ಮುಖ್ಯ ಸುದ್ದಿ
SILVER JUBILEE; ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ | ಭೋವಿ ಗುರುಪೀಠದಲ್ಲಿ ಪೂರ್ವಭಾವಿ ಸಭೆ

CHITRADURGA NEWS | 07 JULY 2024
ಚಿತ್ರದುರ್ಗ: ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಧೀಕ್ಷೆ ಪಡೆದು 25 ವರ್ಷ (SILVER JUBILEE) ಸಂದಿರುವ ಹಿನ್ನೆಲೆಯಲ್ಲಿ ಮಠದ ಭಕ್ತರು, ಸಮುದಾಯದಿಂದ ದೀಕ್ಷಾ ರಜತ ಮಹೋತ್ಸವ ಆಚರಿಸಲು ತೀರ್ಮಾನಿಸಲಾಯಿತು.
ಜುಲೈ 20 ಶನಿವಾರ ಚಿತ್ರದುರ್ಗ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ದೀಕ್ಷಾ ರಜತ ಮಹೋತ್ಸವ ನಡೆಸಲು ದಿನಾಂಕ ನಿಗಧಿ ಮಾಡಲಾಗಿದೆ.

ಇದನ್ನೂ ಓದಿ: MERCHANTS BANK; ಚಿತ್ರದುರ್ಗ ಮರ್ಚೆಂಟ್ಸ್ ಬ್ಯಾಂಕ್ ಹೊಸ ಮೈಲುಗಲ್ಲು | ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ಬಣ್ಣನೆ
ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಜಾಗೃತಿ ಮೂಡಿಸುವ ಕೆಲಸ ಮಾಡದಿದ್ದರೆ ಸಂಘಟನಾ ಮನೋಭಾವ ಇಲ್ಲವಾಗುತ್ತದೆ. ಸಮುದಾಯಕ್ಕೆ ಸಂಘಟನೆ ಮೂಲಕ ಜಾಗೃತಿ ಮೂಡಿಸಿದರೆ ರಾಜಕೀಯವಾಗಿ ತೀಕ್ಷ್ಣತೆ ಬೆಳೆಸಿಕೊಳ್ಳುತ್ತಾರೆ. ಚಿಕ್ಕ ಸಭೆಗಳೇ ಬೃಹತ್ ಸಭೆಗಳಾಗಿ ಹೊರಹೊಮ್ಮುತ್ತವೆ ಹಾಗಾಗಿ ನಿರಂತರವಾಗಿ ಸಂಘಟಿಸಬೇಕು ಎಂದರು.
ಜನರು ವಿಧಾನಸಭೆಯ ಹೊರಗೆ ಧ್ವನಿ ಎತ್ತಬೇಕು, ಜನಪ್ರತಿನಿಧಿಗಳು ವಿಧಾನಸಭೆಯ ಒಳಗೆ ಸಮಾಜದ ಧ್ವನಿಯಾದಾಗ ಮಾತ್ರ ಸಂಘಟನೆಯಾದಂತೆ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು. ಸಂಘಟನೆ ಜನರ ಜೊತೆ ಇರಬೇಕು ಆಗ ಗಟ್ಟಿಯಾಗುತ್ತದೆ ಹಾಗೂ ಜನರ ಜೊತೆ ಸದಾಕಾಲ ಸಧೃಢವಾಗಿ ಉಳಿಯಲು ಮತ್ತು ಬದುಕಲು ಅವಕಾಶ ಒದಗಿಸುತ್ತದೆ. ಕುಟುಂಬದ ಬಗ್ಗೆ ಹೇಗೆ ಸಮಾಲೋಚನೆ ಮಾಡುತ್ತೇವೆಯೋ ಅದೇ ರೀತಿ ಸಮಾಜ ಸಂಘಟನೆಯ ಬಗ್ಗೆ ನಿರಂತರ ಯೋಜನೆ ಮತ್ತು ಸಮಾಲೋಚನೆ ಮಾಡಬೇಕು. ಆರ್ಥಿಕವಾಗಿ ಸಬಲತೆ ಇರುವ ಸಮಾಜಕ್ಕೆ ಗೌರವ ಹೆಚ್ಚು ಹಾಗಾಗಿ ಶಿಕ್ಷಣ, ಆರ್ಥಿಕ ಸಬಲತೆಗೆ ಹೆಚ್ಚು ಮಹತ್ವ ಕೊಡಬೇಕು, ಸಮಾಜಕ್ಕೆ ಅವಶ್ಯಕವಾದ ಹಕ್ಕುಗಳನ್ನು ಪೂರೈಕೆಗೆ ಸದಾಕಾಲ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಪ್ರತಿಭಾ ಪುರಸ್ಕಾರ
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಕಳೆದ 25 ವರ್ಷಗಳಿಂದ ನಿರಂತರವಾಗಿ ಸಮಾಜ ಸಂಘಟನೆ ಮಾಡಿಕೊಂಡು ಬರುತ್ತಿರುವ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಧಿಕ್ಷೆ ಪಡೆದ ರಜತ ಮಹೋತ್ಸವ ಜುಲೈ 20 ರಂದು ನಡೆಯಲಿದ್ದು, ಸಮಾಜ ಬಾಂಧವರು ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಕರೆ ನೀಡಿದರು.
ದೀಕ್ಷಾ ರಜತ ಮಹೋತ್ಸವದ ಅಂಗವಾಗಿ 25 ಬಗೆಯ ಕಿರು ಕಾರ್ಯಕ್ರಮಗಳನ್ನು ಸಂಘಟಿಸಿ ಅರ್ಥಪೂರ್ಣಗೊಳಿಸೋಣ. ಶ್ರೀಗಳು ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಸಂಘಟನೆಯಾಗಲು ಕಾರಣೀಭೂತರಾಗಿದ್ದಾರೆ. ವಿದ್ಯಾವಂತರು ಸಂಘಟನೆಗೆ ಸಮಯ ನೀಡಬೇಕು ಹಾಗೂ ಸಂಘಟನೆಯ ಭಾಗವಾಗಿ ನಿಲ್ಲಬೇಕು ಎಂದು ಹೇಳಿದರು.
ಇದನ್ನೂ ಓದಿ: ನಿವೃತ್ತರಾದ ಉಪನ್ಯಾಸಕ ಎನ್.ಮಂಜುನಾಥ್ ಬೀಳ್ಕೊಡುಗೆ
ಅಧಿಕಾರಿಗಳು ವೃತ್ತಿಗಂಟಿಕೊಳ್ಳದೆ, ಸ್ವಾರ್ಥಿಗಳಾಗದೇ, ಸಮಷ್ಠಿಯ ಅಭಿವೃದ್ಧಿಗಾಗಿ ನಿಸ್ವಾರ್ಥಿಗಳಾಗಬೇಕು. ಆದಾಯದಲ್ಲಿ ಸ್ವಲ್ಪ ಕುಟುಂಬಕ್ಕೆ, ಸ್ವಲ್ಪ ಸಮಾಜಕ್ಕೆ ಎನ್ನುವ ಭಾವ ಬರಬೇಕು. ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಇದಕ್ಕೆ ಸಮಾಜದ ಶ್ರೀಗಳು ದಿಕ್ಸೂಚಿಯಾಗಿ ಸಾಗುತ್ತಿದ್ದಾರೆ. ಕೂಲಿ ಕಾರ್ಮಿಕ ಮಕ್ಕಳು ಬಾಲಕಾರ್ಮಿಕರಾಗದೇ ವಿದ್ಯಾವಂತರಾಗಲು ಅವರನ್ನು ಗುರುತಿಸಿ, ಪರಿವರ್ತಿಸಿ ಪ್ರೇರಣೆ ನೀಡಬೇಕು. ಭೋವಿ ನಿಗಮ ಕಟ್ಟ ಕಡೆಯ ಭೋವಿ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.
ಭೋವಿ ಅಭಿವೃದ್ಧಿ ನಿಗಮ ಸುಲಿಗೆ ಕೇಂದ್ರವಲ್ಲ, ಸುಧಾರಣಾ ಕೇಂದ್ರವಾಗಿ ಪರಿವರ್ತಿಸುವೆ. ಸೌಲಭ್ಯ ಪಡೆಯದವರಿಗೆ ಸೌಲಭ್ಯ ಕಲ್ಪಿಸಲಾಗುವುದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ, ಅಧಿಕಾರಿಗಳ ದರ್ಪದಿಂದ ನಿಗಮದಲ್ಲಿ ಅವ್ಯವಸ್ಥೆಯಾಗಿದೆ. ಎಸ್‍ಐಟಿ ತನಿಖೆಯಿಂದ ಸತ್ಯ ತಿಳಿಯುತ್ತದೆ ಎಂದರು.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಮಹತ್ವದ ಸಭೆ | ಭದ್ರಾ, ನೇರ ರೈಲು ಹಾಗೂ ಕೈಗಾರಿಕಾ ಕಾರಿಡಾರ್ ಕುರಿತು ಅಧಿಕಾರಿಗಳಿಂದ ಮಾಹಿತಿ
ಭೋವಿ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಸಮುದಾಯಕ್ಕೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಯಾವ ಪಕ್ಷದವರು ಜಿಲ್ಲೆಯಲ್ಲಿ ಟಿಕೇಟ್ ನೀಡಲಿಲ್ಲ. ಟಿಕೇಟ್ ಸಿಗದಿರುವುದಕ್ಕೆ ಒಗ್ಗಟ್ಟಿನ ಕೊರತೆ ಇದೆ. ಟಿಕೇಟ್ ಬೇಕಾದಾಗ ಎಲ್ಲರೂ ಬರುತ್ತಾರೆ, ನಂತರ ಯಾರು ಸೇರುವುದಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಗಳಿಂದ ಮಾತ್ರ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಪ್ರಮುಖರಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹೊಸದುರ್ಗದ ಚಂದ್ರಪ್ಪ, ಹೊಳಲ್ಕೆರೆ ರಂಗಪ್ಪ ಇನ್ನಿತರರು ಮಾತನಾಡಿದರು.
ಇದನ್ನೂ ಓದಿ: ಭ್ರೂಣಲಿಂಗ ಪತ್ತೆ ಮಾಹಿತಿದಾರರಿಗೆ ₹ 1 ಲಕ್ಷ ಬಹುಮಾನ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್
ಕಾರ್ಯಕ್ರಮದಲ್ಲಿ ಎಸ್‍ಜೆಎಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ವಿ.ಹನುಮಂತಪ್ಪ ಗೋಡೆಮನೆ, ಇ.ಮಂಜುನಾಥ, ಹೆಚ್.ಆಂಜನೇಯ, ಹೊಸದುರ್ಗದ ಸುಬ್ಬಯ್ಯ, ರಾಮಚಂದ್ರಪ್ಪ, ಮಂಜಪ್ಪ, ಎನ್.ಪಿ.ಭರತ್, ಚಂದ್ರಶೇಖರ್, ಉಮೇಶ್, ಭೂತಭೋವಿ, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಮತ್ತಿತರರಿದ್ದರು.
