದಿಗೋಷ್ಠಿ. ಐತಿಹಾಸಿಕ ಚಿತ್ರದುರ್ಗದಲ್ಲಿ ಇಂತಹ ಕಾರ್ಯಕ್ರಮ ಮಾಡಲು ಬೇಸರವಾಗುತ್ತದೆ. ಪೊಲೀಸರು ಉತ್ತಮವಾಗಿ ತನಿಖೆ ಮಾಡುತ್ತಿದ್ದಾರೆ. ಇಲ್ಲಿ ಯಾರೂ ಮಧ್ಯ ಪ್ರವೇಶವೂ ನಡೆದಿಲ್ಲ’ ಎಂದರು.
‘ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರವನ್ನು ಕಲಾವಿದರ, ವಿತರಕರ, ನಿರ್ದೇಶಕರ ಸಂಘ ಎಲ್ಲರೂ ನಿರ್ಧಾರ ಮಾಡಬೇಕು. ಆದರೆ ತನಿಖೆಗೆ ಮೊದಲೇ ನಾವು ಎನನ್ನೂ ಹೇಳಲು ಆಗುವುದಿಲ್ಲ. ಎಲ್ಲರೂ ಸೇರಿ ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಭೇಟಿ | ಮಹತ್ವದ ಘೋಷಣೆ ಸಾಧ್ಯತೆ
‘ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು ಇದೆ. ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ಮಹಾ ಅಪರಾಧ. ಅಭಿಮಾನಿಗಳಿಗೆ ಸಲಹೆನೀಡಿ, ಆದರೆ ಪ್ರಚೋದನೆ ಮಾಡಿ ಇಂತಹ ಕೆಲಸ ಯಾರು ಮಾಡಬೇಡಿ. ಚಿತ್ರರಂಗ ನಂಬಿದ ಸಾವಿರಾರು ಜನ ಇದ್ದಾರೆ. ಇಂತಹ ಕೆಲಸ ಮಾಡಬೇಡಿ’ ಎಂದು ನಾಯಕ ನಟರಿಗೆ ಮನವಿ ಮಾಡಿದರು.
‘ಮಂಡಳಿಯಿಂದ ಸಾಂಕೇತಿಕವಾಗಿ 5 ಲಕ್ಷ ಕೊಟ್ಟಿದ್ದೇವೆ. ಆದರೆ ಮಗನನ್ನು ಕೊಡಲು ನಮ್ಮಿಂದ ಸಾಧ್ಯವಿಲ್ಲ. ಅವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಇದೆ. ಕೋವಿಡ್ ನಂತರ ಚಿತ್ರರಂಗ ಚೇತರಿಸಿಕೊಂಡಿಲ್ಲ. ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ಬಗ್ಗೆ ದೂಷಣೆ ಮಾಡದೆ ಸಹಕಾರ ನೀಡಿ. 2011 ರಲ್ಲಿ ದರ್ಶನ್ ಮನೆ ಗಲಾಟೆ ಆದಾಗ ಚಿತ್ರರಂಗದ ಹಿರಿಯರು ಕುಳಿತು ಸರಿಪಡಿಸಿದ್ದರು. ಆದರೆ, ಈ ಘಟನೆ ಅಂಥದ್ದಲ್ಲ’ ಎಂದು ತಿಳಿಸಿದರು.
ಹಿರಿಯರಾದ ಸಾ.ರಾ.ಗೋವಿಂದು ಮಾತನಾಡಿ, ‘ರಾಜಕುಮಾರ್ ಅಭಿಮಾನಿಗಳ ಸಂಘ ಮಾಡಿದಾಗ ಚಿತ್ರದುರ್ಗದಿಂದ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಆದರೆ ಇಂದು ತುಂಬಾ ನೋವಾಗುತ್ತಿದೆ. ನಾವು ರೇಣುಕಸ್ವಾಮಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಬಂದಿದ್ದೇವೆ. ಇನ್ಯಾವುದೇ ರಾಜಿ ಸೂತ್ರಕ್ಕೆ ನಾವು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಮಗ ಪೊಲೀಸ್ ವಶಕ್ಕೆ | ತಂದೆ ಲೋ ಬಿಪಿಯಿಂದ ಸಾವು
‘ರೇಣುಕಾಸ್ವಾಮಿ ತಪ್ಪು ಮಾಡಿರಬಹುದು, ಎಲ್ಲರು ತಪ್ಪು ಮಾಡುತ್ತಾರೆ. ಆದರೆ, ಅಷ್ಟು ವಿಕಾರವಾಗಿ ಕೊಲೆ ಮಾಡಿರುವುದನ್ನು ಯಾರು ಸಹಿಸುವುದಿಲ್ಲ. ಒಬ್ಬರಿಂದ ಇಡೀ ಚಿತ್ರರಂಗ ತಲೆತಗ್ಗಿಸುವಂತೆಯಾಗಿದೆ. ರಾಜಕುಮಾರ, ವಿಷ್ಣು, ಅಂಬರೀಶ್, ಶಂಕರನಾಗ್ ಇದ್ದಾಗ ಚಿತ್ರರಂಗಕ್ಕೆ ಘನತೆ ಇತ್ತು. ಆದರೆ ,ಇತ್ತೀಚೆಗೆ ಕೆಲ ಯುವ ನಟರು ದಾರಿ ತಪ್ಪುತ್ತಿರುವುದು ಬೇಸರ ತಂದಿದೆ’ ಎಂದರು.
‘ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸುತ್ತಿದೆ. ನಿಜಕ್ಕೂ ಅವರ ಕಾರ್ಯ ತೃಪ್ತಿ ತಂದಿದೆ. ಚಿತ್ರೋದ್ಯಮದ ಯಾರೂ ಕೂಡಾ ಮಧ್ಯೆ ಪ್ರವೇಶ ಮಾಡುವುದು ಬೇಡ. ತಪ್ಪು ಮಾಡಿದವರು ಅನುಭವಿಸುತ್ತಾರೆ. ಮಗನ ಸಾವಿಗೆ ನ್ಯಾಯ ಕೊಡಿ ಎಂದಷ್ಟೇ ಅವರ ತಾಯಿ ಕೇಳಿದ್ದಾರೆ. ಎಲ್ಲಿಯೂ ಬೇರೆ ಯಾವುದೇ ಬೇಡಿಕೆ ಇಟ್ಟಿಲ್ಲ’ ಎಂದು ತಿಳಿಸಿದರು.
ಹಿರಿಯರಾದ ಕೆ.ವಿ.ಚಂದ್ರಶೇಖರ್ ಮಾತನಾಡಿ, ‘71-72 ರಲ್ಲಿ ಚಿತ್ರದುರ್ಗದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡ ಹೋದ ಹಿನ್ನೆಲೆ ಚಿತ್ರರಂಗಕ್ಕಿದೆ. ಆದರೆ, ಈಗ ಕಳಂಕ ತರುವ ಕೆಲಸ ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಮನಪರಿವರ್ತನೆ ಆಗಿ ಒಳ್ಳೆಯವರಾಗಲಿ. ಈ ಕರಾಳ ಛಾಯೆ ಅಳಿದು ಚಿತ್ರದುರ್ಗದ ವೈಭವ ಮತ್ತೆ ವಿಜೃಂಭಿಸಲಿ’ ಎಂದರು.
ಹಿರಿಯ ನಿರ್ಮಾಪಕರಾದ ಚಿನ್ನಪ್ಪಗೌಡ್ರು ಮಾತನಾಡಿ, ‘ಇಡೀ ಚಿತ್ರರಂಗ ಹಾಗೂ ಕರ್ನಾಟಕಕ್ಕೆ ನೋವಾಗಿದೆ. ಮನುಷ್ಯ ವಿವೇಕ, ಸಹನೆ ಕಳೆದುಕೊಳ್ಳಬಾರದು. ಸಂಯಮದಿಂದ ವರ್ತಿಸಿದ್ದರೆ ಇಂಥದ್ದೊಂದು ಅನಾಹುತ ಆಗುತ್ತಿರಲಿಲ್ಲ. ವಯಸ್ಸಾದ ತಂದೆ ತಾಯಿ, ಗರ್ಭಿಣಿ ಸೊಸೆ ಏನು ಮಾಡಬೇಕು. ಇಂತಹ ಕೆಟ್ಟ ನಿದರ್ಶನ ಮುಂದೆ ಬರಬಾರದು’ ಎಂದು ಬೇಸರಿಸಿದರು.
ಕ್ಲಿಕ್ ಮಾಡಿ ಓದಿ: ಫಾರ್ಚೂನರ್ ಕಾರು ಲಾರಿ ನಡುವೆ ಭೀಕರ ಅಪಘಾತ | ಸ್ಥಳದಲ್ಲೇ ಮೂವರ ಸಾವು | ಐದು ಜನರಿಗೆ ಗಂಭೀರ ಗಾಯ
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ‘ಶಾಮನೂರು ಸೇರಿದಂತೆ ಅನೇಕರು ಸಹಾಯ ಮಾಡುವ ಭರವಸೆ ನೀಡಿ ಬ್ಯಾಂಕ್ ಅಕೌಂಟ್ ವಿವರ ತರಲು ಹೇಳಿದ್ದಾರೆ. ಶಾಮನೂರು ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಚಿತ್ರರಂಗ ಕ್ಷಮೆ ಕೇಳುತ್ತದೆ’ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಕರಿಸುಬ್ಬು, ಜಿ.ವೆಂಕಟೇಶ್, ಬಾ.ಮ.ಗಿರೀಶ್, ಚಿನ್ನೇಗೌಡ್ರು, ನಿರ್ಮಾಪಕದ ಸಂಘದ ರಾಮಕೃಷ್ಣ, ಕುಶಾಲ್, ಸಿದ್ದರಾಜು, ಉಮೇಶ್ ಬಣಕಾರ್, ಜಯಸಿಂಹ ಮುಸುರಿ, ಕೆ.ಎಂ.ವೀರೇಶ್, ಬಿ.ಕಾಂತರಾಜ ಇದ್ದರು.