ಮುಖ್ಯ ಸುದ್ದಿ
ಮತಗಟ್ಟೆ, ಚೆಕ್‍ಪೋಸ್ಟ್ ಪರಿಶೀಲನೆ | ಜಿಲ್ಲಾಧಿಕಾರಿ ಟಿ.ವೆಂಕಟೇಶ್

CHITRADURGA NEWS | 19 MARCH 2024
ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಚಿತ್ರದುರ್ಗ ನಗರದ ವಿವಿಧ ಮತಗಟ್ಟೆ ಹಾಗೂ ಚೆಕ್‍ಪೋಸ್ಟ್‍ಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ
ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳು ಮತದಾರ ಸ್ನೇಹಿಯಾಗಿರಬೇಕು. ಬೇಸಿಗೆ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ಅಗತ್ಯ ನೆರಳಿನ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ವಿದ್ಯುತ್, ಶೌಚಾಲಯಗಳು ಇರಬೇಕು.
ವಿಕಲಚೇತನರು ಹಾಗೂ ವಯಸ್ಸಾದ ಮತದಾರರನ್ನು ವ್ಹೀಲ್‍ಚೇರ್ ಮೂಲಕ ಮತಗಟ್ಟೆಗೆ ಕೊಂಡೊಯ್ಯಲು ಅನುಕೂಲವಾಗುವಂತೆ ರ್ಯಾಂಪ್ ಸೌಲಭ್ಯ ಕಲ್ಪಿಸಬೇಕು. ತಾಯಂದಿರು ಮಕ್ಕಳಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೋಣೆ ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಬೇಲಿಯ ಬೆಂಕಿಗೆ ತಾಯಿ ಮಕ್ಕಳ ಬಲಿ
ಚಿತ್ರದುರ್ಗ ತಾಲ್ಲೂಕು ಕ್ಯಾದಿಗೆರೆ ಹಾಗೂ ನಗರದ ಆರ್.ಟಿ.ಓ ಕಚೇರಿ ಮುಂಭಾಗದ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿದರು.
ಬಿಸಿಯೂಟ ದವಸ ಧಾನ್ಯ ನಿರ್ವಹಣೆಗೆ ಸೂಚನೆ: ನಗರದ ಜೋಗಿಮಟ್ಟಿ ರಸ್ತೆಯ ಕರುವಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಪರಿಶೀಲನೆ ವೇಳೆ, ಶಾಲೆಯಲ್ಲಿ ಸರಿಯಾದ ರೀತಿಯಲ್ಲಿ ಬಿಸಿಯೂಟದ ದವಸ ಧಾನ್ಯಗಳ ನಿರ್ವಹಣೆ ಮಾಡದಿರುವುದು ಕಂಡುಬಂತು.
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಿಸಿಯೂಟಕ್ಕೆ ಬಳಸುವ ದವಸ ಧಾನ್ಯಗಳನ್ನು ಸರಿಯಾದ ಸ್ಥಳದಲ್ಲಿ ಶೇಖರಿಸಿಡಬೇಕು. ದಾಸ್ತಾನು ಸಂಗ್ರಹ ವಹಿಯನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ಅನ್ನದಾತರ ಶ್ರಮದಾನ | ಸ್ವಚ್ಛವಾಯಿತು ಕಾಲುವೆ ನಳನಳಿಸಿದ ಜಲಧಾರೆ
ನಗರದ ಸಂತ ಜೋಸೆಫೆರ ಕಾನ್ವೆಂಟ್ ಶಾಲೆ, ಮಹಾರಾಣಿ ಕಾಲೇಜು, ಕಾಮನಬಾವಿ ಬಡಾವಾಣೆ, ವಿ.ಪಿ.ಬಡಾವಣೆ ಶಾಲೆಗಳ ಮತಗಟ್ಟೆಗಳನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯಕ್ತೆ ಎಂ.ರೇಣುಕಾ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
