ಕ್ರೈಂ ಸುದ್ದಿ
ಪುಟ್ಟ ಕಂದನ ಪ್ರಾಣ ತೆಗೆದ ವಿದ್ಯುತ್ | ಮಕ್ಕಳನ್ನು ತೋಟಕ್ಕೆ ಕರೆದೊಯ್ಯುವ ಮುನ್ನಾ ಈ ಸುದ್ದಿ ಓದಿ

CHITRADURGA NEWS | 15 MAY 2024
ಹೊಸದುರ್ಗ: ಬೆಸ್ಕಾಂ ಹಾಗೂ ರೈತನ ನಿರ್ಲಕ್ಷ್ಯದ ಕಾರಣಕ್ಕೆ ಪುಟ್ಟ ಜೀವವೊಂದು ಬಲಿಯಾದ ದುಃಖದ ಸಂಗತಿ ಹೊಸದುರ್ಗ ತಾಲೂಕಿನಲ್ಲಿ ಘಟಿಸಿದೆ.
ಜಮೀನಿನಲ್ಲಿ ಗೃಹ ಬಳಕೆಗೆಂದು ವೈರ್ ಮೂಲಕ ತೆಗೆದುಕೊಂಡು ಹೋಗಿದ್ದ ತಂತಿ ನೆಲಕ್ಕೆ ಜಗ್ಗಿದ್ದು, ಪುಟ್ಟ ಬಾಲಕ ತೆಂಗಿನ ಗರಿ ಎಳೆಯುವಾಗ ಅದರ ಮೂಲಕ ವಿದ್ಯುತ್ ಪ್ರವಹಿಸಿ ಅನಾಹುತ ನಡೆದು ಹೋಗಿದೆ.
ಇದನ್ನೂ ಓದಿ: ಡಾ.ಬಿ.ಎಲ್.ವೇಣುಗೆ ಅನಾರೋಗ್ಯ | ಫೋರ್ಟೀಸ್ ಆಸ್ಪತ್ರೆಗೆ ದಾಖಲು, ಚೇತರಿಕೆ
ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ಕಬ್ಬಳ ಗ್ರಾಮದ ಸವಿತಾ ಹಾಗೂ ರಂಗಸ್ವಾಮಿ ಎಂಬುವವರ 5 ವರ್ಷದ ಪುತ್ರ ವೆಂಕಟೇಶ್ ಮೂರ್ತಿ ಮೃತ ಬಾಲಕ.
ಕಬ್ಬಳ ಗ್ರಾಮದ ರಂಗಸ್ವಾಮಿ, ಸವಿತಾ ದಂಪತಿಗೆ ಸಂಬಂಧಿಸಿದ ಜಮೀನು ಪಕ್ಕದ ಬೊಮ್ಮೇನಹಳ್ಳಿ ಬಳಿಯಿದ್ದು, ತಾಯಿ ಸವಿತಾ ಜೊತೆಗೆ ಮೇ.14 ರಂದು ಪುತ್ರ ವೆಂಕಟೇಶಮೂರ್ತಿಯನ್ನು ಕರೆದುಕೊಂಡು ಹೋಗಿದ್ದಾರೆ.
ಗಾಳಿ, ಮಳೆಗೆ ಜಮೀನಿನಲ್ಲಿ ಬಿದ್ದಿದ್ದ ತೆಂಗಿನ ಗರಿಗಳನ್ನು ತಾಯಿ ಸವಿತಾ ಎಳೆದು ಬದುವಿಗೆ ಹಾಕುತ್ತಿದ್ದಾರೆ. ಈ ವೇಳೆ ಬಾಲಕ ಕೂಡಾ ಒಂದು ಗರಿ ಎಳೆದಿದ್ದು, ಅಲ್ಲೇ ನೆಲದಿಂದ ಸುಮಾರು 3 ಅಡಿ ಎತ್ತರದಲ್ಲಿದ್ದ ವಿದ್ಯುತ್ ತಂತಿ ಬಾಲಕಿನಿಗೆ ತಾಗಿದೆ.
ಈ ವೇಳೆ ತಾಯಿ ಸವಿತಾ ಒಣಗಿದ ಕೋಲಿನ ಸಹಾಯದಿಂದ ಬಾಲಕನನ್ನು ಬಿಡಿಸಿ, ಪತಿ ರಂಗಸ್ವಾಮಿಗೆ ಪೋನ್ ಮಾಡಿದ್ದಾರೆ. ತಕ್ಷಣ ಬಂದು ಬೆಲಗೂರು ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆ | ಅದ್ದೂರಿ ಪಟ್ಟಾಭಿಷೇಕಕ್ಕೆ ನಿರ್ಧಾರ
ಕಬ್ಬಳ ಗ್ರಾಮದ ಸಣ್ಣರಂಗಪ್ಪ ಎಂಬುವವರು ತಮ್ಮ ತೊಟದ ಮನೆಗೆ ನಿರಂತರ ಜ್ಯೋತಿ ಮೂಲಕ ಇವರ ತೋಟದ ಮೂಲಕ ವಿದ್ಯುತ್ ವೈಯರ್ ಎಳೆದುಕೊಂಡು ಹೋಗಿದ್ದರು.
ಗಾಳಿಗೆ ಆ ವೈಯರ್ ನೆಲಕ್ಕೆ ಜಗ್ಗಿತ್ತು. ಈ ಬಗ್ಗೆ ಸಣ್ಣ ರಂಗಪ್ಪನಿಗೆ ತಿಳಿಸಿ ಬದುವಿನಲ್ಲಿ ಎಳೆಯುವಂತೆ ಹೇಳಿದ್ದರೂ ಎಳೆದಿರಲಿಲ್ಲ. ಈ ಬಗ್ಗೆ KEB ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷಿಸಿದ್ದರು ಎಂದು ದೂರಿ ಬಾಲಕನ ತಾಯಿ ಸಣ್ಣ ರಂಗಪ್ಪ ಹಾಗೂ ಕೆಇಬಿ ಅಧಿಕಾರಿಗಳ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
