Connect with us

    Sirigere Swamiji: ನಮ್ಮ ಹೋರಾಟ ಸಿರಿಗೆರೆ ಸ್ವಾಮೀಜಿ ವಿರುದ್ಧವಲ್ಲ | ನಾವು ಹೈಕೋರ್ಟ್‌ ಮೆಟ್ಟಿಲೇರಿಲ್ಲ | ರೈತ ಮುಖಂಡರ ಸ್ಪಷ್ಟನೆ

    TARABALU 1

    ಮುಖ್ಯ ಸುದ್ದಿ

    Sirigere Swamiji: ನಮ್ಮ ಹೋರಾಟ ಸಿರಿಗೆರೆ ಸ್ವಾಮೀಜಿ ವಿರುದ್ಧವಲ್ಲ | ನಾವು ಹೈಕೋರ್ಟ್‌ ಮೆಟ್ಟಿಲೇರಿಲ್ಲ | ರೈತ ಮುಖಂಡರ ಸ್ಪಷ್ಟನೆ

    CHITRADURGA NEWS | 24 SEPTEMBER 2024
    ಚಿತ್ರದುರ್ಗ: ನೀರಿನ ವಿಚಾರದಲ್ಲಿ ಮಠದ ವಿರುದ್ಧ, ಸಿರಿಗೆರೆ ಸ್ವಾಮೀಜಿ ವಿರುದ್ಧ ನಾವು ಹೈಕೋರ್ಟ್ ಮೆಟ್ಟಿಲೇರಿರಲಿಲ್ಲ ಎಂದು ಹೊನ್ನಾಳಿ ತಾಲ್ಲೂಕಿನ ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

    2022ರಲ್ಲಿ ಆರಂಭಗೊಂಡ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಕೈಗೊಳ್ಳಲು ನಮ್ಮ ವಿರೋಧವಿರಲಿಲ್ಲ. ಆದರೆ, 250 ರೈತರ ಜಮೀನುಗಳಲ್ಲಿ ಹಾದುಹೋಗುವ ಪವರ್‌ಲೈನ್‌ ಬಗ್ಗೆ ತಕರಾರು ಇತ್ತು ಎಂದು ಬೀರಗೊಂಡನಹಳ್ಳಿ ಗ್ರಾಮದ ರೈತ ಮುಖಂಡರಾದ ಬಿ.ವೈ.ಪರಮೇಶ್ವರಪ್ಪ ಹಾಗೂ ಜಿ.ಎಂ.ಧನಂಜಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಈ ರೈತರ ಜಮೀನುಗಳಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ಇದೇ ಸಾಮರ್ಥ್ಯದ ಪವರ್‌ ಲೈನ್ ಇದೆ. ಅದು ಬಿದರಗಡ್ಡೆಯಿಂದ ಲಿಂಗದಹಳ್ಳಿಗೆ ಹಾದು ಹೋಗಿದೆ. ಅಲ್ಲಿಂದ ಈ ಪವರ್ ಲೈನ್ ಕಾಮಗಾರಿ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ಇದರಿಂದ ₹ 750 ಕೋಟಿಗೆ ಬದಲಾಗಿ ಕೇವಲ ₹ 100 ಕೋಟಿಯಿಂದ ₹ 150 ಕೋಟಿಯೊಳಗೆ ಕಾಮಗಾರಿ ಮುಗಿಸಬಹುದಿತ್ತು. ಅಂದಾಜು ₹ 600 ಕೋಟಿಗೂ ಹೆಚ್ಚು ಹಣ ಉಳಿತಾಯವಾಗುತ್ತಿತ್ತು ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 24 | ನಿರುದ್ಯೋಗಿಗಳಿಗೆ ಉದ್ಯೋಗ, ಹಠಾತ್ ಆರ್ಥಿಕ ಲಾಭ, ಅಧಿಕಾರಿಗಳ ಬೆಂಬಲದಿಂದ ಬಡ್ತಿ

    ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಾವು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲೂ ಈ ವಿಷಯ ಪ್ರಸ್ತಾಪಿಸಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ನಾವು ಅವರ ವಿರುದ್ಧ ಕೊರ್ಟ್‍ಗೆ ಹೋಗಿದ್ದೇವೆ ಎಂದು ಪದೇ ಪದೇ ಹೇಳುತ್ತಿರುವುದರಿಂದ ನಮ್ಮ ಮನಸ್ಸಿಗೂ ನೋವಾಗಿದೆ. 250 ರೈತರಿಗೆ ಆಗಲಿದ್ದ ತೊಂದರೆ ತಪ್ಪಿಸಬೇಕೆಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಸನಿಹದಲ್ಲೇ ಇರುವ ಪವರ್‌ಲೈನ್‌ನಿಂದ ಕಾಮಗಾರಿ ಕೈಗೊಳ್ಳುವಂತೆ ನಾವು ಒಟ್ಟು 26 ಜನ ಹೈಕೋರ್ಟ್ ಮೆಟ್ಟಿಲೇರಿದ್ದೆವು ಎಂದು ಹೇಳಿದರು.

    ನಮ್ಮ ಮನವಿಗೆ ಸ್ಪಂದಿಸಿದ್ದರೆ 50 ರೈತರಿಗೆ ಮಾತ್ರ ತೊಂದರೆಯಾಗುತ್ತಿತ್ತು. ಈ ಕಾರಣಕ್ಕಾಗಿಯೇ, ಕೃಷಿಕರ ಹಿತದೃಷ್ಟಿಯಿಂದ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೆವು. ನಮ್ಮ ಹೋರಾಟ ಮಠದ ವಿರುದ್ಧವಾಗಲೀ ಅಥವಾ ಸ್ವಾಮೀಜಿ ವಿರುದ್ಧವಾಗಲೀ ಅಲ್ಲ ಎಂದು ಸ್ಪಷ್ಟಪಡಿಸಿದರು.

    ಕ್ಲಿಕ್ ಮಾಡಿ ಓದಿ: ರೈತನೆಂಬ ಕೃಷಿ ವಿಜ್ಞಾನಿಯನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಈ ವಿಷಯವನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅವರ ಗಮನಕ್ಕೆ ತಂದಿದ್ದೆವು. ಆದರೆ, ಅವರು ಸ್ವಾಮೀಜಿ ಅವರಿಗೆ ಇದನ್ನು ಹೇಳಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಸ್ವಾಮೀಜಿ ನಮ್ಮನ್ನು ದೂರುವ ಬದಲು ಬಸವರಾಜಪ್ಪ ಅವರನ್ನು ಕರೆದು ಕೇಳಲಿ ಎಂದರು.

    ಹೈಕೋರ್ಟ್ ನಮ್ಮ ಮನವಿ ಆಲಿಸಿ ಜಮೀನುಗಳಲ್ಲಿ ಕಾಲಿಡದಂತೆ ಆದೇಶಿಸಿತ್ತು. ತಡೆಯಾಜ್ಞೆ ಎರಡು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. 2024ರ ಮಾರ್ಚ್ 7ರಂದು ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತು. ಅದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯಕ್ಕೆ ಹೋಗದೆ ಸುಮ್ಮನಾಗಿದ್ದೇವೆ. ಇನ್ನು ಮುಂದಾದರು ಸ್ವಾಮೀಜಿ ನಮ್ಮ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

    ರೈತ ಮುಖಂಡರಾದ ಗಣೇಶಪ್ಪ ಬೀರಗೊಂಡನಹಳ್ಳಿ, ಹಾಲೇಶಪ್ಪ ಉಜ್ಜಿನಿಪುರ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top