ಮುಖ್ಯ ಸುದ್ದಿ
ಕುಡಿಯುವ ನೀರು ಪ್ರಕರಣ | ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತು
CHITRADURGA NEWS | 27 MARCH 2024
ಚಿತ್ರದುರ್ಗ: ಬರದ ದಿನದಲ್ಲಿ ಗಡಿ ತಾಲ್ಲೂಕು ಮೊಳಕಾಲ್ಮುರಿನಲ್ಲಿ ಕುಡಿಯುವ ನೀರು ಸರಬರಾಜಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯ ತಲೆದಂಡವಾಗಿದೆ.
ಸರ್ಕಾರ, ಜಿಲ್ಲಾಡಳಿತ ಬರ ಘೋಷಣೆಯಾದ ದಿನದಂದ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಿ, ಇಲ್ಲವಾದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೂ ಸಹ ದಿವ್ಯ ನಿರ್ಲಕ್ಷ್ಯ ತೋರಿದ್ದ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ವಿ.ಮಂಜುನಾಥ್ ನಿರ್ಲಕ್ಷ್ಯ ತೋರಿದ್ದರು.
ಕುಡಿಯುವ ನೀರು ಸರಬರಾಜಿನಲ್ಲಿ ನಿರ್ಲಕ್ಷ್ಯ ಹಾಗೂ ಖಾತೆ ಬದಲಾವಣೆ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದರು. ಈ ಎಲ್ಲವನ್ನು ಗಮನಿಸಿದ ಸರ್ಕಾರ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಾಧಿಕಾರಿ ಮಂಜುನಾಥ್ ಇಲ್ಲಿಗೆ ವರ್ಗಾವಣೆಯಾಗಿ ಬಂದಾಗಿನಿಂದಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಉಡಾಫೆ ಉತ್ತರ ನೀಡುತ್ತಾರೆ. ನಾಗರಿಕರಿಗೆ ಬೇಕಾಬಿಟ್ಟಿ ಉತ್ತರ ನೀಡಿ ಕಳಿಸುತ್ತಾರೆ ಎಂದು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಆರೋಪಿಸಿದ್ದರು. ಈಚೆಗೆ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಹ ಸಲ್ಲಿಸಿದ್ದರು.
ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | 26 ಮಾರ್ಚ್ | ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ರೇಟ್
ಕುಡಿಯುವ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದಾಸೀನ ತೋರಿರುವ ಜತೆಗೆ ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ಮಾತಿಗೂ ಸ್ಪಂದನೆ ನೀಡುತ್ತಿರಲಿಲ್ಲ. ಖಾತೆ ಬದಲಾವಣೆ ಮತ್ತು ಇ-ಸ್ವತ್ತು ಮಾಡಿಕೊಡಲು ತಹಶೀಲ್ದಾರ್ ಅನುಮತಿ ಅಗತ್ಯ. ಆಸ್ತಿಗಳು ಗ್ರಾಮ ಠಾಣಾ ಹೊರಗಡೆ, ಒಳಗಡೆ ಎಂಬ ವಿಷಯ ಮುಂದಿಟ್ಟುಕೊಂಡು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿರುವುದು ಕಂಡುಬಂದಿರುವುದನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಕ್ಲಿಕ್ ಮಾಡಿ ಓದಿ: ಹೊಸಪೇಟೆ ಕಾರಿನಲ್ಲಿತ್ತು ₹ 20.35 ಲಕ್ಷ | ಚೆಕ್ ಪೋಸ್ಟ್‌ನಲ್ಲಿ ಹಣ ವಶ
ಮಾ. 21ರಂದು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಇ-ಮೇಲ್ ಮೂಲಕ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೂ ಸ್ಪಂದನೆ ನೀಡದ ಜತೆಗೆ ಮೊಬೈಲ್ ಸಂಪರ್ಕಕ್ಕೂ ಸಿಗದ ಕಾರಣ ಅಂತಿಮವಾಗಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಈಚೆಗೆ ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದಾಗ ನಾಗರಿಕರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.