ಮುಖ್ಯ ಸುದ್ದಿ
ಮಾಳಪ್ಪನಹಟ್ಟಿ ಬಳಿ ಕೊರಚ ಸಮಾಜಕ್ಕೆ 2 ಎಕರೆ ಜಮೀನು: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ
ಚಿತ್ರದುರ್ಗ ನ್ಯೂಸ್:
ಕೊರಚ ಸಮಾಜದ ಬಹುದಿನ ಬೇಡಿಕೆಯಂತೆ ಚಿತ್ರದುರ್ಗ ನಗರದ ಮಾಳಪನಹಟ್ಟಿ ಬಳಿ ಎರಡು ಎಕರೆ ಜಮೀನನ್ನು ಈ ಹಿಂದೆಯೇ ಗುರುತಿಸಿಲಾಗಿದೆ. ಪ್ರಾಮಾಣಿಕ ಪ್ರಯತ್ನ ಮಾಡಿ ಶೀಘ್ರದಲ್ಲೇ ಭೂಮಿಯನ್ನು ಕೊಡಿಸುವುದಾಗಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭರವಸೆ ನೀಡಿದರು.
ತರಾಸು ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಿಂಗಪೂಜೆ-ಕಾಯಕ ಶರಣ ತತ್ವದ ಮೂಲಗಳು. ಆದರೆ ಎರೆಡರಲ್ಲಿ ಲಿಂಗಪೂಜೆಗಿಂತ ಕಾಯಕ ಶ್ರೇಷ್ಠ ಎನ್ನುವುದನ್ನು ಶಿವಶರಣ ಶ್ರೀ ನುಲಿಯ ಚಂದಯ್ಯನವರು ಜಗತ್ತಿಗೆ ಸಾರಿದ್ದಾರೆ. ‘ಗುರುವಾದರೂ ಕಾಯಕದಿಂದಲೇ ಮುಕ್ತಿ. ಲಿಂಗವಾದರೂ ಕಾಯಕದಿಂದಲೇ ವೇಷದ ಪಾಶ ಹರಿಯುವುದು’ ಎಂಬ ಅವರ ಮಾತುಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.
ನಾವು ಮಾಡುವ ದಾಸೋಹವು ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ಹಣದಲ್ಲಿ ಮಾಡಬೇಕು. ಅಪ್ರಮಾಣಿಕವಾಗಿ ದುಡಿದು ದಾಸೋಹ ಮಾಡುವವರನ್ನು ಖಂಡಿಸಿದ ನುಲಿಯ ಚಂದಯ್ಯನವರು ‘ಕಂದಿಸಿ, ಬಂದಿಸಿ, ಕಂಡವರ ಬೇಡಿ ತಂದು ಜಂಗಮಕ್ಕೆ ಮಾಡಿದೆನೆಂಬ ದಂದುಗದೋಹರ ಲಿಂಗಕ್ಕೆ ನೈವೇದ್ಯವಲ್ಲ’ ಎಂದಿದ್ದಾರೆ ಎಂದು ಶಾಸಕ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ನುಲಿಯ ಚಂದಯ್ಯನವರು ಕಾಯಕ ನಿಷ್ಠೆಗೆ ಹೆಸರಾದವರು. ಈಗಲೂ ಕೊರಚ ಸಮಾಜದವರು ಕಷ್ಟಪಟ್ಟು ದುಡಿಮೆ ಮಾಡುತ್ತಾರೆ. ಸರ್ಕಾರ ನೀಡಿರುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸಮಾಜದವರು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.
ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಆರ್.ನಾಗಪ್ಪ ಉಪನ್ಯಾಸ ನೀಡುತ್ತಾ, 12ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯ ಶಿಂದಗಿ ತಾಲೂಕಿನ ಶಿವಣಗಿ ಗ್ರಾಮದಲ್ಲಿ ನುಲಿಯ ಚಂದಯ್ಯನವರ ಜನ್ಮವಾಯಿತು. ಶಿವಶರಣರ ಸಾಂಗತ್ಯದಲ್ಲಿ ಇದ್ದ ನುಲಿಯ ಚಂದಯ್ಯನವರು ಬಸವಕಲ್ಯಾಣದ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಸವಕಲ್ಯಾಣದ ತ್ರಿಪುರಾಂತಕ ಕೆರೆಯ ಬದಿಯ ಗದ್ದುಗೆಯ ಬಳಿಯ ಕಲ್ಲಿನ ಕೆತ್ತನೆಯಲ್ಲಿ ನುಲಿಯ ಚಂದಯ್ಯ ಖಡ್ಗ ಹಿಡಿದ ಚಿತ್ರವಿದೆ. ಪ್ರತಿನಿತ್ಯವು ನುಲಿಯ ಕಾಯಕ ಮಾಡಿ ಚಂದಯ್ಯ ದಾಸೋಹ ನೆಡೆಸುತ್ತಿದ್ದರು. ಇದುವರೆಗೂ ನುಲಿಯ ಚಂದಯ್ಯನವರ 48 ವಚನಗಳನ್ನು ಗುರುತಿಸಲಾಗಿದೆ. ಕಲ್ಯಾಣ ಕ್ರಾಂತಿ ನಂತರ ಉಳವಿಗೆ ಆಗಮಿಸಿದ ಚಂದಯ್ಯ ಅಲ್ಲಿಂದ ಮಲೆನಾಡಿನ ಮೂಲಕ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನುಲೇನೂರಿಗೆ ಆಗಮಿಸಿ ಅಲ್ಲಿಯೇ ಜೀವನ ಸಾಗಿಸಿದರು. ಇಂದಿಗೂ ನುಲೇನೂರಿನಲ್ಲಿ ಚಂದಯ್ಯನವರಿಗೆ ಸಂಬಂದ ಪಟ್ಟ ಚಿಕ್ಕ ಮಂಟಪಗಳನ್ನು ಕಾಣಬಹದು ಎಂದರು.
ಕಾರ್ಯಕ್ರಮದಲ್ಲಿ ಸದ್ಗುರು ಓಂಕಾರ ಹುಚ್ಚಲಿಂಗಸ್ವಾಮೀಜಿ, ಈಚಲನಾಗೇನಹಳ್ಳಿಯ ಗೋವಿಂದ ಸ್ವಾಮೀಜಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಕೊರಚ ಮಹಾ ಸಂಘದ ರಾಜ್ಯಧ್ಯಕ್ಷ ಹೆಚ್.ಎನ್.ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಕುಮಾರ್, ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಕೃಷ್ಣಪ್ಪ, ಕೊರಚ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಎನ್. ಹಾಗೂ ದ್ವಾರಕನಾಥ್ ಉಪಸ್ಥಿತರಿದ್ದರು.
ಕೊರಚ, ಕೊರಮ, ಭಜಂತ್ರಿಯಂತಹ ಹಲವು ಸಣ್ಣ ಸಮಾಜಗಳನ್ನು ಗುರುತಿಸಿದ ಕೀರ್ತಿ 12ನೇ ಶತಮಾನದ ಬಸವಣ್ಣನವರಿಗೆ ಸಲ್ಲುತ್ತದೆ. ಶಿವಶರಣ ನುಲಿಯ ಚಂದಯ್ಯನವರು ತೋರಿದ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ಪೂಜೆ ಮಾಡಿದರೆ ಲಕ್ಷ್ಮೀ ಒಲಿಯುವುದಿಲ್ಲ. ಕಾಯಕ ಮಾಡಿದರೆ ಲಕ್ಷ್ಮೀ ಮನೆ ಬಾಗಿಲಿಗೆ ಬರುತ್ತಾಳೆ. ದಾಸೋಹಕ್ಕಿಂತ ಮಿಗಿಲಾದ ದೇವರ ಪೂಜೆ ಇಲ್ಲ. ನೊಂದವರ ಕಣ್ಣೀರು ಒರೆಸಿ, ಆಸರೆ ನೀಡಬೇಕು. ಕರುಣೆ, ದಾನ ಧರ್ಮದಲ್ಲಿ ದೇವರಿದ್ದಾನೆ. ಹೃದಯ ಶ್ರೀಮಂತಿಕೆ ಇಟ್ಟುಕೊಂಡು ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಎಲ್ಲರೂ ಮಾಡಬೇಕು.
| ಶ್ರೀ ಬಸವಪ್ರಭು ಸ್ವಾಮೀಜಿ, ಮುರುಘಾ ಮಠ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)