ಮುಖ್ಯ ಸುದ್ದಿ
ಅಪ್ಪರ್ ಭದ್ರಾ ಯೋಜನೆ | ಅನುದಾನ ಬಿಡುಗಡೆಗೆ ಸಂಸತ್‌ನಲ್ಲಿ ಗೋವಿಂದ ಕಾರಜೋಳ ಒತ್ತಾಯ
CHITRADURGA NEWS | 20 MARCH 2025
ಚಿತ್ರದುರ್ಗ: ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ ರೂ.5300 ಕೋಟಿ ಸಹಾಯಧನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಸಂಸದ ಗೋವಿಂದ ಎಂ.ಕಾರಜೋಳ ಸಂಸತ್‌ನಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
Also Read : ಒಳಮೀಸಲು ವಿಳಂಬ ಸಹಿಸಲು ಆಗದು | ಎಚ್. ಆಂಜನೇಯ
ಚಿತ್ರದುರ್ಗ, ದಾವಣಗೆರೆ, ತುಮಕೂರು ಚಿಕ್ಕಮಗಳೂರು ಜಿಲ್ಲೆಗಳ ರೈತರ ಆಶಾಕಿರಣ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತಾ ಸಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರ 2023-24 ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ ರೂ.5300 ಕೋಟಿ ಸಹಾಯಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.
ಮಧ್ಯ ಕರ್ನಾಟಕ ಭಾಗದ ಬರಪೀಡಿತ ಪ್ರದೇಶಗಳ ರೈತರುಗಳು ಕಳೆದ 5 ದಶಕಗಳಿಗೂ ಹೆಚ್ಚು ಕಾಲ ನೀರಾವರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸತತ 5 ದಶಕಗಳ ಹೋರಾಟದ ಬಳಿಕ, ಭದ್ರಾ ಮೇಲ್ದಂಡೆ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯು ಕರ್ನಾಟಕದ ಮಧ್ಯಭಾಗದ ಬರಪೀಡಿತ 225000 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಅಚ್ಚುಕಟ್ಟು ಪ್ರದೇಶದ ಸುಮಾರು 367 ಕೆರೆಗಳನ್ನು ತುಂಬುವ ಉದ್ದೇಶವನ್ನು ಹೊಂದಿದೆ. ಯೋಜನೆಯ ಅಚ್ಚುಕಟ್ಟು ಪ್ರದೇಶವು ಮಧ್ಯ ಕರ್ನಾಟಕ ಭಾಗದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬರುತ್ತದೆ. ಈ ಯೋಜನೆಯನ್ನು 2008ರಲ್ಲಿ ಪ್ರಾರಂಭಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
ಯೋಜನೆಗೆ ಕೇಂದ್ರ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳಿಂದ ಅಗತ್ಯವಿರುವ ಎಲ್ಲಾ ತೀರುವಳಿಗಳನ್ನು ಪಡೆಯಲಾಗಿದ್ದು, ಯೋಜನೆಯು ತಾಂತ್ರಿಕ ಹಾಗೂ ಆರ್ಥಿಕವಾಗಿ ಕಾರ್ಯಸಾಧುವಾಗಿದೆ ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಸಲಹಾ ಸಮಿತಿಯು ಅಂಗೀಕರಿಸಿರುತ್ತದೆ.
ಇನವೆಸ್ಟ್ಮೆಂಟ್ ಕ್ಲಿಯರೆನ್ಸ್ ಕಮಿಟಿಯು ಯೋಜನೆಗೆ ತೀರುವಳಿಯನ್ನು ನೀಡಿದ್ದು, ಹೈ ಪವರ್ ಸ್ಟೀರಿಂಗ್ ಕಮಿಟಿಯು (HPSC) ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಡಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಿರುತ್ತದೆ ಮತ್ತು ಕೇಂದ್ರ ಹಣಕಾಸು ಮಂತ್ರಾಲಯದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಬೋರ್ಡ್ವು (PIB) ಯೋಜನೆಗೆ ರೂ.5300 ಕೋಟಿಗಳ ಕೇಂದ್ರ ಸಹಾಯಧನಕ್ಕಾಗಿ ಶಿಫಾರಸು ಮಾಡಿರುತ್ತದೆ.
ನಾನು ಪ್ರತಿನಿಧಿಸುವ ಚಿತ್ರದುರ್ಗ ಕ್ಷೇತ್ರವು ಕರ್ನಾಟಕದ ಮಧ್ಯ-ಭಾಗದಲ್ಲಿದ್ದು, ಹಿಂದೂಳಿದ ಪ್ರದೇಶವಾಗಿದೆ. ಇದು ಬರಪೀಡಿತ ಪ್ರದೇಶ ಆಗಿದ್ದರೂ ಸಹ ಈ ಪ್ರದೇಶದ ಮಣ್ಣು ಫಲವತ್ತತೆಯ ಗುಣ-ಲಕ್ಷಣಗಳನ್ನು ಹೊಂದಿದೆ. ವಿರಳವಾದ ಮಳೆಯ ಕಾರಣದಿಂದಾಗಿ ಬೆಳೆಗಳು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತವೆ. ಅಧಿಕವಾದ ಅಂತರ್ಜಲ ಬಳಕೆಯಿಂದಾಗಿ ಅಂತರ್ಜಲ ಮಟ್ಟವು ಕುಸಿಯುತ್ತಿದೆ. ವಿಶೇಷವಾಗಿ ತುಮಕೂರು ಜಿಲ್ಲೆ ಪಾವಗಡ ಮತ್ತು ಸಿರಾ ತಾಲೂಕುಗಳಲ್ಲಿ ಅಂತರ್ಜಲದಲ್ಲಿ ವಿಷಕಾರಿ ಫ್ಲೋರೈಡ್ ಪ್ರಮಾಣ ಅಧಿಕವಾಗಿದ್ದು, ಇದು ಜನರ ಆರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಉಂಟು ಮಾಡುತ್ತಲಿದೆ.
Also Read : ಬೈಕ್‍ಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಪತಿ ಸಾವು, ಪತ್ನಿಗೆ ಗಾಯ
ಮಳೆಯ ಕೊರತೆಯಿಂದಾಗಿ ತಮ್ಮ ತಮ್ಮ ಜಮೀನುಗಳನ್ನು ಹಾಗೂ ಕೃಷಿ ಚಟುವಟಿಕೆಗಳನ್ನು ತೊರೆದು ರೈತರು ಜನರು ಉದ್ಯೋಗ ಅರಸಿ ದೂರದ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದಿಂದ ಈ ಭಾಗದ ರೈತರು ಜನರ ಜಮೀನುಗಳಿಗೆ ಕನಿಷ್ಟ ಮುಂಗಾರು ಹಂಗಾಮಿನಲ್ಲಿ ಖಚಿತವಾಗಿ ನೀರೊದಗಿಸಬಹುದಾಗಿದೆ. ಈ ಯೋಜನೆಯು ಕೆರೆಗಳಿಗೆ ನೀರು ತುಂಬಿಸುವುದನ್ನು ಒಳಗೊಂಡಿರುವುದರಿಂದ ಅಂತರ್ಜಲ ಮಟ್ಟವು ಸುಧಾರಣೆಗೊಂಡು ತನ್ಮೂಲಕ ಫ್ಲೋರೈಡ್ ಅಂಶವು ಕಡಿಮೆಯಾಗಿ ಕುಡಿಯುವ ನೀರಿನ ಬೇಡಿಕೆಗೆ ಅನುವಾಗಲಿದೆ. ಯೋಜನೆಯ ಅನುಷ್ಠಾನದಿಂದ ಕೃಷಿ ಉತ್ಪನ್ನಗಳ ಇಳುವರಿಯು ಸುಮಾರು 3 ರಿಂದ 4 ಪಟ್ಟು ಹೆಚ್ಚಳವಾಗಲಿದೆ.
Also Read: SSLC ವಿದ್ಯಾರ್ಥಿಗಳಿಗೆ ಡಿಸಿ, ಸಿಇಓ ಪತ್ರ | ಏನಿದೆ ಪತ್ರದಲ್ಲಿ ಈ LINK CLICK ಮಾಡಿ
ಸದನದಲ್ಲಿ ಪ್ರಧಾನಮಂತ್ರಿಗಳು, ಜಲಶಕ್ತಿ ಸಚಿವರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಅಯವ್ಯಯದಲ್ಲಿ ಘೋಷಣೆ ಮಾಡಿದಂತೆ ರೂ.5300 ಕೋಟಿ ಸಹಾಯಧನವನ್ನು PMKSY-AIBP Scheme ಅಡಿಯಲ್ಲಿ ಬಿಡುಗಡೆಗೊಳಿಸುವಂತೆ ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಮನವಿ ಮಾಡಿದರು.