ಮುಖ್ಯ ಸುದ್ದಿ
ಐವರ ಅಸ್ಥಿಪಂಜರ ಪತ್ತೆ ಪ್ರಕರಣ | ವಿಳಂಬವಾಯ್ತಾ ಮರಣೋತ್ತರ ಪರೀಕ್ಷೆ ವರದಿ
ಚಿತ್ರದುರ್ಗನ್ಯೂಸ್.ಕಾಂ
ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ ಅಸ್ಥಿಪಂಜರ ಪತ್ತೆ ಪ್ರಕರಣ ರೋಚಕ ತಿರುವು ಪಡೆಯುತ್ತಿದೆ. ಚಿತ್ರದುರ್ಗ ನಗರದ ಕಾರಾಗೃಹ ರಸ್ತೆಯ ಪಾಳು ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳ ಮರಣೋತ್ತರ ವರದಿ ಎಂಟು ದಿನವಾದರೂ ಪೊಲೀಸರ ಕೈಸೇರುವಲ್ಲಿ ವಿಳಂಬವಾಗಿದೆ ಎಂದು ತಿಳಿದು ಬಂದಿದೆ.
2023ರ ಡಿ.28 (ಗುರುವಾರ) ರಾತ್ರಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಡಿ.29 (ಶುಕ್ರವಾರ) ಅವುಗಳನ್ನು ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿತ್ತು. ಡಿ.30 (ಶನಿವಾರ) ಮರಣೋತ್ತರ ಪರೀಕ್ಷೆ ನಡೆಸಿ, ದೊಡ್ಡ ಸಿದ್ದವ್ವನಹಳ್ಳಿಯಲ್ಲಿರುವ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ: ತಿಂಗಳ ಅಂತ್ಯಕ್ಕೆ ದುರ್ಗಕ್ಕೆ ಕಾದಿದೆ ನೀರಿನ ಗಂಡಾಂತರ | ಕುಸಿಯುತ್ತಿದೆ ಸೂಳೆಕೆರೆ ನೀರಿನ ಮಟ್ಟ
ಆ ವೇಳೆ ಸಂಪ್ರದಾಯದಂತೆ ಅಸ್ಥಿಪಂಜರಗಳಿಗೆ ಅಗ್ನಿ ಸ್ಪರ್ಶ ಮಾಡಲು ಸಂಬಂಧಿಕರು ನಿರ್ಧರಿಸಿದ್ದರು. ಆದರೆ ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೂ ಅಗ್ನಿಸ್ಪರ್ಶಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದರಿಂದ ಜೋಗಿಮಟ್ಟಿ ರಸ್ತೆಯ ವಿವೇಕಾನಂದ ನಗರ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಎನ್.ಕೆ.ಜಗನ್ನಾಥ ರೆಡ್ಡಿ (85), ಪತ್ನಿ ಪ್ರೇಮಲೀಲಾ (74), ಪುತ್ರಿ ಎನ್.ಜೆ.ತ್ರಿವೇಣಿ (56), ಎನ್.ಜೆ. ಕೃಷ್ಣ (53), ಎನ್.ಜೆ.ನರೇಂದ್ರ (51) ಅವರದ್ದು ಎನ್ನಲಾದ ಅಸ್ಥಿಪಂಜರಗಳಿಗೆ ನಂಬಿಕೆ ಮೇಲೆ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದರು. 2024 ರ ಜನವರಿ 1 ರಂದು ಮೂರು ದಿನ ತಿಥಿ ಕಾರ್ಯ ಸಹ ನೆರವೇರಿಸಿದ್ದರು.ಘಟನೆ ನಡೆದು 10 ದಿನ ಹಾಗೂ ಮರಣೋತ್ತರ ಪರೀಕ್ಷೆ ನಡೆದು 7 ದಿನ ಕಳೆದರು ಸಹ ಈವರೆಗೂ ಪೊಲೀಸರಿಗೆ ಮರಣೋತ್ತರ ವರದಿ ಲಭ್ಯವಾಗಿಲ್ಲ.
ಇದನ್ನೂ ಓದಿ: ವೇದಗಳಷ್ಟೇ ಪ್ರಾಮುಖ್ಯತೆ ಶ್ರೀರಾಮಾಯಣಕ್ಕಿದೆ | ಬೆಲಗೂರು ಮಾರುತಿ ವಿಜಯ ಶರ್ಮಾ ಸ್ವಾಮೀಜಿ
ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯ ಡಾ.ವೇಣು ತಂಡ ಅಸ್ಥಿಪಂಜರದ ಮೇಲಿದ್ದ ಉಡುಪು ಹಾಗೂ ಮೂಳೆಗಳ ರಚನೆಯ ಆಧಾರದಲ್ಲಿ ಶವಗಳು ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರದ್ದು ಎಂದು ಗುರುತಿಸಿತ್ತು. ಘಟನೆಗೆ ಕಾರಣ ತಿಳಿಯುವ ಸಲುವಾಗಿ, ಮೂಳೆ, ಬಟ್ಟೆ, ಒಂದು ಅಸ್ಥಿಪಂಜರದ ಮೇಲಿದ್ದ ಚರ್ಮದ ತುಣುಕನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ನಾಲೆ ದಡ ಒಡೆದು ನುಗ್ಗುತ್ತಿವೆ ಟ್ರಾಕ್ಟರ್ | ಹೂಳು ತೆಗೆಯುವ ಅವೈಜ್ಞಾನಿಕ ಕ್ರಮಕ್ಕೆ ಆಕ್ರೋಶ
ಕೊಠಡಿಯೊಂದರಲ್ಲಿ ಮೂರು ಅಸ್ಥಿಪಂಜರಗಳು ಮಂಚದ ಮೇಲೆ, ಒಂದು ಮಂಚದ ಕೆಳಗೆ ಇದ್ದು, ಮತ್ತೊಂದು ನಡುಮನೆಯಲ್ಲಿ ಇತ್ತು. ಈ ಪೈಕಿ ಒಬ್ಬ ಪುರುಷ ಹಾಗೂ ಮಹಿಳೆಯ ಅಸ್ಥಿಪಂಜರದ ಕಾಲುಗಳು ಹಗ್ಗ ಬಿಗಿದ ಸ್ಥಿತಿಯಲ್ಲಿದ್ದವು ಎಂಬ ಅಂಶ ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ ಎನ್ನಲಾಗಿತ್ತು.
ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದ ಜಗನ್ನಾಥ ರೆಡ್ಡಿ ಅವರು 2019 ಜನವರಿ ಬಳಿಕ ತಮ್ಮ ನಿವೃತ್ತಿ ವೇತನ ತೆಗೆದುಕೊಂಡಿಲ್ಲ. ಜತೆಗೆ ಜನವರಿ ತಿಂಗಳ ಬಳಿಕ ಈ ಮನೆಯವರಿಂದ ಯಾವುದೇ ಬಿಲ್ ಪಾವತಿ ಆಗಿಲ್ಲ ಎಂಬುದು ಬೆಳಕಿಗೆ ಬಂದಿವೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ.ವೇಣು ಕೆಲ ದಿನಗಳಿಂದ ತರಬೇತಿ ಕಾರ್ಯಗಾರದಲ್ಲಿ ಭಾಗಿಯಾಗಿದ್ದರು. ಆ ಕಾರಣಕ್ಕೆ ವರದಿ ಪೊಲೀಸರ ಕೈ ಸೇರುವಲ್ಲಿ ವಿಳಂಬವಾಗಿದೆ ಎನ್ನಲಾಗುತ್ತಿದೆ. ಪರೀಕ್ಷೆ ನಡೆಸಿ ಕೇವಲ ಎರಡು ದಿನದಲ್ಲಿ ಬರಬೇಕಿದ್ದ ವರದಿ ವಿಳಂಬವಾಗಿದ್ದು, ಇಂದು (ಶನಿವಾರ) ಸಂಜೆ ಅಥವಾ ಭಾನುವಾರದ ವೇಳೆಗೆ ತನಿಖಾ ತಂಡದ ಕೈಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.