ಮುಖ್ಯ ಸುದ್ದಿ
ಮುರುಘಾ ಮಠದಲ್ಲಿ ಹೊಸ ಬೆಳವಣಿಗೆ | ಕಂಚಿನ ಪ್ರತಿಮೆಯಿಟ್ಟು ಶೂನ್ಯಪೀಠಾರೋಹಣ
ಚಿತ್ರದುರ್ಗ ನ್ಯೂಸ್.ಕಾಂ: ಮುರುಘಾ ಮಠದ ರಾಜಾಂಗಣ ಬುಧವಾರ ಬೆಳಗ್ಗೆ ಹೊಸ ಬೆಳವಣಿಗೆಗೆ ಸಾಕ್ಷಿಯಾಯಿತು.
ಮಠದಲ್ಲಿ ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ದಸರಾ ಕಾರ್ಯಕ್ರಮದಲ್ಲಿ ಪೀಠಾಧ್ಯಕ್ಷರಾಗಿದ್ದ ಗುರುಗಳು ಶೂನ್ಯ ಪೀಠಾರೋಹಣ ಮಾಡುವುದು ವಾಡಿಕೆ ಅಥವಾ ಸಂಪ್ರದಾಯ.
ಆದರೆ, ಇದೇ ಮೊದಲ ಬಾರಿಗೆ ಮಠದ ಕರ್ತೃವಾದ ಶ್ರೀ ಮುರುಗಿ ಶಾಂತವೀರ ಸ್ವಾಮಿಗಳ ಕಂಚಿನ ಪ್ರತಿಮೆ ಇಟ್ಟು ಪೀಠಾರೋಹಣ ನೆರವೇರಿಸಲಾಯಿತು.
ಬೆಳಗ್ಗೆ ಮಠದಲ್ಲಿರುವ ಮುರುಗಿ ಶಾಂತವೀರ ಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಆನಂತರ ಮಠದ ಸಾವಿರಾರು ಭಕ್ತರು ಹಾಗೂ ವಿವಿಧ ಭಕ್ತರ ಸಮ್ಮುಖದಲ್ಲಿ ಮುರುಘಾ ಪರಂಪರೆಯ ಗುರುಗಳು ಧರಿಸುತ್ತಿದ್ದ ಚಿನ್ನದ ಕಿರೀಟ, ಚಿನ್ನದ ಪಾದುಕೆ, ಬೆಳ್ಳಿ ಗದೆ ಸೇರಿದಂತೆ ವಿವಿಧ ವಸ್ತುಗಳನ್ನು ತರಲಾಯಿತು.
ಮುರುಗಿ ಶಾಂತವೀರ ಸ್ವಾಮಿಗಳ ಕಂಚಿನ ಪ್ರತಿಮೆಯನ್ನು ಶೂನ್ಯಪೀಠದ ಮೇಲೆ ಪ್ರತಿಷ್ಠಾಪಿಸಿ, ಚಿನ್ನದ ಕಿರೀಟವನ್ನು ಶರಣ ಸಂಸ್ಕೃತಿ ಉತ್ಸವ ಸೀಮಿತ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್ ಹಿಡಿದು ನಿಂತಿದ್ದರು. ನ್ಯಾಯವಾದಿ ಪ್ರತಾಪ್ ಜೋಗಿ ಬೆಳ್ಳೆ ಗದೆ ಹಿಡಿದು ಮತ್ತೊಂದು ಬದಿಗೆ ನಿಂತರು.
ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿ, ಶ್ರೀಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ತಿಪ್ಪೇರುದ್ರಸ್ವಾಮಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.