ಮುಖ್ಯ ಸುದ್ದಿ
ಮೂವರು PDO ಗಳ ವೇತನ ಬಡ್ತಿಗೆ ಬ್ರೇಕ್ | ಕಾರಣ ಏನು ಗೊತ್ತಾ ?
CHITRADURGA NEWS | 24 FEBRUARY 2025
ಚಿತ್ರದುರ್ಗ: ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ, ಪ್ರಗತಿ ಸಾಧಿಸುವಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆ ವಿಧಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
Also Read: ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಡಿ.ಸುಧಾಕರ್ | ಪತ್ರದ ಪೂರ್ಣ ವಿವರ ಇಲ್ಲಿದೆ
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕರ ವಸೂಲಾತಿ ಕುರಿತಂತೆ ಆಂದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾ ಪಂಚಾಯತಿ ವತಿಯಿಂದ ಈ ಹಿಂದೆಯೇ ಸೂಚನೆ ನೀಡಲಾಗಿತ್ತು.
ಅಲ್ಲದೆ ಹಲವು ಸಭೆಗಳನ್ನು ಕೈಗೊಂಡು, ಪತ್ರಗಳ ಮೂಲಕ ಹಾಗೂ ವಿಡಿಯೋ ಸಂವಾದ ಮೂಲಕ ತಿಳಿಸಲಾಗಿತ್ತು. ಆದರೆ ಮೂವರು ಗ್ರಾ.ಪಂ. ಪಿಡಿಒ ಗಳು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿರಲಿಲ್ಲ.
ಚಳ್ಳಕೆರೆ ತಾಲ್ಲೂಕು ದೇವರೆಡ್ಡಿಹಳ್ಳಿ ಗ್ರಾ.ಪಂ. ಪಿಡಿಒ ವೇದವ್ಯಾಸಲು ಅವರು ಕರ ವಸೂಲಾತಿಯಲ್ಲಿ ಶೇ. 27.88 ರಷ್ಟು, ಹಿರೇಹಳ್ಳಿ ಗ್ರಾ.ಪಂ. ಪಿಡಿಒ ನರಸಿಂಹಪ್ಪ- ಶೇ. 37.77 ಹಾಗೂ ಹೊಸದುರ್ಗ ತಾಲ್ಲೂಕು ಗುಡ್ಡದ ನೇರಲೆಕೆರೆ ಗ್ರಾ.ಪಂ. ಪಿಡಿಒ ಕುಮಾರ್ ಸಿಂಗ್ ಬಿ.ಎಲ್. ಅವರು ಕೇವಲ ಶೇ. 36.68 ರಷ್ಟು ಮಾತ್ರ ತೆರಿಗೆ ವಸೂಲಾತಿ ಮಾಡಿದ್ದು, ಕತವ್ಯದಲ್ಲಿ ನಿರ್ಲಕ್ಷ್ಯ ತೋರಿ, ಜಿಲ್ಲೆಯ ಪ್ರಗತಿ ಕುಂಠಿತಗೊಳ್ಳಲು ಕಾರಣರಾಗಿದ್ದನ್ನು ಪರಿಗಣಿಸಿ, ಕಾರಣ ಕೇಳಿ ಪಿಡಿಒ ಗಳಿಗೆ ನೋಟಿಸ್ ನೀಡಲಾಗಿತ್ತು, ಈ ನೋಟಿಸ್‍ಗೆ ಸೂಕ್ತ ಸಮಜಾಯಿಷಿ ಸಲ್ಲಿಸಿರುವುದಿಲ್ಲ.
Also Read: ಹೆದ್ದಾರಿಯಲ್ಲಿ ಭೀಕರ ಅಪಘಾತ | ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಹೀಗಾಗಿ ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿ, ಪ್ರಗತಿಗೆ ಕುಂಠಿತರಾಗಲು ಕಾರಣರಾದ ಈ ಮೂವರು ಪಿಡಿಒ ಗಳಿಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆ ವಿಧಿಸಿ ಆದೇಶಿಸಲಾಗಿದೆ ಎಂದು ಜಿ.ಪಂ. ಸಿಇಒ ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.