Connect with us

    ತರಗತಿಗಳನ್ನು ಬಹಿಷ್ಕರಿಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

    ತರಗತಿಗಳನ್ನು ಬಹಿಷ್ಕರಿಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

    ಮುಖ್ಯ ಸುದ್ದಿ

    ತರಗತಿಗಳನ್ನು ಬಹಿಷ್ಕರಿಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

    ಚಿತ್ರದುರ್ಗ ನ್ಯೂಸ್:

    ಶೌಚಾಲಯ, ಕುಡಿಯುವ ನೀರು, ತರಗತಿಗಳನ್ನು ಆಲಿಸಲು ಕೊಠಡಿಗಳ ಸಮಸ್ಯೆ, ಹಳ್ಳಿಗಳಿಗೆ ಕಮ್ಯುನಿಟಿ ಪೋಸ್ಟಿಂಗ್ ಹೋಗಲು ಬಸ್ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಎಸ್ಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಗುರುವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ಕಳೆದ ಹಲವು ತಿಂಗಳುಗಳಿಂದ ಇಲ್ಲಿನ ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳು, ಸಚಿವರು, ಶಾಸಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ದನಗಳು ಇರಲು ಯೋಗ್ಯವಿಲ್ಲದ ಕೊಠಡಿಗಳನ್ನು ನಮ್ಮನ್ನು ಕೂರಿಸಿ ಪಾಠ ಮಾಡುತ್ತಿದ್ದಾರೆ. ಇವರ ಮಕ್ಕಳನ್ನು ಇಂತಹ ಸ್ಥಿತಿಯಲ್ಲಿಡುತ್ತಾರಾ ಸಾರ್ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

    ಎಲ್ಲ ಸಮಸ್ಯೆಗಳು ಬಗೆಹರಿಯಬೇಕು. ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹೇಗೆ ಹೊಸ ಕಟ್ಟಡ ಹುಡುಕಿಕೊಟ್ಟಿದ್ದಾರೋ ಅದೇ ರೀತಿ ನಮಗೂ ಬೇರೆ ಸುಸಜ್ಜಿತ ಕಟ್ಟಡ ಹುಡುಕಿಕೊಡಿ. ಅಲ್ಲೀತನ ತರಗತಿಗಳಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

    ಎರಡು ವರ್ಷಗಳ ಹಿಂದೆ ಬಿಎಸ್ಸಿ ನರ್ಸಿಂಗ್ ತರಗತಿಗಳು ಪ್ರಾರಂಭವಾಗಿದ್ದು, 120 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೆಲ ದಿನಗಳಲ್ಲಿ ಮತ್ತೊಂದು ಹೊಸ ಬ್ಯಾಚ್ ಬಂದರೆ ಆಗ ವಿದ್ಯಾರ್ಥಿಗಳ ಸಂಖ್ಯೆ 180ಕ್ಕೆ ತಲುಪಲಿದೆ. ಈಗ ಇರುವ ವಿದ್ಯಾರ್ಥಿಗಳೇ ಇಷ್ಟು ಕಷ್ಟಪಟ್ಟರೆ ಹೊಸ ಬ್ಯಾಚ್ ಬಂದರೆ ಹೇಗೆ ವ್ಯವಸ್ಥೆ ಮಾಡುತ್ತಾರೆ. ಆದ್ದರಿಂದ ತಕ್ಷಣ ಬದಲಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

    ನರ್ಸಿಂಗ್ ಕಾಲೇಜಿನ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ತರಗತಿ ನಡೆಸಲು ಕೊಠಡಿಗಳೇ ಇಲ್ಲದ ಕಾರಣಕ್ಕೆ ಇರುವ ಕೊಠಡಿಗಳಲ್ಲಿ ಅಧ್ಯಯನ ಮಾಡಬೇಕಾಗಿದೆ. ಈ ಕಾರಣಕ್ಕೆ ದಿನಕ್ಕೆ ಎರಡೇ ಗಂಟೆ ಪಾಠ ಕೇಳಬೇಕಾಗಿದೆ. ಶೌಚಾಲಯ ವ್ಯವಸ್ಥೆ ಕೇಳಿದರೆ ಆಸ್ಪತ್ರೆಯ ವಾರ್ಡ್‍ಗಳಿಗೆ ಹೋಗಿ ಎನ್ನುತ್ತಾರೆ ಎಂದು ವಿದ್ಯಾರ್ಥಿಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

    ಸದ್ಯ ಬಿಎಸ್ಸಿ ನರ್ಸಿಂಗ್ ಕಾಲೇಜು ತರಗತಿಗಳನ್ನು ಎಎನ್‍ಎಂ ಕಟ್ಟಡದಲ್ಲಿ ನಡೆಸುತ್ತಿದ್ದು, ಅಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕೂಡಾ ಇದೆ. ಆದ್ದರಿಂದ ಬಾಲಕರು ಅಲ್ಲಿ ತಗರತಿಗಳಿಗೆ ಹೀಗಲು ಯೋಚನೆ ಮಾಡುವಂತಾಗಿದೆ. ವಿದ್ಯಾರ್ಥಿನಿಯರು ಕೂಡ ಮುಜುಗರ ಅನುಭವಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
    ಸೆಪ್ಟಂಬರ್ 1 ರಿಂದ ಬಿಎಸ್ಸಿ ವಿದ್ಯಾರ್ಥಿಗಳಿಗೆ ಕಮ್ಯುನಿಟಿ ಪೋಸ್ಟಿಂಗ್ ಆರಂಭವಾಗಲಿದೆ. ಈ ವೇಳೆ ಹಳ್ಳಿಗಳಿಗೆ ತೆರಳಬೇಕು. ಆದರೆ, ಈಗ ಇರುವ ಬಸ್ 20 ವರ್ಷ ಹಳೆಯದಾಗಿದ್ದು, ಅದನ್ನು ಬದಲಾಯಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಈ ಎಲ್ಲಾ ವಿಷಯಗಳ ಕುರಿತಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರು, ಡಿಎಚ್‍ಓ, ಸಚಿವರು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಮಾಹಿತಿ, ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳಾದ ವಿಶ್ವನಾಥ್, ತೇಜಸ್ವಿನಿ, ಕೆ.ಜಿ.ವೀರೇಶ್, ಬಿ.ನಾಗರಾಜ್, ಪಲ್ಲವಿ, ಭೂಮಿಕಾ, ಮೇಘಾ, ಅಂಜಲಿ, ಸಹನಾ, ಐಶ್ವರ್ಯಾ, ಸುಚಿತ್ರಾ, ಮಧು, ಸಿಂಧು ಮತ್ತಿತರೆ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಇಂದು ಜಿಲ್ಲಾಧಿಕಾರಿ ಜೊತೆ ಸಭೆ ಎಸಿ ಭರವಸೆ:

    ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಕಾರ್ತಿಕ್, ಡಿಎಚ್‍ಒ ಡಾ.ಆರ್.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲು ಮುಂದಾದರು. ಆದರೆ, ವಿದ್ಯಾರ್ಥಿಗಳು ಮೂಲ ಸೌಲಭ್ಯ ಸಿಗುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದಾಗ ತಕ್ಷಣಕ್ಕೆ ಎಲ್ಲ ವ್ಯವಸ್ಥೆ ಮಾಡುವುದು ಕಷ್ಟ. ಈ ಬಗ್ಗೆ ನರ್ಸಿಂಗ್ ಕಾಲೇಜು ಪ್ರಾಚಾರ್ಯರಿಂದ ವಿವರವಾದ ಮಾಹಿತಿ ಪಡೆದುಕೊಂಡು ನಾಳೆಯೇ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ತತ್‍ಕ್ಷಣಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತೇವೆ. ಸರ್ಕಾರಿ ಮೆಡಿಕಲ್ ಕಾಲೇಜು ಜತೆಗೆ ನರ್ಸಿಂಗ್ ಕಾಲೇಜು ಕಟ್ಟಡ, ಹಾಸ್ಟೆಲ್ ವ್ಯವಸ್ಥೆಯೂ ಆಗಲಿದೆ ಎಂದು ಭರವಸೆ ನೀಡಿದರು.
    ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಬೇಡಿಕೆಗಳನ್ನು ಹೇಳಿಕೊಂಡಿದ್ದಾರೆ. ನರ್ಸಿಂಗ್ ಕಾಳೇಜು ಪ್ರಾಚಾರ್ಯರಿಗೆ ಎಲ್ಲ ಬೇಡಿಕೆಗಳನ್ನು ಪಟ್ಟಿ ಮಾಡಿಕೊಂಡು ಬರಲು ಸೂಚನೆ ನೀಡಿದ್ದೇವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ತಕ್ಷಣಕ್ಕೆ ಆಗಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

    (ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)

    (ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ  https://www.facebook.com/chitradurganews?mibextid=ZbWKwL)

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top