Connect with us

    ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ವೇಳಾಪಟ್ಟಿ | ಸಿದ್ಧತೆಗಳ ಬಗ್ಗೆ ನಿಗಾ ಇರಿಸಲು ಡಿಸಿ ಸೂಚನೆ

    ಮುಖ್ಯ ಸುದ್ದಿ

    ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ವೇಳಾಪಟ್ಟಿ | ಸಿದ್ಧತೆಗಳ ಬಗ್ಗೆ ನಿಗಾ ಇರಿಸಲು ಡಿಸಿ ಸೂಚನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 09 MARCH 2024

    ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಭಾರತ ಚುನಾವಣಾ ಆಯೋಗವು ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟಿಸಲಿದ್ದು, ಚುನಾವಣೆ ಘೋಷಣೆಯಾದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಎಲ್ಲ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

    ಲೋಕಸಭೆ ಚುನಾವಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಹಶೀಲ್ದಾರ್‍ಗಳ ಜೊತೆಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

    ಇದನ್ನೂ ಓದಿ: ಮೊದಲ ಪಟ್ಟಿಯಲ್ಲಿ ಚಿತ್ರದುರ್ಗದ ಅಭ್ಯರ್ಥಿ ಹೆಸರಿಲ್ಲ

    ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಹಸಿಲ್ದಾರರ ಪಾತ್ರ ಅತಿ ಮುಖ್ಯವಾಗಿದೆ. ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತಂತೆಯೂ ತಹಸಿಲ್ದಾರರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

    ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಕೂಡಲೆ 24 ಗಂಟೆಗಳ ಒಳಗಾಗಿ ಎಲ್ಲ ಫ್ಲೆಕ್ಸ್‍ಗಳು, ಗೋಡೆ ಬರಹಗಳು, ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರೊಂದಿಗೆ ಸಮನ್ವಯ ಮಾಡಿಕೊಂಡು, ತೆರವುಗೊಳಿಸುವುದನ್ನು ಖಚಿತಪಡಿಸಿ ಎಂದು ಸೂಚನೆ ನೀಡಿದರು.

    ಇದನ್ನೂ ಓದಿ: ಡಿಸಿಎಂ ಅಂದ್ರೆ ಡಮ್ಮಿ ಸಿಎಂ

    ಚುನಾವಣೆಗಾಗಿ ಈಗಾಗಲೆ ನಿಗದಿಪಡಿಸಲಾಗಿರುವ ಮತಗಟ್ಟೆಗಳಿಗೆ ಖುದ್ದು ತಹಶೀಲ್ದಾರರು ಭೇಟಿ ನೀಡಿ, ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸಿದ್ಧಪಡಿಸಬೇಕು. ಅದೇ ರೀತಿ ಮತಗಟ್ಟೆಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವಂತೆ ನೋಡಿಕೊಳ್ಳಬೇಕು, ಹಾಗೂ ಈ ಕುರಿತು ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

    ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನೆಟ್‍ವರ್ಕ್ ತೊಂದರೆ ಇರುವುದನ್ನು ಗಮನಿಸಲಾಗಿದ್ದು, ಈ ಕುರಿತು ಎಲ್ಲ ಟೆಲಿಕಾಂ ಕಂಪನಿಗಳ ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿ, ನೆಟ್‍ವರ್ಕ್ ವ್ಯವಸ್ಥೆ ಸಮರ್ಪಕವಾಗಿ ಒದಗಿಸಲು ಸೂಚನೆ ನೀಡಲಾಗಿತ್ತು. ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿನ ಕೆಲವು ಮತಗಟ್ಟೆಗಳ ವ್ಯಾಪ್ತಿಯಲ್ಲಿ ನೆಟ್‍ವರ್ಕ್ ತೊಂದರೆ ಇದೆ, ಇದರಿಂದಾಗಿ ಚುನಾವಣಾ ಕಾರ್ಯಕ್ಕೆ ತೊಂದರೆ ಉಂಟಾಗಲಿದ್ದು, ಕೂಡಲೆ ತಹಸಿಲ್ದಾರರು ಟೆಲಿಕಾಂ ಕಂಪನಿಗಳೊಂದಿಗೆ ಸಮನ್ವಯ ಮಾಡಿಕೊಂಡು, ನೆಟ್‍ವರ್ಕ್ ಸಮರ್ಪಕಗೊಳಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

    ಇದನ್ನೂ ಓದಿ: ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ

    ಚುನಾವಣೆಗಾಗಿ ಈಗಾಗಲೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ನೇಮಕ ಪ್ರಕ್ರಿಕೆಯ ಅಂತಿಮ ಹಂತದಲ್ಲಿದ್ದು, ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಬೇಕಿರುತ್ತದೆ. ಹೀಗಾಗಿ ಚುನಾವಣೆ ಕಾರ್ಯಕ್ಕೆ ನಿಯುಕ್ತಿಗೊಳ್ಳುವ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿಗಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಚುನಾವಣಾ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗುವ ಸ್ಥಳಗಳನ್ನು ಈಗಾಗಲೆ ಗುರುತಿಸಲಾಗಿದೆ. ಅಲ್ಲದೆ ಚೆಕ್‍ಪೋಸ್ಟ್‍ಗಳ ನಿರ್ಮಾಣ ಸಂಬಂಧ ಟೆಂಡರ್ ಪ್ರಕ್ರಿಯೆಯನ್ನು ಕೂಡ ಕೈಗೊಳ್ಳಲಾಗಿದೆ.

    ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ

    ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೂಡಲೆ ಜಿಲ್ಲೆಯಲ್ಲಿ ಈಗಾಗಲೆ ಗುರುತಿಸಲಾಗಿರುವ ಚೆಕ್‍ಪೋಸ್ಟ್‍ಗಳು ಕಾರ್ಯಾರಂಭ ಮಾಡಬೇಕಾಗುತ್ತದೆ. ಹೀಗಾಗಿ ತಹಸಿಲ್ದಾರರು, ಚೆಕ್‍ಪೋಸ್ಟ್ ಸ್ಥಾಪಿಸಲಾಗುವ ಸ್ಥಳಗಳಿಗೆ ಭೇಟಿ ನೀಡಿ, ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಹಾಗೂ ಚೆಕ್‍ಪೋಸ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

    ಸಭೆಯಲ್ಲಿ ಉಪವಿಭಾಗಾದಿಕಾರಿ ಕಾರ್ತಿಕ್, ಜಿಲ್ಲಾ ಎನ್.ಐ.ಸಿ. ಅಧಿಕಾರಿ ಕೆ. ಶಾಸ್ತ್ರಿ, ಸೇರಿದಂತೆ ಜಿಲ್ಲೆಯ ಎಲ್ಲ ತಹಸಿಲ್ದಾರರು, ಚುನಾವಣೆ ಶಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top