Connect with us

    ಸಂಶೋಧನೆ, ವಿಮರ್ಶೆ ಪೂರ್ವಗ್ರಹರಹಿತವಾಗಿರಲಿ | ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ

    barguru 1

    ಮುಖ್ಯ ಸುದ್ದಿ

    ಸಂಶೋಧನೆ, ವಿಮರ್ಶೆ ಪೂರ್ವಗ್ರಹರಹಿತವಾಗಿರಲಿ | ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 JULY 2024
    ಚಿತ್ರದುರ್ಗ: ಸಂಶೋಧನೆ, ವಿಮರ್ಶೆ, ಓದು ಪೂರ್ವಗ್ರಹ ಹಾಗೂ ಪಕ್ಷಪಾತ ರಹಿತವಾಗಿರಬೇಕು ಎಂದು ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

    ತಾಲ್ಲೂಕಿನ ಜಿ.ಆರ್‌.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ವಿಷಯ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ‘ಸಂಶೋಧನೆ, ವಿಮರ್ಶೆ ಮಾಡುವವರಿಗೆ ಜಾತಿ, ಧರ್ಮ, ಪಕ್ಷ, ಪಂಥ ಇವೆಲ್ಲವನ್ನೂ ಮೀರಿದ ಮನಸ್ಥಿತಿ ಇರಬೇಕು. ಈ ಸೂಕ್ಷ್ಮವನ್ನು ಸಾಧಿಸುವವನೇ ಸಂಶೋಧನೆ ಹಾಗೂ ವಿಮರ್ಶೆಯ ಹೊಸ ಸಾಧ್ಯತೆಗಳನ್ನು ಹುಡುಕಲು ಸಾಧ್ಯ’ ಎಂದು ತಿಳಿಸಿದರು.

    baraguru 3

    ಚಿತ್ರದುರ್ಗ ತಾಲ್ಲೂಕಿನ ಜಿ.ಆರ್‌.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿದರು.

    ‘ಕಂಡುಕೊಳ್ಳುವ ಕ್ರಿಯೆ ಎಷ್ಟರ ಮಟ್ಟಿಗೆ ಜಾಗೃತವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಸಂಶೋಧನೆ, ವಿಮರ್ಶೆಯ ಸಾಧ್ಯತೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ನಾವು ಕೊಂಡುಕೊಳ್ಳುವುದಕ್ಕೆ ಮಾತ್ರ ಮೀಸಲಾಗದೇ ಕಂಡುಕೊಳ್ಳುವ ಮನುಷ್ಯರಾಗೋಣ’ ಎಂದು ಹೇಳಿದರು.

    ಕ್ಲಿಕ್‌ ಮಾಡಿ ಓದಿ: ನನಗೆ ಅಧಿಕಾರ ದೊಡ್ಡದಲ್ಲ | ಶಾಸಕ ಡಾ.ಎಂ.ಚಂದ್ರಪ್ಪ

    ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸ್ಥಿತ್ಯಂತರಗೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ. ಆದ್ದರಿಂದ ಅಳಿಸಿ ಹೋಗುವುದನ್ನು ಉಳಿಸುವುದು ಸಂಶೋಧನೆಯ ಕೆಲಸವಾಗಬೇಕು’ ಎಂದರು.

    ‘ಸಂಘಟಿತ ವಲಯದ ಸಂಶೋಧನೆಗಳು ಸಾಕಷ್ಟು ನಡೆಯುತ್ತಿದ್ದು, ಇದು ಸ್ವಾಗತಾರ್ಹ. ಆದರೆ ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸಂಶೋಧನೆ ಸ್ಥಿತ್ಯಂತರ, ವಿಸ್ತರಣೆಗೊಳ್ಳಬೇಕಾಗಿದೆ. ಇದು ಹೊಸ ಸವಾಲು ಹಾಗೂ ಹೊಸ ಸಾಧ್ಯತೆಯೂ ಹೌದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ‘ಬರೀ ಹೂವು ನೋಡಿ ಬಹಳ ಸುಂದರವಾಗಿದೆ ಎಂದರೆ ಸಾಲದು, ತನ್ನ ಜೀವನವನ್ನೇ ತೇದು ಹೂವು ಮಾಡಿದ ಮೊಳಕೆಯನ್ನೂ ಜ್ಞಾಪಿಸಿಕೊಳ್ಳಬೇಕು. ಇದು ಮನುಷ್ಯನಿಗೆ ಇರುವ ಜವಾಬ್ದಾರಿ. ಹಾಗೆಯೇ ಸಂಶೋಧನೆಯು ಹಾಗೂ ಸಾಹಿತ್ಯ ಸೃಷ್ಠಿಯೂ ಸಹ ಹೂವುನಿಂದ ಮೊಳಕೆವರೆಗೂ ಬರಬೇಕಾಗಿದೆ’ ಎಂದರು.

    ‘ಸಾಮಾಜಿಕ, ಆರ್ಥಿಕ ಸಂರಚನೆಗೂ ಹಾಗೂ ಸಾಹಿತ್ಯ ಸೃಷ್ಠಿ, ಸಂಶೋಧನೆಗೆ ಸಂಬಂಧ ಇದೆ. ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯ ಬೆಳವಣಿಗೆಗಳು ಸಾಹಿತ್ಯ, ಸಂಶೋಧನೆಯ ಮೇಲೆ ಪರಿಣಾಮ ಬೀರುತ್ತವೆ. ಆ ಸಂರಚನೆಯಯಲ್ಲಿಯೇ ಶ್ರೇಣಿಗಳಿರುತ್ತವೆ. ಕೆಲವು ಶ್ರೇಣಿಗಳು ನಮಗೆ ಎದ್ದು ಕಾಣಿಸುತ್ತವೆ ಅದನ್ನು ನಾವು ಪ್ರಧಾನ ಎಂದು ಭಾವಿಸುತ್ತೇವೆ. ಇನ್ನೂ ಕೆಲವು ಕಾಣಿಸುವುದಿಲ್ಲ ಅದನ್ನು ಅಧೀನ ಎಂದು ತಿಳಿದುಕೊಳ್ಳತ್ತೇವೆ’ ಎಂದು ತಿಳಿಸಿದರು.

    ಕ್ಲಿಕ್‌ ಮಾಡಿ ಓದಿ: ಬಸವಣ್ಣ ಪಠ್ಯಕ್ಕೆ ‘ವೀರಶೈವ’ ಪದ ಸೇರಿಸಬೇಡಿ | ಮುಖ್ಯಮಂತ್ರಿಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರ

    ‘ಸಾಮಾಜಿಕ, ಆರ್ಥಿಕ ಸಂರಚನೆಯ ತಿಳುವಳಿಕೆ ಇದ್ದರೆ ಆ ತಿಳುವಳಿಕೆ ಮೂಲಕ ಸಾಹಿತ್ಯವನ್ನು ಬೇರೆ ಬೇರೆ ಆಯಾಮಗಳಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಅದು ಸಂಶೋಧನೆಯಲ್ಲೂ ಫಲಿತವಾಗಲು ಸಾಧ್ಯವಾಗಲಿದೆ’ ಎಂದರು.

    ‘ಬುಡಕಟ್ಟು ಸಂಶೋಧನೆ, ಅಲೆಮಾರಿ ಬದುಕು, ದಲಿತ ಲೋಕ, ಮಹಿಳಾ ಲೋಕ ಸೇರಿದಂತೆ ಅಲಕ್ಷಿತವಾದ ಲೋಕ ಹೊರಗಡೆ ಬರುವ ಮುಖಾಂತರ ದೇಶದಲ್ಲಿ ನಡೆದ ದೊಡ್ಡ ಬೆಳವಣಿಗೆ ಅಂದರೆ ಬಹು ಸಂಸ್ಕೃತಿಯ ಅನಾವರಣ. ನಮ್ಮ ದೇಶ ಏಕ ಸಂಸ್ಕೃತಿಯ ದೇಶವಲ್ಲ, ಇದು ಬಹುಸಂಸ್ಕೃತಿಯ ದೇಶ, ಬಹು ಬದುಕು, ಬಹು ವಿನ್ಯಾಸಗಳ ದೇಶ. ನಮ್ಮಲ್ಲಿ ಬುಡಕಟ್ಟು, ಅಲೆಮಾರಿಗಳ ಸಂಶೋಧನೆ ಶುರುವಾದ ನಂತರ ಏಕ ಸಂಸ್ಕೃತಿಯ ಮಿಥ್ಯವನ್ನು ಹೊಡೆದು ಹಾಕಲಾಯಿತು. ಇದು ಅಲಕ್ಷಿತ ಸಂಶೋಧನೆಯ ಫಲ ಹಾಗೂ ಈ ದೇಶದಲ್ಲಿ ನಡೆದ ಬಹುದೊಡ್ಡ ಪಲ್ಲಟವಾಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯ, ಪ್ರಜಾಸತ್ತಾತ್ಮಕ ಸಮಾಜಕ್ಕೆ ದೊಡ್ಡ ಕೊಡುಗೆ’ ಎಂದು ಹೇಳಿದರು.

    ‘ಸಾಹಿತ್ಯ ಕ್ಷೇತ್ರದವರಿಗೆ, ಸಂಶೋಧನೆಗೆ ಅಂತ್ಹಶಿಸ್ತೀಯ ತಿಳಿವಳಿಕೆಯ ಅಗತ್ಯವಿದೆ. ಚರಿತ್ರೆ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಸಂರಚನೆಯ ತಿಳುವಳಿಕೆ ಇದ್ದಲ್ಲಿ, ಇಂತಹ ಸಾಹಿತ್ಯ ಏಕೆ ರಚನೆಯಾಗಿದೆ ಎಂಬುವುದು ಮನವರಿಕೆಯಾಗಲಿದೆ. ಹಾಗಾಗಿ ಸಾಹಿತ್ಯ ಕ್ಷೇತ್ರದವರಿಗೆ ಅಂತ್ಹಶಿಸ್ತೀಯ ತಿಳುವಳಿಕೆ ಬಹಳ ಮುಖ್ಯವಾಗಿದೆ’ ಎಂದರು.

    baraguru 2

    ಚಿತ್ರದುರ್ಗ ತಾಲ್ಲೂಕಿನ ಜಿ.ಆರ್‌.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳ ಎಂಬ ವಿಷಯದ ಲೇಖನಗಳ ನವನೀತ ಬೃಹತ್ ಗ್ರಂಥವನ್ನು ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಲೋಕಾರ್ಪಣೆಗೊಳಿಸಿದರು.

    ‘ಶಿಕ್ಷಣ ವಿಸ್ತರಣೆಯಾದಂತೆ ಸಾಹಿತ್ಯ, ವಿಮರ್ಶೆ, ಸಂಶೋಧನೆಯ ವಿಸ್ತರಣೆಯೂ ಆಯಿತು. ಈ ಹಿನ್ನಲೆಯಲ್ಲಿ ಶಿಕ್ಷಣವು ಹಟ್ಟಿ, ಹಾಡಿ, ಗುಡಿಸಲು, ಮಣ್ಣಿನ ಮನೆ, ಮಹಿಳೆಯರಿಗೆ ಶಿಕ್ಷಣ ಬಂತು. ಹಟ್ಟಿಗೆ ಶಿಕ್ಷಣ ಬಂದ ಮೇಲೆ ಆತಂಕ, ಅಕ್ರೋಶ ಹೊರಬರಲು ಶುರುವಾಯಿತು. ಹಾಡುಗಳಿಂದ ಅದರ ಪಾಡುಗಳು, ಮಣ್ಣಿನ ಮನೆಯಿಂದ ಮನದಾಳ, ಮಹಿಳೆಯರಿಗೆ ಶಿಕ್ಷಣ ತಲುಪಿದ ನಂತರ ಇನ್ನೊಂದು ಆಯಾಮವೇ ಸಾಹಿತ್ಯದಲ್ಲಿ ಸೃಷ್ಠಿಯಾಯಿತು. ಹಾಗಾಗಿ ಶಿಕ್ಷಣದಿಂದ ಮಹಿಳಾ ಲೋಕ, ಬುಡಕಟ್ಟು ಲೋಕ, ಅಲೆಮಾರಿ ಲೋಕ ಸಾಹಿತ್ಯ ಸಂಸ್ಕೃತಿ ಸೇರಿದಂತೆ ಬೇರೆ ಬೇರೆ ಲೋಕ ಅನಾವರಣಕ್ಕೆ ಕಾರಣವಾಯಿತು’ ಎಂದರು.

    ಕ್ಲಿಕ್‌ ಮಾಡಿ ಓದಿ: ವಿಎಲ್‌ಟಿ, ಪ್ಯಾನಿಕ್‌ ಬಟನ್ ಅಳವಡಿಕೆ ಕಡ್ಡಾಯ | ನಿರ್ಲಕ್ಷಿಸಿದರೆ ₹ 1000 ದಂಡ ಖಚಿತ

    ‘ಸಾಹಿತ್ಯ ಸಂಶೋಧನೆ, ವಿಮರ್ಶೆ ಒಂದರೊಳಗೊಂದು ಸೇರಿಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ. ಸಾಹಿತ್ಯ ಸಂಶೋಧನೆಗೆ ವಿಮರ್ಶೆಯ ವಿವೇಕ ಬೇಕಾಗಿದೆ. ಆದರೆ ವಿಮರ್ಶೆ ಎಲ್ಲವೂ ಸಂಶೋಧನೆ ಆಗಬೇಕಾಗಿರುವುದಿಲ್ಲ. ಸಂಶೋಧನೆ ಅಂದರೆ ಅಜ್ಞಾತಗಳ ಹುಡುಕಾಟ. ವಿಮರ್ಶೆ ಎನ್ನುವುದು ವ್ಯಾಖ್ಯಾನಗಳ ಒಕ್ಕೂಟ’ ಎಂದು ಹೇಳಿದರು.

    ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳ ಒಳಗೊಂಡ ನವನೀತ ಬೃಹತ್ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು.

    ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿಶ್ರಾಂತಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌, ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್‌.ಸಿದ್ದೇಶ್‌, ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಎಂ.ಯು.ಲೋಕೇಶ್‌, ಜಿಆರ್‌ ಹಳ್ಳಿ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎಚ್‌.ಜಿ.ವಿಜಯ ಕುಮಾರ್‌, ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ ಅಧ್ಯಕ್ಷ ಡಾ.ವಿ.ಜಯರಾಮಯ್ಯ, ಶಿಕಾರಿಪುರ ಸುವ್ವಿ ಪಬ್ಲಿಕೇಷನ್‌ ಪ್ರಕಾಶಕ ಬಿ.ಎನ್‌.ಸುನೀಲ್‌ ಕುಮಾರ್‌, ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಗೀತಾ ವಸಂತ, ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top