Connect with us

    ಮೊಳಕಾಲ್ಮುರಿನಲ್ಲಿ ಬೀದಿ ಬದಿ ಬಂಗಾರದ ನಾಣ್ಯಕ್ಕೆ ಹುಡುಕಾಟ !

    ಮುಖ್ಯ ಸುದ್ದಿ

    ಮೊಳಕಾಲ್ಮುರಿನಲ್ಲಿ ಬೀದಿ ಬದಿ ಬಂಗಾರದ ನಾಣ್ಯಕ್ಕೆ ಹುಡುಕಾಟ !

    ಚಿತ್ರದುರ್ಗ ನ್ಯೂಸ್‌.ಕಾಂ

    ವಿಜಯನಗರ ಕಾಲದಲ್ಲಿ ಹಾದಿ,‌ ಬೀದಿಯಲ್ಲಿ‌ ಮುತ್ತ ರತ್ನ ಮಾರುತ್ತಿದ್ದರು ಎನ್ನುವ ಇತಿಹಾಸ ಕೇಳಿದ್ದೇವೆ, ಓದಿದ್ದೇವೆ. ಅದೇ ವಿಜಯನಗರ ಪಕ್ಕದ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಆಗ್ಗಾಗೆ ಇಂಥ ಬಂಗಾರದ ನಾಣ್ಯಗಳು ಸಿಗುವ ಸುದ್ದಿ ಬರುತ್ತಲೇ‌ ಇವೆ. ಇದೀಗ ಹೆದ್ದಾರಿ ಪಕ್ಕದಲ್ಲಿ ಚಿನ್ನದ ನಾಣ್ಯಗಳ ಹುಡುಕಾಟ ಜೋರಾಗಿದೆ.

    ತಾಲ್ಲೂಕಿನ ಕೆಳಗಳಹಟ್ಟಿ ಬಳಿ ಹೆದ್ದಾರಿ ಪಕ್ಕದ ಗುಡ್ಡಗಾಡು ಪ್ರದೇಶದಲ್ಲಿ ಜನರು ಭಾನುವಾರ ಮುಂಜಾನೆಯಿಂದಲೇ ಪೈಪೋಟಿಗೆ ಬಿದ್ದಂತೆ ನಾಣ್ಯಗಳನ್ನು ಹುಡುಕಾಟ ನಡೆಸುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಯಾರೋ ಬಂಗಾರದ ನಾಣ್ಯ ಎಸೆದು ಹೋಗಿದ್ದಾರೆ ಎಂದು ವದಂತಿ ಹಬ್ಬುತ್ತಿದ್ದಂತೆ ಆಟೋ, ಬೈಕ್‌ಗಳಲ್ಲಿ ಸ್ಥಳಕ್ಕೆ ಆಗಮಿಸಿದ ಜನರು ಜನ ಮರಳೋ, ಜಾತ್ರೆ ಮರಳೋ ಎಂಬಂತೆ ನಾಣ್ಯಕ್ಕಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.

    ಇದನ್ನೂ ಓದಿ: ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷ; ಹಿರಿಯೂರು ಬಳಿ ತುರ್ತು ಭೂಸ್ಪರ್ಶ

    ಕೆಲವರಿಗೆ ಒಂದೆರಡು ನಾಣ್ಯಗಳು ಸಿಕಿದ್ದು, ಆದರೆ ಅವು ಬಂಗಾರ ಲೇಪಿತ ಎನ್ನಲಾಗುತ್ತಿದೆ. ನಾಣ್ಯಗಳ ಮೇಲೆ ‘ವಿಕ್ಟೋರಿಯನ್‌ ಡಿ.ಜೆ’ ಎಂಬ ಸಾಲಿನ ಜತೆ ಬ್ರಿಟಿಷ್‌ ರಾಣಿ ಹೋಲುವಂತಹ ಚಿತ್ರವನ್ನು ಮುದ್ರಿಸಲಾಗಿದೆ. ಈ ನಾಣ್ಯಗಳನ್ನು ನಕಲಿ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮುರು ಪೊಲೀಸರು ನಾಣ್ಯಗಳನ್ನು ವಶಕ್ಕೆ ಪಡೆದು ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

    ಕಳೆದ ಡಿ.19 ರಂದು ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾಸಾಪುರ ಕೊರಚರಹಟ್ಟಿಯ ಹನುಮಂತಪ್ಪ (25)ನನ್ನು ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಪೊಲೀಸರು ಬಂಧಿಸಿದ್ದರು. ಈ ವೇಳೆ ಮತ್ತೊಬ್ಬ ಆರೋಪಿ ಸಂಡೂರು ತಾಲ್ಲೂಕಿನ ತಿಮ್ಮಲಾಪುರ ಕೊರಚರಹಟ್ಟಿಯ ರಾಮಾಂಜಿನೇಯ ತಲೆ ಮರೆಸಿಕೊಂಡಿದ್ದ.

    ಡಿ.2ರಂದು ಆಂಧ್ರದ ಮಿನಿಗಾ ವಿಜಯ್ ಎಂಬವರಿಗೆ ಹನುಮಂತಪ್ಪ ಕರೆ ಮಾಡಿ, ‘ನಮ್ಮದು ಹುಬ್ಬಳ್ಳಿ. ಅಲ್ಲಿ ನಮ್ಮ ಮನೆಯನ್ನು ನೆಲಸಮ ಮಾಡುವಾಗ 5 ಕೆ.ಜಿ. ಬಂಗಾರದ ನಾಣ್ಯಗಳು ಸಿಕ್ಕಿವೆ. ಹುಬ್ಬಳ್ಳಿಯಲ್ಲಿ ಇವುಗಳನ್ನು ಮಾರಾಟ ಮಾಡುವುದು ಕಷ್ಟ ಎಂದು ಇಲ್ಲಿ ಮಾರುತ್ತಿದ್ದೇನೆ. ಮಾರುಕಟ್ಟೆ ದರಕ್ಕಿಂತ ಅರ್ಧಕ್ಕೆ ನೀಡುತ್ತೇನೆ’ ಎಂದು ನಂಬಿಸಿ ₹90 ಲಕ್ಷ ತರುವಂತೆ ಹೇಳಿದ್ದ. ಇದನ್ನು ನಂಬಿದ ಮಿನಿಗಾ ವಿಜಯ್ ಆರೋಪಿಯನ್ನು ಭೇಟಿ ಮಾಡಿ, 2 ನಾಣ್ಯ ಪಡೆದಿದ್ದರು. ಇವು ಅಸಲಿ ನಾಣ್ಯಗಳು. ನಂತರ ಡಿ. 11ರಂದು ಮತ್ತೆ ಆರೋಪಿಗಳನ್ನು ಸಂಪರ್ಕಿಸಿ ₹8 ಲಕ್ಷ ನಗದು ಕೊಟ್ಟು ನಾಣ್ಯ ನೀಡುವಂತೆ ಹೇಳಿದ್ದರು. ಹಣ ಪಡೆದ ಆರೋಪಿಗಳು, ‘ಇಲ್ಲಿಗೆ ಪೊಲೀಸರು ಬರುತ್ತಿದ್ದು ಸ್ಥಳದಿಂದ ಹೊರಡಿ. ಆಮೇಲೆ ಸಂಪರ್ಕಿಸಿ ನಾಣ್ಯ ನೀಡುತ್ತೇವೆ’ ಎಂದು ಮನವೊಲಿಸಿ, ಅವರ ಮೊಬೈಲ್‌ಗಳನ್ನು ಸಹ ಪಡೆದುಕೊಂಡು ವಂಚಿಸಿದ್ದರು.

    2023ರ ಜನವರಿಯಲ್ಲಿ ಸಹ ಚಿತ್ರದುರ್ಗ ನಗರ ಠಾಣೆ ಪೊಲೀಸರು ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸುತ್ತಿದ್ದ ಹರಪನಹಳ್ಳಿ ತಾಲ್ಲೂಕಿನ ಮಾಚ್ಚಹಳ್ಳಿ ಕೊರಚರಹಟ್ಟಿಯ ಕೆ. ಸುರೇಶ್ (25), ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಚೆಲ್ಲಾಪುರ ಗ್ರಾಮದ ಕೇಶವಮೂರ್ತಿ (30) ಹಾಗೂ ಹರಪನಹಳ್ಳಿ ತಾಲ್ಲೂಕು ವಡೇರಹಳ್ಳಿ ಕೊರಚರಹಟ್ಟಿಯ ಶೇಖರಪ್ಪ (48) ಬಂಧಿಸಿದ್ದರು. ಇವರಿಂದ ಅರ್ಧ ಕೆ.ಜಿ ಯಷ್ಟು ನಕಲಿ ಬಂಗಾರದ ನಾಣ್ಯ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್‌ ಕಾರನ್ನು ವಶಕ್ಕೆ ಪಡೆದಿದ್ದರು.

    ಇದನ್ನೂ ಓದಿ: ಮೂರು ಕರಡಿಗಳಿಂದ ವೃದ್ಧೆ ಮೇಲೆ ದಾಳಿ; ಕರಡಿ ದಾಳಿಯಿಂದ ಬೆಚ್ಚಿಬಿದ್ದ ಜನತೆ

    ತಮ್ಮ ಜಮೀನಿನಲ್ಲಿ ಹೊಲ ಉಳುಮೆ ಮಾಡುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಚಿತ್ರದುರ್ಗ ನಗರ ಹಾಗೂ ಹೊರವಲಯದಲ್ಲಿ ಸಾರ್ವಜನಿಕರನ್ನು ಈ ತಂಡ ನಂಬಿಸಿತ್ತು. ಬಳಿಕ ಒಂದು ಶುದ್ಧ ಬಂಗಾರದ ನಾಣ್ಯ ನೀಡಿ ನಂತರ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಮೋಸ ಮಾಡುತ್ತಿದ್ದರು.

    ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನಕಲಿ ಬಂಗಾರದ ಜಾಲ ಸಕ್ರಿಯಾಗಿದ್ದು, ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ.

     

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top