ಮುಖ್ಯ ಸುದ್ದಿ
Sasvehalli irrigation: ಶಿವಕುಮಾರ ಸ್ವಾಮೀಜಿ ಹುಟ್ಟೂರು ಮುತ್ತುಗದೂರು ಕೆರೆಗೆ ಹರಿದ ಭದ್ರೆ | ಭಕ್ತರಲ್ಲಿ ಸಂಭ್ರಮ
CHITRADURGA NEWS | 24 SEPTEMBER 2024
ಚಿತ್ರದುರ್ಗ: ತರಳಬಾಳು ಮಠ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟೂರು ಮುತ್ತುಗದೂರಿನ ಕೆರೆಗೆ ಭದ್ರೆ ನೀರು ಹರಿದಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗೆ ಮಂಗಳವಾರ ನೀರು ಹರಿದು ಬಂದಿದೆ. ಈ ಮೂಲಕ ಹಲವು ದಶಕಗಳ ನಿರೀಕ್ಷೆ ಈಡೇರಿದೆ. ನೀರು ಬರುವ ದೃಶ್ಯವನ್ನು ಕಂಡು ರೈತರು ಪುಳಕಿತರಾದರು.
ನೀರು ಬರುತ್ತಿರುವ ವಿಷಯ ತಿಳಿದ ಮುತ್ತುಗದೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ವೀಕ್ಷಿಸಿದರು. ತರಳಬಾಳು ಮಠದ ಹಿರಿಯ ಗುರುಗಳಾದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಅವಧಿಯಲ್ಲೇ ಕೆರೆಗೆ ನೀರು ಹರಿದು ಬಂದಿರುವುದು ಗ್ರಾಮಸ್ಥರಲ್ಲಿ ಸಂತಸ ಉಂಟುಮಾಡಿದೆ.
ಕ್ಲಿಕ್ ಮಾಡಿ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಬೈಕ್ ರ‍್ಯಾಲಿಗೆ ಸಿದ್ದತೆ
ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸಲು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕೈಗೊಳ್ಳಲಾಗಿತ್ತು. ಮಂಗಳವಾರ ಬೆಳಿಗ್ಗೆ ಸಾಸ್ವೆಹಳ್ಳಿಯಿಂದ ಕೊಳವೆ ಮೂಲಕ ನೀರು ಹರಿಸಲಾಯಿತು. ಸಮೀಪದ ಸಾಸಲು ಗ್ರಾಮದ ಬೆಟ್ಟದ ಮೇಲಿನ ನೀರು ವಿತರಣಾ ಸಂಗ್ರಹಣೆ ಸ್ಥಳಕ್ಕೆ ತಲುಪಿ, ಅಲ್ಲಿಂದ ಸಮೀಪದ ಮುತ್ತುಗದೂರು ಕೆರೆಗೆ ಹರಿಯಿತು.
ಕೆರೆಯ ಜಾಕ್‌ವೆಲ್ ಸ್ಥಳದಲ್ಲಿ ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಗುಂಗೆ, ಸಾಸ್ವೆಹಳ್ಳಿ ಏತ ನೀರಾವರಿಯ ಸೂಪರಿಂಟೆಂಡೆಂಟ್ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಎಇಇ, ಮಾಜಿ ಶಾಸಕ ಪಿ.ರಮೇಶ್ ಹಾಗೂ ಮುತ್ತುಗದೂರು ಗ್ರಾಮದ ಮುಖಂಡರಾದ ಎಂ.ಕೆ. ರುದ್ರಪ್ಪ, ಸಾಸಲು ಎಂ. ದೇವರಾಜ್, ಎಚ್.ಎಸ್. ವೀರಣ್ಣ, ಸಾಸಲುಹಳ್ಳ ಓಂಕಾರಸ್ವಾಮಿ, ಜಿವಿಪಿಆರ್ ಕಂಪನಿಯ ವ್ಯವಸ್ಥಾಪಕ ವಿನೋದ್ ರೆಡ್ಡಿ ಇದ್ದರು.