ಚಳ್ಳಕೆರೆ
ತೇಜೋವಧೆಗೆ ಮುಂದಾದರೆ ಸುಮ್ಮನಿರಲ್ಲ; ಶಾಸಕ ಎನ್.ವೈ.ಗೋಪಾಲಕೃಷ್ಣ ಎಚ್ಚರಿಕೆ
ಚಿತ್ರದುರ್ಗ ನ್ಯೂಸ್.ಕಾಂ
ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ನನ್ನನ್ನು ತೇಜೋವಧೆ ಮಾಡಲು ಯಾರಾದರು ಮುಂದಾದರೆ ಸುಮ್ಮನೆ ಕೇಳಿಸಿಕೊಂಡು ಕೂರುವ ವ್ಯಕ್ತಿ ನಾನಲ್ಲ. ಅಭಿವೃದ್ಧಿ ಸಂಬಂಧ ನನ್ನ ಬಳಿ ದಾಖಲೆಗಳಿವೆ ಎಂಬ ಖಡಕ್ ಸಂದೇಶವನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ರವಾನಿಸಿದರು.
ಮೊಳಕಾಲ್ಮುರು ವಿಧಾನಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಸಮೀಪದ ತಳಕು ಗ್ರಾಮದಲ್ಲಿ ₹ 2.45 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪೊಲೀಸ್ ಠಾಣೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ, ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದು, ಇದು ಸರಿಯಲ್ಲ ’ ಎಂಬ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೋಟೆನಾಡಿಗೆ ‘ರೆಬೆಲ್’ ವಿಜಯಯಾತ್ರೆ
‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಆಗಬೇಕಿರುವ ಯೋಜನೆಗಳನ್ನು ಒಂದೇ ಸೂರಿನಡಿ ಕುಳಿತು ಚರ್ಚಿಸಲು ನಾನು ಸಿದ್ಧ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಇಲ್ಲವಾದರೆ ಯಾವ ಕ್ಷೇತ್ರವೂ ಪ್ರಗತಿ ಸಾಧಿಸುವುದಿಲ್ಲ’ ಎಂದರು.
‘ರಾಜಕಾರಣ ಮತ್ತು ಅಭಿವೃದ್ಧಿಯಲ್ಲಿ ನಾನು ಪರಿಣಿತನಾಗಿದ್ದೇನೆ. ಹಾಗಾಗಿ ನಾನು ಯಾರೋ ಹೇಳಿದ್ದನ್ನು ಕೇಳಿ ಕೆಲಸ ಮಾಡಬೇಕೆಂದೇನೂ ಇಲ್ಲ. ಕಳೆದ 10 ವರ್ಷಗಳಿಂದ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇದನ್ನು ಪ್ರಶ್ನೆ ಮಾಡುವ ಬದಲು ನನ್ನ ಕಾರ್ಯವೈಖರಿ ಮತ್ತು ನನ್ನನ್ನು ತೇಜೋವಧೆ ಮಾಡಲು ಮುಂದಾದರೆ ಸುಮ್ಮನೆ ಕೇಳಿಸಿಕೊಂಡು ಕೂರುವ ವ್ಯಕ್ತಿ ನಾನಲ್ಲ. ಅಭಿವೃದ್ಧಿ ಸಂಬಂಧ ನನ್ನ ಬಳಿ ದಾಖಲೆಗಳಿದ್ದು, ಪರಿಶೀಲಿಸಬಹುದು’ ತಿರುಗೇಟು ನೀಡಿದರು.
ಇದನ್ನೂ ಓದಿ: ದಾಖಲೆ ಇಲ್ಲದ 8 ಕೋಟೆ ವಶ
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿದೆ. ರಾಜ್ಯದ ಪ್ರತಿ ಮನೆಯೂ ಗ್ಯಾರಂಟಿ ಯೋಜನೆಗಳ ಫಲವನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿವೆ’ ಎಂದು ತಿಳಿಸಿದರು.
‘ತಳಕು ಹೋಬಳಿಯ ಬೂದಿಹಳ್ಳಿ ಗ್ರಾಮವು ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಅದನ್ನು ತಳಕು ಠಾಣೆಗೆ ವರ್ಗಾಯಿಸಲಾಗುವುದು. ತಳಕು ಹೋಬಳಿಯ ಎಲ್ಲಾ ಗ್ರಾಮಗಳು ಮೊಳಕಾಲ್ಮುರು ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ಮನಗಂಡು ವೈಜ್ಞಾನಿಕವಾಗಿ ಸರ್ವೆ ಕಾರ್ಯ ನಡೆಸಿ ಚಳ್ಳಕೆರೆ ನ್ಯಾಯಾಲಯದ ವ್ಯಾಪ್ತಿಗೆ ವರ್ಗಾಯಿಸಲಾಗುವುದು’ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಹ್ಯಾಂಡ್‌ಬಾಲ್ ಅಂಕಣಕ್ಕೆ ಇಳಿದ ಶಾಸಕ ಕೆ.ಸಿ.ವೀರೇಂದ್ರ; ಕ್ರೀಡಾಪಟುಗಳಲ್ಲಿ ಹೆಚ್ಚಿದ ಹುಮ್ಮಸ್ಸು
ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ, ಪೊಲೀಸ್ ಉಪನಿರೀಕ್ಷಕರಾದ ಲೋಕೇಶ್, ಗಾದಿಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಮುಖಂಡರಾದ ಬಾಲರಾಜ್, ಓಬಣ್ಣ, ಅಶ್ವತ್ಥ್‌ನಾಯಕ ಇದ್ದರು.