ಮುಖ್ಯ ಸುದ್ದಿ
ಅ.21 ರಿಂದ 25ರವರೆಗೆ ಶರಣ ಸಂಸ್ಕೃತಿ ಉತ್ಸವ | 11 ದಿನಗಳ ಬದಲು 5 ದಿನ ಸರಳ ಉತ್ಸವ
ಚಿತ್ರದುರ್ಗ ನ್ಯೂಸ್.ಕಾಂ: ಮುರುಘಾ ಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ-2023ರ ಆಹ್ವಾನ ಪತ್ರಿಕೆಯನ್ನು ಸೋಮವಾರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಮುರುಘಾ ಮಠದ ಉಸ್ತುವಾರಿಗಳಾದ ಶ್ತೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ನಾಡಿನಲ್ಲಿ ಎರಡನೇ ದಸರಾ ಎಂದೇ ಖ್ಯಾತಿ ಪಡೆದಿದೆ ಎಂದರು.
ಈ ವರ್ಷದ ಉತ್ಸವವನ್ನು 11 ದಿನಗಳ ಬದಲಾಗಿ 5 ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತಿದೆ. 2023 ಅಕ್ಟೋಬರ್ 21 ರಿಂದ 25ರವೆರೆಗ ಉತ್ಸವ ನಡೆಯಲಿದೆ ಎಂದು ತಿಳಿಸಿದರು.
ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿದಿನ ದಾಸೋಹ ನಡೆಯುತ್ತದೆ. ಪೀಠಾರೋಹಣ ಕಾರ್ಯಕ್ರಮದಲ್ಲಿ ಮುರುಗಿ ಶಾಂತವೀರ ಸ್ವಾಮಿಗಳ ಭಾವಚಿತ್ರ ಇಟ್ಟು ಶೂನ್ಯಪೀಠಾರೋಹಣ ಸಂಪ್ರದಾಯವನ್ನು ಕಳೆದ ವರ್ಷದಂತೆಯೇ ಮುಂದುವರೆಸಲಾಗುವುದು ಎಂದು ಹೇಳಿದರು.
ಅಕ್ಟೋಬರ್ 21ರಂದು ಬೆಳಗ್ಗೆ 10 ಗಂಟೆಗೆ ಬಸವತತ್ತ್ವ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುವ ಉತ್ಸವದ ಕಾರ್ಯಕ್ರಮಗಳು, ಅದೇ ದಿನ ಬೆಳಗ್ಗೆ 11 ಗಂಟೆಗೆ ಕೃಷಿಮೇಳ, ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ನಡೆಯಲಿದ್ದು, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ಶರಣ ಸಂಸ್ಕøತಿ ಉತ್ಸವಕ್ಕೆ ಮುರುಘಾ ಮಠದಲ್ಲಿ ಸಿದ್ಧತೆ
ಸಂಜೆ 6.30ಕ್ಕೆ ನಡೆಯುವ ಬಸವತತ್ತ್ವ ಸಮಾವೇಶದಲ್ಲಿ ಸಚಿವರಾದ ಡಿ.ಸುಧಾಕರ್, ಈಶ್ವರ ಖಂಡ್ರೆ, ಚಿತ್ರನಟ ದೊಡ್ಡಣ್ಣ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ ಮುಂತಾದವರು ಭಾಗವಹಿಸುವರು.
ಅ.22ರಂದು ಬೆಳಗ್ಗೆ 10ಕ್ಕೆ ಮಹಿಳಾ ಕ್ರೀಡಾಕೂಟ, ಸಂಜೆ 6.30 ಗಂಟೆಗೆ ಯುವಜನ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವರಾದ ಎಂ.ಬಿ.ಪಾಟೀಲ, ಬಿ.ನಾಗೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಮೊದಲಾದವರು ಭಾಗವಹಿಸುವರು.
ಅ.23ರಂದು ಸಂಜೆ 6.30 ಗಂಟೆಗೆ ನಡೆಯುವ ಮಹಿಳಾ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ ಶಶಿಕಲಾ ಜೊಲ್ಲೆ, ಚಿತ್ರನಟಿ ಅಧಿತಿ ಪ್ರಭುದೇವ್ ಮತ್ತಿತರರು ಭಾಗವಹಿಸುತ್ತಾರೆ.
ಅ.24ರಂದು ಅಪರಾಹ್ನ 4 ಗಂಟೆಗೆ ಮೇಲುದುರ್ಗದ ಶ್ರೀ ಮುರುಘಾಮಠದ ಆವರಣದಲ್ಲಿ ಶ್ರೀಗಳಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. ಶ್ರೀಮಠದಲ್ಲಿ ಸಂಜೆ 6.30ಕ್ಕೆ ಮಕ್ಕಳ ಸಂಭ್ರಮ ಏರ್ಪಡಿಸಲಾಗಿದ್ದು, ಬಾಲಪ್ರತಿಭೆಗಳು ಭಾಗವಹಿಸಲಿದ್ದಾರೆ.
ಕೊನೆಯ ದಿನ ಅ.25ರಂದು ಬೆಳಗ್ಗೆ 10 ಗಂಟೆಗೆ ಶೂನ್ಯಪೀಠಾರೋಹಣ, 12 ಗಂಟೆಗೆ ಶ್ರೀ ಜಗದ್ಗುರು ಜಯದೇವ ಜಂಗೀಕುಸ್ತಿ, ಸಂಜೆ 6.30ಕ್ಕೆ ಶರಣಸಂಸ್ಕøತಿ ಉತ್ಸವ ಸಮಾರೋಪ ನಡೆಯಲಿದ್ದು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮೊದಲಾದವರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮಿಗಳು, ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಎಸ್.ಜೆ.ಎಂ. ವಿದ್ಯಾಪೀಠದ ಸಿಇಓ ಎಂ.ಭರತ್ಕುಮಾರ್, ಉಮೇಶ್ ವಕೀಲರು, ಎಸ್.ಪರಮೇಶ್ವರ್ ವೇದಿಕೆಯಲ್ಲಿದ್ದರು.