Connect with us

ನೀರಿನ ಪೈಪ್‌ಲೈನ್ ಮೇಲೆ ಕಣ್ಗಾವಲು | ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್‌ ಸೂಚನೆ

zp ceo

ಮುಖ್ಯ ಸುದ್ದಿ

ನೀರಿನ ಪೈಪ್‌ಲೈನ್ ಮೇಲೆ ಕಣ್ಗಾವಲು | ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್‌ ಸೂಚನೆ

CHITRADURGA NEWS | 14 JUNE 2024
ಚಿತ್ರದುರ್ಗ:‌ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಂತಹ ಯಾವುದೇ ಅಹಿತಕರ ಅವಘಡ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರಿನ ಸೇವನೆಯಿಂದ ಸಾವುಂಟಾಗುವ ಪ್ರಕರಣಗಳು ಜರುಗಬಾರದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಜೆ.ಸೋಮಶೇಖರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಂಬಂಧದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ, ಜನವಸತಿ ಪ್ರದೇಶಗಳಲ್ಲಿ ಬರುವ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಡಿಯಲ್ಲಿ ಬರುವ ಎಲ್ಲಾ ಪೈಪ್‍ಲೈನ್‍ಗಳನ್ನು ಪ್ರತಿದಿನವೂ ಕಣ್ಗಾವಲು ನಡೆಸಿ, ಯಾವುದಾದರೂ ಪೈಪ್‍ಲೈನ್‍ಗಳು ಹಾನಿಯಾಗಿರುವುದು ಕಂಡುಬಂದರೆ ಕೂಡಲೇ ದುರಸ್ಥಿ ಕಾರ್ಯ ಕೈಗೊಂಡು ಯಾವುದೇ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಕ್ಲಿಕ್ ಮಾಡಿ ಓದಿ: ರೇಣುಕಸ್ವಾಮಿ ಕೊಲೆ ಕೇಸ್‌ | ತಡರಾತ್ರಿ ನಡೆಯಿತು ಸ್ಥಳ ಮಹಜರು

ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಎಲ್ಲಾ ನೀರು ಶೇಖರಣಾ ಘಟಕಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸಿ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಬೇಕು. ಮುಂದಿನ ಒಂದು ವಾರದೊಳಗೆ ಜಿಲ್ಲೆಯ ಎಲ್ಲಾ ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ಮೂಲಗಳಾದ ಕೊಳವೆಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕೈಗೊಂಡು ಆ ನೀರಿನ ಮೂಲದ ಸುತ್ತಲೂ ಕಾಂಕ್ರಿಟ್‍ನಿಂದ ಕಟ್ಟೆ ಕಟ್ಟಬೇಕು ಎಂದು ತಿಳಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಪ್ರಯೋಗಾಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು ಮಳೆಗಾಲದ ಮುನ್ನ ಮತ್ತು ಮಳೆಗಾಲದ ನಂತರ ಕಡ್ಡಾಯವಾಗಿ ಹಾಗೂ ಅವಶ್ಯಕವಿದ್ದಾಗ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಕಲುಷಿತ ಎಂದು ಕಂಡುಬರುವ ನೀರಿನ ಮೂಲಗಳಿಗೆ ಪರ್ಯಾಯವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳ ಪ್ರಗತಿ ಪರಿಶೀಲನೆಯನ್ನು ಮಾಸಿಕವಾಗಿ ಕೈಗೊಳ್ಳುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಕಾರು ಚಾಲಕ ರವಿ ಪೊಲೀಸರಿಗೆ ಶರಣಾಗತಿ

ಒಂದು ವೇಳೆ ನೀರು ಕಲುಷಿತ ಎಂದು ಕಂಡುಬಂದರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಾ.ಪಂ ಇಒ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡ ಸ್ಥಳ ಪರೀಕ್ಷೆ ನಡೆಸಿ, ಕೂಡಲೇ ಆ ನೀರಿನ ಮೂಲಗಳಿಂದ ಸರಬರಾಜು ಮಾಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಪರ್ಯಾಯ ಮೂಲಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಲುಷಿತ ನೀರಿನ ಸೇವನೆಯ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಸರಬರಾಜು ವಿತರಣೆ ವ್ಯವಸ್ಥೆಯ ಸಂಪೂರ್ಣ ತಪಾಸಣೆ ಹಾಗೂ ಪರಿಶೀಲನೆ ಮಾಡುವುದು ಹಾಗೂ ನೀರು ಕಲುಷಿತಗೊಳ್ಳುವ ಮೂಲಗಳ ಬಿಂದುಗಳನ್ನು ಗುರುತಿಸಬೇಕು. ಗ್ರಾಮ ಪಂಚಾಯಿತಿಗಳು ಬ್ಲೀಚಿಂಗ್ ಪೌಡರ್‍ಗಳು ಸಾಕಷ್ಟು ದಾಸ್ತಾನುಗಳನ್ನು ಇರಿಸಿಕೊಳ್ಳಬೇಕು ಮತ್ತು ಬಳಸುವಿಕೆಯ ವಿಧಾನಗಳಿಗನುಸಾರ ಉಪಯೋಗಿಸಬೇಕು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಗ್ರಾಮ ಪಂಚಾಯಿತಿಗಳಲ್ಲಿ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿಗಳ ಪಂಪ್ ಆಪರೇಟರ್‍ಗಳು, ಗ್ರಾಮಪಂಚಾಯಿತಿ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜತೆಗೆ ಕಾಯಿಸಿ ಆರಿಸಿದ ನೀರನ್ನು ಕುಡಿಯುವಂತೆ ಜನರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸುರಕ್ಷಿತ ಕುಡಿಯುವ ನೀರು ಬಳಕೆ ಕುರಿತಂತೆ ಈಗಾಗಲೇ ಜೂನ್ 11 ರಿಂದ ಸ್ವಚ್ಛತಾ ಅಭಿಯಾನ ಪ್ರಾರಂಭವಾಗಿದ್ದು, ಒಂದು ವಾರಗಳ ಕಾಲ ನಡೆಯುವ ಸ್ವಚ್ಛತಾ ಅಭಿಯಾನವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಛಾಯಾಚಿತ್ರಗಳೊಂದಿಗೆ ವರದಿಯನ್ನು ಜೂನ್ 21ರೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ತಿಳಿಸಿದರು.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ಉದ್ಯೋಗದಲ್ಲಿ ಮಾನವ ದಿನಗಳ ಸೃಜನೆ, ಸಂಚಿತ ಮತ್ತು ವಾರ್ಷಿಕ ಗುರಿಗೆ ಶೇಕಡವಾರು ಸಾಧನೆ, ಎಚ್‍ಹೆಚ್‍ಜಿ ಶೆಡ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್ ಸೇರಿದಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version