ಮುಖ್ಯ ಸುದ್ದಿ
ವಿವಿಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ
CHITRADURGA NEWS | 20 MAY 2024
ಚಿತ್ರದುರ್ಗ: ಕೃತಿಕಾ ಮಳೆಯ ಆರ್ಭಟಕ್ಕೆ ಜಿಲ್ಲೆಯ ಕೆರೆ, ಕಟ್ಟೆಗಳಿಗೆ ನೀರು ಬಂದು ಸೇರುತ್ತಿದೆ.
ಈ ವರ್ಷ ಸುರಿದ ಪೂರ್ವ ಮುಂಗಾರು ಮಳೆಯಲ್ಲಿ ಇದೇ ಮೊದಲ ಭಾರಿಗೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿದಿದೆ.
ಮೇ.19 ಶನಿವಾರ ವಿವಿ ಸಾಗರ ಮೇಲ್ಭಾಗದ ಹೊಸದುರ್ಗ, ಚಿಕ್ಕಮಗಳೂರು ಭಾಗದಲ್ಲಿ ಸುರಿದ ಮಳೆಯಿಂದಾಗಿ ಮಾರಿಕಣಿವೆ ಡ್ಯಾಮಿಗೆ ನೀರು ವ್ಯಾಪಕವಾಗಿ ಹರಿದಿದೆ.
ವೇದಾವತಿ ನದಿ ಮೂಲಕ ಮೇ.20 ಸೋಮವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ 3800 ಕ್ಯೂಸೆಕ್ ನೀರು ಹರಿದು ಬಂದಿದೆ. ಹೊರ ಹರಿವಿನ ಪ್ರಮಾಣ ಇಲ್ಲದ ಕಾರಣ ನೀರು ಶೇಖರಣೆ ಆಗುತ್ತಿದೆ. ನೀರಿನ ಹರಿವಿನ ಪ್ರಮಾಣ ಇನ್ನೂ ಇದ್ದು, ಇದು ನಾಳೆಯೂ ಮುಂದುವರೆಯಲಿದೆ.
ಇದನ್ನೂ ಓದಿ: ರಾತ್ರಿ ಮಳೆಗೆ ಕೊಚ್ಚಿ ಹೋದ ರಸ್ತೆ | ಒಂದೇ ಮಳೆಗೆ ತುಂಬಿ ಕೋಡಿ ಹರಿದ ಕೆರೆ
ವಿವಿ ಸಾಗರಕ್ಕೆ ನೀರು ಬಂದು ಸೇರುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಟ್ಟಿಗೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ನಾಯಕನಹಟ್ಟಿ, ಡಿಆರ್‍ಡಿಓ ಪ್ರದೇಶಗಳಿಗೆ ಮುಂದಿನ ಮೂರು ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲವಾಗಲಿದೆ ಎನ್ನುವ ಸಮಾಧಾನ ಮನೆ ಮಾಡಿದೆ.
30 ಟಿಎಂಸಿ ಸಾಮಥ್ರ್ಯದ ವಿವಿ ಸಾಗರ:
ಮೈಸೂರು ಮಹಾರಾಜರ ಆಡಳಿತ ಕಾಲದಲ್ಲಿ ನಿರ್ಮಿಸಿದ ರಾಜ್ಯದ ಮೊದಲ ಜಲಾಶಯ ಮಾರಿಕಣಿವೆ ಡ್ಯಾಂ ಅಥವಾ ವಿವಿ ಸಾಗರ ಆಗಿದ್ದು, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಇದನ್ನೂ ಓದಿ: ಹಲವೆಡೆ ಬಾರೀ ಮಳೆ | ಬಿತ್ತನೆಗೆ ಮುಂದಾದ ರೈತ
ಒಟ್ಟು 30 ಟಿಎಂಸಿ ನೀರು ಸಂಗ್ರಹಣೆ ಸಾಮಥ್ರ್ಯ ಹೊಂದಿರುವ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಕಳೆದ ವರ್ಷ 130 ಅಡಿವರೆಗೆ ನೀರು ಬಂದು ನಂತರ ತಿಂಗಳುಗಟ್ಟಲೇ ಕೋಡಿ ಹರಿದಿತ್ತು.
ಸದ್ಯ ಜಲಾಶಯದಲ್ಲಿ 112 ಅಡಿ ನೀರಿದ್ದು, ಇದು 15.13 ಟಿಎಂಸಿ ಆಗಲಿದೆ. ಇದರೊಟ್ಟಿಗೆ ಡೆಡ್ ಸ್ಟೋರೇಜ್ ಪ್ರಮಾಣ 1.87 ಟಿಎಂಸಿ ಸೇರಿದರೆ 17 ಟಿಎಂಸಿ ನೀರಿದೆ.