ಮುಖ್ಯ ಸುದ್ದಿ
ನುಸುಕಿನ ದರೋಡೆ ಟೀಂಗೆ ಗೋವಾದಲ್ಲಿ ಹೆಡೆಮುರಿ; ಹತ್ತು ದರೋಡೆಕೋರರ ಬಂಧನ
ಚಿತ್ರದುರ್ಗ ನ್ಯೂಸ್.ಕಾಂ
ಸಿನಿಮೀಯ ಶೈಲಿಯಲ್ಲಿ ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಿ ಅಡಿಕೆ ವ್ಯಾಪಾರಿಯ ₹ 1.5 ಕೋಟಿ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲೇ ಬಂಧಿಸಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಈಚಲನಾಗೇನಹಳ್ಳಿಯ ಸಮೀಪ ಡಿ. 4ರಂದು ನಡೆದ ಘಟನೆಯ ಜಾಡು ಹಿಡಿದ ಖಾಕಿ ಪಡೆ ಗೋವಾದಲ್ಲಿ ಹತ್ತು ಜನ ಅಂತರ ಜಿಲ್ಲಾ ದರೋಡೆಕೋರರ ತಂಡಕ್ಕೆ ಹೆಡೆಮುರಿ ಕಟ್ಟಿದೆ.
ಚಿತ್ರದುರ್ಗ ತಾಲ್ಲೂಕಿನ ಹೊಸಹಳ್ಳಿಯ ಮೊಹಮ್ಮದ್ ಇರ್ಫಾನುಲ್ಲಾ ಅಡಿಕೆ ಮಾರಾಟ ಮಾಡಿದ ಹಣವನ್ನು ಊರಿಗೆ ತರುವಾಗ ಆರೋಪಿಗಳು ದರೋಡೆ ಮಾಡಿದ್ದರು. ಹೈದರಾಬಾದ್‌ನಿಂದ ಸ್ನೇಹಿತ ಜಾಕೀರ್ ಜೊತೆ ಬಸ್‌ನಲ್ಲಿ ಬಂದಿದ್ದ ಇರ್ಫಾನುಲ್ಲಾ, ಡಿ. 4ರಂದು ನಸುಕಿನಲ್ಲಿ ಚಿತ್ರದುರ್ಗದಲ್ಲಿ ಬಸ್ ಇಳಿದು ದ್ವಿಚಕ್ರ ವಾಹನದೊಂದಿಗೆ ಗ್ರಾಮಕ್ಕೆ ಹೊರಟಿದ್ದರು. ಈಚಲನಾಗೇನಹಳ್ಳಿಯ ಸಮೀಪ ಆರೋಪಿಗಳು ಅಡ್ಡಗಟ್ಟಿದ್ದರು.
ಇದನ್ನೂ ಓದಿ: KSRTC ಬಸ್ ನಿಲ್ದಾಣದಲ್ಲಿ ಹಠಾತ್ತನೇ ಬೆಂಕಿ
ರಸ್ತೆಯಲ್ಲಿ ಕಾರು ನಿಲ್ಲಿಸಿದ್ದ ಆರೋಪಿಗಳು ಸಿನಿಮೀಯ ಶೈಲಿಯಲ್ಲಿ ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಿ ಇರ್ಫಾನ್ ಹಾಗೂ ಜಾಕೀರ್ ಅವರನ್ನು ವಾಹನದಿಂದ ಬೀಳಿಸಿ ಹಣದ ಬ್ಯಾಗಿನೊಂದಿಗೆ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಅನಿಲ್ ಕುಮಾರ್ ಹಾಗೂ ಸಿಪಿಐ ವೈ.ಮುದ್ದುರಾಜು ನೇತೃತ್ವದ ತನಿಖಾ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆಯ ಜಯನಗರ ನಿವಾಸಿ ಶಶಿಕಿರಣ್ (38), ಬೆಂಗಳೂರಿನ ಕೆಂಪೇಗೌಡ ಬಡಾವಣೆಯ ಎಚ್.ನವೀನ್ (19), ಮಾಯಕೊಂಡ ಹೋಬಳಿಯ ಬಸವಪುರ ಗ್ರಾಮದ ಆರ್.ಮಂಜುನಾಥ್ (23), ಹಿಂಡಸನಕಟ್ಟೆ ಗ್ರಾಮದ ಪ್ರತಾಪಗೌಡ ಜಿ.ಎಸ್ (23), ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದ ಎ.ಕಿರಣ್ (21), ತಣಿಗೆರೆಯ ಬಿ.ಕೆ. ಲಿಂಗರಾಜ (42), ಚಿತ್ರದುರ್ಗ ತಾಲ್ಲೂಕು ಹೊಸಹಳ್ಳಿ ಗ್ರಾಮದ ಮಹಮದ್ ಷಫೀಉಲ್ಲಾ (23), ಎಸ್. ಸಮೀರ್ ಭಾಷಾ (24), ಬೆಂಗಳೂರಿನ ಲಗ್ಗೆರೆಯ ಹುಸೇನ್ ಭಾಷ (19) ಹಾಗೂ ಪೀಣ್ಯಾದ ಬಿ.ಶ್ರೀನಿವಾಸ (34) ಬಂಧಿತರು.
ಬಂಧಿತರಿಂದ ₹ 65 ಲಕ್ಷ ನಗದು, ದರೋಡೆ ಹಣದಲ್ಲಿ ಖರೀದಿಸಿದ್ದ ₹ 9 ಲಕ್ಷ ಮೌಲ್ಯದ ಕಾರು, ₹ 1.3 ಲಕ್ಷ ಮೌಲ್ಯದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ದರೋಡೆ ಮಾಡಿ ಪರಾರಿಯಾದ ಆರೋಪಿಗಳು ಹೊಸದುರ್ಗದ ಅಜ್ಜಂಪುರ ರಸ್ತೆಯಲ್ಲಿ ಮತ್ತೆ ಸೇರಿಕೊಂಡಿದ್ದರು. ಸಮೀಪದ ಕೈನಡು ಗ್ರಾಮದ ಅರಣ್ಯ ಪ್ರದೇಶಕ್ಕೆ ಹಣವನ್ನು ಕೊಂಡೊಯ್ದು ಹಂಚಿಕೊಂಡಿದ್ದರು. ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದರು. ಇದರಲ್ಲಿ ಕೆಲವರು ಗೋವಾಗೆ ಹೋಗಿದ್ದರು. ಈ ಹಣದಲ್ಲಿ ಆರೋಪಿ ಶ್ರೀನಿವಾಸ್ ₹ 9 ಲಕ್ಷ ಮೌಲ್ಯದ ಕಾರು, ಕಿರಣ್ ₹ 1.3 ಲಕ್ಷ ಮೌಲ್ಯದ ಕೆಟಿಎಂ ದ್ವಿಚಕ್ರ ವಾಹನ ಖರೀದಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ಆರೋಪಿಗಳಾದ ಮಹಮದ್ ಷಫೀಉಲ್ಲಾ ಹಾಗೂ ಎಸ್. ಸಮೀರ್ ಭಾಷಾ ಚಿತ್ರದುರ್ಗ ತಾಲ್ಲೂಕು ಹೊಸಹಳ್ಳಿ ಗ್ರಾಮದವರು. ಹಣ ಕಳೆದುಕೊಂಡ ಇರ್ಫಾನ್ ಇದೇ ಗ್ರಾಮದವರಾಗಿದ್ದು ಪರಿಚಯಸ್ಥ ರಾಗಿದ್ದರು. ಹೈದರಾಬಾರ್‌ನಿಂದ ಹಣ ತರುವ ಮಾಹಿತಿಯನ್ನು ಅರಿತ ಆರೋಪಿಗಳು ದರೋಡೆಗೆ ಹೊಂಚು ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಈ ಮಾಹಿತಿಯನ್ನು ಶಶಿಕಿರಣ್ ಹಾಗೂ ಶ್ರೀನಿವಾಸ್ ಜೊತೆ ಹಂಚಿಕೊಂಡಿದ್ದರು. ಈ ಕೃತ್ಯಕ್ಕೆ ಸ್ನೇಹಿತರಾದ ಲಿಂಗರಾಜು, ಮಂಜುನಾಥ, ಪ್ರತಾಪ್ ಗೌಡ, ಕಿರಣ್, ನವೀನ್, ಭಾಷ ಎಂಬುವರನ್ನು ಕರೆಸಿಕೊಂಡಿದ್ದರು. ಚಿತ್ರದುರ್ಗ ರೈಲ್ವೆ ನಿಲ್ದಾಣದ ಸಮೀಪದ ಬಿ.ಡಿ ರಸ್ತೆಯಲ್ಲಿಯೇ ದರೋಡೆ ಮಾಡಲು ಉದ್ದೇಶಿಸಿದ್ದರು. ಅದು ಸಾಧ್ಯವಾಗದೇ ಮಾರ್ಗ ನಡುವಿನ ನಿರ್ಜನ ಪ್ರದೇಶದಲ್ಲಿ ಕೃತ್ಯ ಎಸಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.