Connect with us

    ಶಿವರಾತ್ರಿ ಪ್ರಯುಕ್ತ ಕಬೀರನಂದಾ ಮಠದಲ್ಲಿ ವಿಶಿಷ್ಟ ಕೌದಿ ಪೂಜೆ

    ಕೌದಿ ವಸ್ತ್ರದಲ್ಲಿ ಶಿವಲಿಂಗನಂದಾ ಶ್ರೀಗಳು 

    ಮುಖ್ಯ ಸುದ್ದಿ

    ಶಿವರಾತ್ರಿ ಪ್ರಯುಕ್ತ ಕಬೀರನಂದಾ ಮಠದಲ್ಲಿ ವಿಶಿಷ್ಟ ಕೌದಿ ಪೂಜೆ

    CHITRADURGA NEWS | 10 MARCH 2024

    ಚಿತ್ರದುರ್ಗ: ಶಿವರಾತ್ರಿ ಪ್ರಯುಕ್ತ ಕಬೀರನಂದಾ ಮಠದಲ್ಲಿ ಆರೂಢ ಪರಂಪರೆಯಂತೆ ಸಾಂಪ್ರದಾಯಿಕ ಕೌದಿ ಪೂಜೆ ವಿಜೃಂಭಣೆಯಿಂದ ಜರುಗಿತು.

    ನಗರದ ಕರುವಿನಕಟ್ಟೆ ವೃತ್ತದಲ್ಲಿನ ಶ್ರೀ ಕಬೀರನಂದಾಶ್ರಮದ ವತಿಯಿಂದ ನಡೆಯುತ್ತಿರುವ ಶಿವರಾತ್ರಿ ಸಪ್ತಾಹದ ಅಂತಿಮ ದಿನವಾದ ಶನಿವಾರದಂದು ಶಿವಲಿಂಗನಂದಾ ಶ್ರೀಗಳು ಕೌದಿ ವಸ್ತ್ರವನ್ನು ಧರಿಸುವುದರ ಮೂಲಕ ಭಕ್ತಾದಿಗಳಿಗೆ ವಿಶೇಷ ದರ್ಶನ ನೀಡಿದರು.

    ಇದನ್ನೂ ಓದಿ: ನವೀಕೃತ ಸ್ಮಾರಕ ಲೋರ್ಕಾಪಣೆಗೆ ಸಜ್ಜು

    ಶ್ರೀ ಮಠದ ಆವರಣದಲ್ಲಿ ಚಿಂದಿ ಬಟ್ಟೆಯಿಂದ ನೇಯ್ಗೆ ಮಾಡಿದ ವಸ್ತ್ರವನ್ನು ಧರಿಸಿದ ಶ್ರೀಗಳು, ಒಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಮಣ್ಣಿನ ತಟ್ಟೆಯನ್ನು ಹಿಡಿದು, ಭಕ್ತಾದಿಗಳು ನೀಡಿದ ಕಾಣಿಕೆಯನ್ನು ಸ್ವೀಕಾರ ಮಾಡಿ, ತಲೆಯಲ್ಲಿ ರುದ್ರಾಕ್ಷಿ ಕಿರೀಟವನ್ನು ಧರಿಸಿ ಮಠದ ಆವರಣದಲ್ಲಿ ಮೂರು ಸುತ್ತನ್ನು ತಿರುಗುವುದರ ಮೂಲಕ ಕೌದಿ ಪೂಜೆಗೆ ಮಂಗಳವನ್ನು ಹಾಡಿದರು.

    ಈ ಸಮಯದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಶ್ರೀಗಳ ಕಾಲಿಗೆ ಎರಗುವುದರ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು.

    ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸಭೆ

    ಈ ವೇಳೆ ಮಾತನಾಡಿದ ಶ್ರೀಗಳು ಈ ಕೌದಿ ಪೂಜೆಯ ಉದ್ದೇಶ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದಾಗಿದೆ, ಇದು ಬಹಳಷ್ಟು ವರ್ಷದಿಂದ ಸಾಗಿ ಬಂದಿರುವ ಪರಂಪರೆಯಾಗಿದೆ, ಸಕಲ ಜೀವಿಗಳಿಗೆ ಶುಭ ಕೋರುವುದು, ಹಾರೈಸುವುದಕ್ಕೆ ಕೌದಿ ಪೂಜೆಯನ್ನು ನಡೆಸಲಾಗುತ್ತದೆ.

    ಎಲ್ಲಾ ಬಟ್ಟೆ ಚಿಂದಿಗಳಿಂದ ತಯಾರು ಮಾಡಿದ ವಸ್ತ್ರವಾಗಿದೆ, ಇದನ್ನು ಧರಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದ ಶ್ರೀಗಳು ಜೀವನದಲ್ಲಿ ಮತಿಗಳು ಭಿನ್ನವಾಗಿರುತ್ತವೆ, ಸಂಸ್ಕಾರಗಳು ಭಿನ್ನವಾಗಿರುತ್ತವೆ. ಈ ಭಿನ್ನತೆಯಲ್ಲಿ ಸಕಲ ಜೀವಾತ್ಮನು ಏಕಾಗ್ರತೆಯನ್ನು ಮಾಡಿಸಿದಾಗ, ನಮ್ಮಲ್ಲಿ ಏಕಾಗ್ರತೆ ಕಾಣುತ್ತದೆ ಎಂಬ ಅರ್ಥದಿಂದ ಸಿದ್ದರೂಡ ಮಹತ್ತರು ಈ ಕೌದಿ ಪೂಜೆಯನ್ನು ಪ್ರಾರಂಭ ಮಾಡಿದರು ಎಂದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ವೇಳಾಪಟ್ಟಿ | ಸಿದ್ಧತೆಗಳ ಬಗ್ಗೆ ನಿಗಾ ಇರಿಸಲು ಡಿಸಿ ಸೂಚನೆ

    ಕುಲಭೇದ, ಜಾತಿಭೇದ, ವರ್ಗಭೇದ, ವರ್ಣ ಭೇದವನ್ನು ಹೊರತುಪಡಿಸಿ ಮಾನವಕುಲಕ್ಕೆ ಒಳಿತಾಗಲಿ ಎಂಬ ಉದ್ದೇಶ ಇದಾಗಿದೆ. ಅದ್ಮಾತ್ ಚಿಂತನೆ, ಒಂದೇ ಸಾಧನೆ ಎಂದು ತೋರಿಸಿದವರು ಸಿದ್ಧರೂಡರು, ಕೌದಿ ಪೂಜೆಯನ್ನು ಮಾಡುವುದರ ಮೂಲಕ ಎಲ್ಲರಿಗೂ ಹಿತ ಶುಭವನ್ನು ಕೋರಲಾಗುವುದು ಎಂದು ಶಿವಲಿಂಗನಂದಾ ಶ್ರೀಗಳು ತಿಳಿಸಿದರು.

    ಈ ಸಂದರ್ಭದಲ್ಲಿ ಶ್ರೀ ಮಠದ ಭಕ್ತರಾದ ನಾಗರಾಜ್ ಸಂಗಂ, ಸತೀಶ್, ಗೋಪಾಲಸ್ವಾಮಿ ನಾಯ್ಕ್, ಪೈಲ್ವಾನ್ ತಿಪ್ಪೇಸ್ವಾಮಿ, ಪ್ರಶಾಂತ್, ನಿರಂಜನ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ಗಾಯತ್ರಿ ಶಿವರಾಂ, ರೇಖಾ, ವೆಂಕಟೇಶ್ ಸೇರಿದಂತೆ ಭಕ್ತಾದಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top