ಮುಖ್ಯ ಸುದ್ದಿ
ಪೋಕ್ಸೋ ಪ್ರಕರಣಗಳು ಹೆಚ್ಚಳ | ಮಕ್ಕಳ ಮೇಲೆ ಪೋಷಕರ ನಿಗಾ ಇರಲಿ

ಚಿತ್ರದುರ್ಗ ನ್ಯೂಸ್.ಕಾಂ: ಮಕ್ಕಳ ಮೇಲಿನ ಅತ್ಯಾಚಾರದಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಪೋಷಕರು ಜಾಗ್ರತೆ ವಹಿಸಬೇಕು. ಪೋಕ್ಸೋ ಕಾಯ್ದೆ ಕುರಿತು ಎಲ್ಲ ಮಹಿಳೆಯರು ಮಾಹಿತಿ ಹೊಂದಿರಬೇಕು ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಮಹಾದೇವಿ ಎಂ.ಮರಕಟ್ಟಿ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತ.ರಾ.ಸು. ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಟಿ ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ಹೋಗುವ ಹೆಣ್ಣು ಮಕ್ಕಳ ಮೇಲೆ ವಿಶೇಷ ನಿಗಾ ಇರಿಸಿ ಅನಾಹುತಗಳನ್ನು ತಪ್ಪಿಸುವಲ್ಲಿ ತಾಯಂದಿರ ಪಾತ್ರ ಮುಖ್ಯ. ಸೂಕ್ಷ್ಮವಾದ ವಿಚಾರಗಳನ್ನು ನಿರ್ಲಕ್ಷಿಸಬೇಡಿ ಎಂದು ಸ್ವಸಹಾಯ ಸಂಘದ ಮಹಿಳೆಯರಲ್ಲಿ ಮನವಿ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ, ಕೇವಲ ಅಡುಗೆ ಮನೆಗೆ ಮೀಸಲಾಗಿರುವ ಮಹಿಳೆಯರನ್ನು ಮನೆಯಿಂದ ಹೊರ ತಂದು ಸ್ವಾವಲಂಭಿಗಳಾಗಿ ಬದುಕುವುದನ್ನು ಕಲಿಸುತ್ತಿದೆ. ಆದರೆ, ಮಹಿಳೆಯರು ತರಬೇತಿಗಳನ್ನು ಪಡೆದು ಮನೆಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ದುಡಿಮೆಯ ಮಾರ್ಗ ಕಂಡುಕೊಂಡು ಮಾರ್ಕೆಟಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಕೌಶಲ್ಯ ನಿಮ್ಮಲ್ಲಿರಬೇಕು ಎಂದರು.
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಸಮಸ್ಯೆ | 11 ಶುಶ್ರೂಷಕರು ಸೇವೆಯಿಂದ ವಜಾ | ವರ್ಷದಿಂದ ವೇತನವನ್ನೇ ನೀಡಿಲ್ಲ
ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅವರ ಸಹೋದರಿ ವೀಣಾ ಮಾತನಾಡಿ, ಮಹಿಳೆಯರು ಸೂಕ್ತ ತರಬೇತಿಗಳನ್ನು ಪಡೆದು ಸ್ವಂತ ಕಾಲ ಮೇಲೆ ನಿಲ್ಲುವ ಪ್ರಯತ್ನ ಮಾಡಬೇಕು. ಮಹಿಳಾ ಸ್ವಸಹಾಯ ಸಂಘಗಳು ಎಂದಾಕ್ಷಣ ಸಾಲ ಪಡೆದುಕೊಂಡು ಮಕ್ಕಳ ಮದುವೆ ಮಾಡುವುದು, ಮನೆ ಕಟ್ಟುವುದಕ್ಕೆ ಸೀಮಿತವಾಗಬಾರದು. ಅದನ್ನು ದುಡಿಯಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಮಾಜಿ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಸದಸ್ಯರಾದ ರೂಪ ಜನಾರ್ಧನ್, ನಾಗರಾಜ್ ಸಂಗಂ, ಕಿರಣ್‍ಶಂಕರ್, ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್, ಜ್ಞಾನಿವಿಕಾಸ ಸಮನ್ವಯಾಧಿಕಾರಿ ಸುಧಾ, ವಲಯ ಮೇಲ್ವಿಚಾರಕ ಸಂದೀಪ್ ವಿಚಾರಗೋಷ್ಠಿಯಲ್ಲಿ ಹಾಜರಿದ್ದರು.
