Connect with us

    ಖಾಸಗಿ ಶಾಲೆ ಸಂಸ್ಥೆಗಳು ಸರ್ಕಾರದ ನಿಯಮ ಪಾಲನೆ ಕಡ್ಡಾಯ | ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ | ಡಿಸಿ 

    ಮುಖ್ಯ ಸುದ್ದಿ

    ಖಾಸಗಿ ಶಾಲೆ ಸಂಸ್ಥೆಗಳು ಸರ್ಕಾರದ ನಿಯಮ ಪಾಲನೆ ಕಡ್ಡಾಯ | ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ | ಡಿಸಿ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 MAY 2025

    ಚಿತ್ರದುರ್ಗ: ಖಾಸಗಿ ಅನುದಾನ ರಹಿತ ಶಾಲೆಗಳು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸರ್ಕಾರದ ನಿಯಮಾವಳಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

    Also Read: ಜನೌಷಧ ಕೇಂದ್ರ ಮುಚ್ಚುವುದು ರಾಜ್ಯ ಸರ್ಕಾರದ ಮೂರ್ಖತನ | ಗೋವಿಂದ ಕಾರಜೋಳ

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂದು ತಿಳಿಸಿದ ಅವರು, ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ನಿಯಮಗಳ ಉಲ್ಲಂಘನೆ ಮಾಡಬಾರದು. ಒಂದು ವೇಳೆ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ನಿಯಮಾವಳಿ ಉಲ್ಲಂಘನೆ ಕುರಿತು ದೂರು ಬಂದರೆ ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಪ್ರವೇಶ ಶುಲ್ಕದ ಮಾಹಿತಿಯನ್ನು ಪ್ರಚುರ ಪಡಿಸದೇ ಇರುವುದು, ಒಂದೇ ಬಾರಿಗೆ ಡೋನೇಷನ್ ಶುಲ್ಕ ಕಟ್ಟುವಂತೆ ಬೇಡಿಕೆಯಿಡುವುದು, ಮೂಲಸೌಲಭ್ಯಗಳ ಕೊರತೆ, ನಾಮಕಾವಸ್ಥೆಗೆ ಶಿಕ್ಷಣ ಸಂಸ್ಥೆ ನಡೆಸುವುದು, ಉತ್ತಮ ಫಲಿತಾಂಶಕ್ಕೆ ಪಡೆಯಲು ಗಮನಹರಿಸದೇ ಇರುವುದು, ಶಿಕ್ಷಕರಿಗೆ ಓರಿಯಂಟೇಷನ್ ಕಾರ್ಯಾಗಾರ ಮಾಡದೇ ಇರುವುದು, ಅರ್ಹತೆ ಇಲ್ಲದೇ ಇರುವ ಶಿಕ್ಷಕರ ನೇಮಕ ಮಾಡಿಕೊಳ್ಳುವುದು ಸೇರಿದಂತೆ ಕೆಲವು ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರುಗಳು ಬಂದಿವೆ.

    Also Read: ಕ್ಯಾನ್ಸರ್ ತಡೆಗಟ್ಟಲು ಈ 5 ಕ್ಯಾನ್ಸರ್ ವಿರೋಧಿ ಆಹಾರವನ್ನು ತಿನ್ನಿ

    ಹಾಗಾಗಿ ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗದಂತೆ ಕ್ರಮವಹಿಸಬೇಕು. ಮುಖ್ಯವಾಗಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರಿಗೆ ಓರಿಯಂಟೇಷನ್ ಕಾರ್ಯಾಗಾರ, ಬೋಧನಾ ಕೌಶಲ್ಯಗಳ ಅಭಿವೃದ್ಧಿಗಾಗಿ ಪುನಃಶ್ಚೇತನ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

    ತಾಲ್ಲೂಕುವಾರು ನೋಡಲ್ ಅಧಿಕಾರಿಗಳ ನೇಮಕ:

    ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರದ ದಾಖಲಾತಿ ಪ್ರಕ್ರಿಯೆ ನಿರ್ವಹಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಇಲಾಖೆಯ ಅಧಿಕಾರಿಗಳನ್ನು ತಾಲ್ಲೂಕುವಾರು ನೋಡಲ್ ಅಧಿಕಾರಿಗಳ ನೇಮಕ ಮಾಡಿ ಪರಿಶೀಲನೆ ನಡೆಸಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದರೆ ಶಾಶ್ವತವಾಗಿ ಶಿಕ್ಷಣ ಮುಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

    ಸೀಟುಗಳ ಲಭ್ಯತೆ ಮತ್ತು ಪ್ರವೇಶಾತಿ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಶಾಲಾ ಫಲಕದಲ್ಲಿ ಪ್ರಕಟಿಸಬೇಕು. ಪ್ರತಿ ವರ್ಷ ಏಪ್ರಿಲ್ ತಿಂಗಳ ನಂತರವೇ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಬೇಕು.

    Also Read: ಈ 5 ಹೊಟ್ಟೆ ಸಮಸ್ಯೆಗಳಿದ್ದರೆ, ಹೊಕ್ಕುಳಲ್ಲಿ ಕ್ಯಾಸ್ಟರ್ ಆಯಿಲ್ ಹಚ್ಚಿ

    ಪ್ರತಿ ಶಾಲೆಯಲ್ಲೂ ಇಲಾಖಾ ಮಾರ್ಗದರ್ಶನದಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಪ್ರತ್ಯೇಕವಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ, ಪಾಠೋಪಕರಣಗಳು ಮತ್ತು ಪೀಠೋಪಕರಣಗಳ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಅಗ್ನಿನಂದಕ, ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದರು.

    ಶಾಲಾ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಂತಹ ಪ್ರಕರಣಗಳನ್ನು ತಪ್ಪಿಸಲು ಶಾಲಾ ಪರಿಮಿತಿಯಲ್ಲಿಇ ಆಡಳಿತ ಮಂಡಳಿಗಳು ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಖಾಸಗಿ ಶಾಲೆಗಳಲ್ಲಿ ನಿಗಧಿತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಅನುದಾನ ಸಹಿತ ಶಾಲೆಗಳಲ್ಲಿ 73 ಪ್ರಾಥಮಿಕ ಶಾಲೆಗಳು, 204 ಪ್ರೌಢಶಾಲೆಗಳು ಇವೆ. ಅನುದಾನ ರಹಿತ ಶಾಲೆಗಳಲ್ಲಿ 252 ಪ್ರಾಥಮಿಕ ಶಾಲೆಗಳು ಹಾಗೂ 138 ಪ್ರೌಢಶಾಲೆಗಳು ಇವೆ ಎಂದು ಸಭೆಗೆ ಮಾಹಿತಿ ನೀಡಿದರು.

    ಪ್ರತಿ ವರ್ಷ ದಾಖಲಾತಿ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮೀಸಲಾತಿ ಅನ್ವಯಿಸಿ ದಾಖಲಾತಿ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಎಲ್‍ಕೆಜಿ ಮತ್ತು 1ನೇ ತರಗತಿಗೆ ದಾಖಲಾತಿ ಪ್ರಕ್ರಿಯೆ ನಿರ್ವಹಿಸುವಾಗ ಪ್ರವೇಶ ಪರೀಕ್ಷೆ ಸಂದರ್ಶನ ನಡೆಸತಕ್ಕದ್ದಲ್ಲ ಎಂದು ಹೇಳಿದರು.

    2025-26ನೇ ಸಾಲಿಗೆ ಆರ್‍ಟಿಇ ಅಡಿ ಮೀಸಲಿರುವ ಸೀಟುಗಳಿಗೆ ಪ್ರವೇಶಾತಿ ಮತ್ತು ದಾಖಲಾತಿ ಪ್ರಕ್ರಿಯೆ ಅನುದಾನಿತ ಶಾಲೆಗಳಿಗೆ ಮಾತ್ರ ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಆರ್‍ಟಿಇ ಅಡಿಯಲ್ಲಿ 56 ಶಾಲೆಗಳಲ್ಲಿ 247 ಸೀಟುಗಳು ಲಭ್ಯವಿವೆ ಎಂದು ತಿಳಿಸಿದರು.

    Also Read: ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವ ಮಳಿಗೆ ವಿರುದ್ಧ ಕ್ರಮ

    2025-26ನೇ ಶೈಕ್ಷಣಿಕ ವರ್ಷದಿಂದ ಎಲ್‍ಕೆಜಿ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ, ಯುಕೆಜಿ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿದ್ದಪ್ಪ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖ್ಯ ಶಿಕ್ಷಕರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top