ಮುಖ್ಯ ಸುದ್ದಿ
SSLC ಪರೀಕ್ಷೆ ಅಕ್ರಮ | ಹತ್ತು ಜನ ಶಿಕ್ಷಕರ ಅಮಾನತು | ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ?


CHITRADURGA NEWS | 30 APRIL 2025
ಚಿತ್ರದುರ್ಗ: SSLC ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಸದರಿ ಪ್ರಕರಣದಲ್ಲಿ ಈಗಾಗಲೇ ಹತ್ತು ಜನ ಶಿಕ್ಷಕರು ಅಮಾನತು ಆಗಿದ್ದಾರೆ.
ಗಣಿತ ಪರೀಕ್ಷೆ ವೇಳೆ ಕೊಠಡಿಗಳಿಗೆ ತೆರಳಿ ಅನಧಿಕೃತ ಮಹಿಳೆಯೊಬ್ಬರು ನಕಲು ಮಾಡಿಸಿರುವುದು ಸಿ.ಸಿ.ಟಿವಿ ದೃಶ್ಯಗಳಲ್ಲಿ ಕಂಡು ಬಂದಿದ್ದು, ಇದೇ ವಿಚಾರಕ್ಕೆ ಬಿಇಓ, ಡಿಡಿಪಿಐ ಅವರಿಗೂ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.
ಇದನ್ನೂ ಓದಿ: ಮೇ 05 ರಿಂದ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ | ಜಿಲ್ಲಾಧಿಕಾರಿ ವೆಂಕಟೇಶ್
ಚಿತ್ರದುರ್ಗ ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 24 ರಂದು ಗಣಿತ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ.
ಪರೀಕ್ಷೆಗೆ ಸಂಬಂಧ ಇಲ್ಲದ ಅನಾಮಧೇಯ ಮಹಿಳೆಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಬಂದು ಕೊಠಡಿಯಿಂದ ಕೊಠಡಿಗೆ ಓಡಾಡಿದ್ದಾರೆ. ಸಾಮೂಹಿಕವಾಗಿ ನಕಲು ಮಾಡಿಸಿದ್ದು, ಈ ಸಂಬಂಧ ನ್ಯಾಯವಾದಿ ಸಿ.ಎಲ್.ಅವಿನಾಶ್ ದೂರು ನೀಡಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಎಚ್ಚೆತ್ತ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಅಳವಡಿಸಿದ್ದ ಸಿ.ಸಿ.ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಿರುವುದು ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ತಾಲೂಕು ಬಿಇಓ ನಾಗಭೂಷಣ್ ಹಾಗೂ ಡಿಡಿಪಿಐ ಮಂಜುನಾಥ್ ಅವರಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಈ 3 ವಸ್ತುಗಳನ್ನು ಮುಖಕ್ಕೆ ಹಚ್ಚಿದರೆ ಮುಖದ ಬಣ್ಣ ಕಳೆದುಹೋಗುತ್ತದೆಯಂತೆ
ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕೊಳಾಳು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಆರ್.ತಿಮ್ಮಪ್ಪ ಹಾಗೂ ಕೇಂದ್ರದ ಉಪ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಕೋಟೆ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಿ.ಟಿ.ಸೌಮ್ಯಕುಮಾರಿ ಅವರನ್ನು ಅಮಾನತು ಮಾಡಿ ಏ.೫ ರಂದು ಆದೇಶ ಹೊರಡಿಸಿದ್ದಾರೆ.
ಇದರೊಟ್ಟಿಗೆ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದ ನಂದಿಪುರ ಸರ್ಕಾರಿ ಶಾಲೆ ಶಿಕ್ಷಕ ಕೆಂಚಮೂರ್ತಿ, ಲಕ್ಷ್ಮೀಸಾಗರ ಸರ್ಕಾರಿ ಶಾಲೆ ಶಿಕ್ಷಕಿ ರೋಷನ್ ಅರಾ, ಎಂ.ಕೆ.ಹಟ್ಟಿ ರಾಮಕೃಷ್ಣ ಪ್ರೌಢಶಾಲೆ ಶಿಕ್ಷಕಿ ಜಿ.ಕೆ.ಕವಿತಾ, ಪಂಡ್ರಹಳ್ಳಿ ಶಾಲೆ ಶಿಕ್ಷಕಿ ಸಿ.ರಂಗಮ್ಮ, ರೋಟರಿ ಶಾಲೆ ಶಿಕ್ಷಕಿ ಆರ್.ಜಯಲಕ್ಷ್ಮೀ, ಎಣ್ಣೆಗೆರೆ ಸರ್ಕಾರಿ ಶಾಲೆ ಶಿಕ್ಷಕ ಎಸ್.ಉಮಾಪತಿ ಅವರನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ: ಮಗುವಿಗೆ ಖರ್ಜೂರ ತಿನ್ನಿಸುವುದರಿಂದಾಗುವ ಪ್ರಯೋಜನಗಳು
ಪರೀಕ್ಷೆ ನಡೆಯುತ್ತಿದ್ದ ಕೊಠಡಿಗಳಿಗೆ ಅಪರಿಚಿತ ಮಹಿಳೆಯೊಬ್ಬರು ತೆರಳಿ ನಕಲು ಮಾಡಿಸಿರುವುದು ದೃಢಪಟ್ಟ ಹಿನ್ನೆಲೆಯಲಿ ಬಿಇಓ ಎಸ್.ನಾಗಭೂಷಣ್ ಚಿತ್ರದುರ್ಗ ನಗರ ಠಾಣೆಯಲ್ಲಿ ಮಹಿಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರು ನೀಡಿದ್ದಾರೆ. ಆರಂಭದಲ್ಲಿ ಅನಾಮಧೇಯ ಮಹಿಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆನಂತರ ಮಹಿಳೆಯ ಹೆಸರು ರಶ್ಮಿ ಎಂದು ತಿಳಿದು ಬಂದಿದೆ.
ಒಟ್ಟಾರೆ ಇಡೀ ಪ್ರಕರಣದ ಕುರಿತಾಗಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
