ಕ್ರೈಂ ಸುದ್ದಿ
ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಅರೆಸ್ಟ್

ಚಿತ್ರದುರ್ಗ ನ್ಯೂಸ್.ಕಾಂ: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗದ ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು, ಹೊಳಲ್ಕೆರೆಯ ಸಾಹಿತಿ ಚಂದ್ರಶೇಖರ ತಾಳ್ಯ, ಕುಂ.ವೀರಭದ್ರಪ್ಪ, ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವು ಸಾಹಿತಿಗಳಿಗೆ ಅನಾಮಧೇಯ ಬೆದರಿಕೆ ಪತ್ರಗಳು ಕಳೆದೊಂದು ವರ್ಷದಿಂದ ಬರುತ್ತಿದ್ದವು.
ಸಾಹಿತಿಗಳ ನಿಲುವು ಹಾಗೂ ಸಾಹಿತ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಜೀವ ಬೆದರಿಕೆ ಹಾಕಿ ಪತ್ರ ಬರೆಯುತ್ತಿದ್ದ ಕಾರಣಕ್ಕೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಚಿತ್ರದುರ್ಗದ ಡಾ.ಬಿ.ಎಲ್.ವೇಣು ಅವರಿಗೆ ಸುಮಾರು ಮೂರು ಬೆದರಿಕೆ ಪತ್ರಗಳು ಬಂದಿದ್ದವು. ಈ ವೇಳೆ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪತ್ರಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದರು. ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಕೂಡಾ ವೇಣು ಅವರ ಮನೆಗೆ ಭದ್ರತೆ ಒದಗಿಸಿದ್ದರು.
ಇದನ್ನೂ ಓದಿ: ರೈತ ಬಾಂಧವರೇ ಎಚ್ಚರಿಕೆ | ಮೋಟಾರ್, ಪಂಪ್, ಕೇಬಲ್ ಕಳ್ಳತನ | ಜಮೀನಿಗೆ ಪೊಲೀಸರ ಭೇಟಿ ಪರಿಶೀಲನೆ
ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಕಳೆದೊಂದು ತಿಂಗಳಿನಿಂದ ಪತ್ರಗಳು ಪೋಸ್ಟ್ ಆಗಿರುವ ಅಂಚೆ ಕಚೇರಿಗಳು, ಪತ್ರಗಳಲ್ಲಿ ಬರೆದಿರುವ ಭಾಷೆ ಇತ್ಯಾದಿಗಳ ಆಧಾರದಲ್ಲಿ ಉತ್ತರ ಕರ್ನಾಟಕದ ಭಾಗದ ವ್ಯಕ್ತಿ ಎನ್ನುವುದನ್ನು ಗ್ರಹಿಸಿ ಪೊಲೀಸರು ಅಖಾಡಕ್ಕೆ ಇಳಿದಿದ್ದರು.
ವಿವಿಧ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಮೊಬೈಲ್ ಟವರ್ ಆಧರಿಸಿ ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಆರೋಪಿಯನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಕಳೆದ 15 ದಿನಗಳ ಹಿಂದಷ್ಟೇ ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ ಚಿತ್ರದುರ್ಗದ ಬಿ.ಎಲ್.ವೇಣು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.
