ಚಳ್ಳಕೆರೆ
ಮೈಸೂರು ದಸರಾಕ್ಕೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲದ ಟ್ಯಾಬ್ಲೋ

ಚಿತ್ರದುರ್ಗ ನ್ಯೂಸ್.ಕಾಂ: ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಬಯಲು ಸೀಮೆ ಆರಾಧ್ಯ ದೈವ ಶ್ರೀಗುರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ದೇಗುಲ ಮಾದರಿ ಟ್ಯಾಬ್ಲೋ ಹೋಗುತ್ತಿದೆ.
ಮೈಸೂರು ಅಂಬಾರಿ ಜೊತೆಗೆ ನಾಯಕನಹಟ್ಟಿ ತಿಪ್ಪೇಶನ ತೇರು, ದೇಗುಲ, ಐಕ್ಯ ಮಂಟಪದ ಮಾದರಿಯನ್ನು ಟ್ಯಾಬ್ಲೋದಲ್ಲಿ ಬಿಂಬಿಸಿದ್ದು, ಇದರ ಮೆರವಣಿಗೆ ಹಗೂ ಪ್ರದರ್ಶನ ನಡೆಯಲಿದೆ.
ಈ ಮೂಲಕ ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆ ನಿಂತಿರುವ ಕಾಯಕ ಯೋಗಿ ತಿಪ್ಪೇರುದ್ರಸ್ವಾಮಿಯ ಪವಾಡಗಳು ಮೈಸೂರು ಸೀಮೆಯಲ್ಲಿ ಅನುರಣಿಸಲಿವೆ.
ಇದನ್ನೂ ಓದಿ: ಅಕ್ಟೋಬರ್ 24 ರಿಂದ 27ರವರೆಗೆ ಹಾರನಕಣಿವೆ ರಂಗಪ್ಪನ ಜಾತ್ರೆ
‘ಮಾಡಿದಷ್ಟು ನೀಡು ಭಿಕ್ಷೆ’ ಎನ್ನುವ ಮಹತ್ವದ ಸಂದೇಶ ಸಾರುವ ಮೂಲಕ ದುಡಿಮೆಯ ಪಾಠ ಹೇಳಿಕೊಟ್ಟಿರುವ ಶ್ರೀ ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿರುವ ಈ ಧ್ಯೇಯವಾಖ್ಯದ ಸಮೇತ ಟ್ಯಾಬ್ಲೋ ಸಾಗಲಿದೆ.
ದೇವಸ್ಥಾನದ ಮುಂಭಾಗದಲ್ಲಿರುವ ಒಳ ಮಠದ ರಾಜಗೋಪುರ, ತಿಪ್ಪೇರುದ್ರಸ್ವಾಮಿ ಐಕ್ಯವಾಗಿರುವ ಹೊರಮಠದ ಮಂಟಪ, ಹಟ್ಟಿ ತಿಪ್ಪೇಶನ ಎತ್ತರದ ಕಟೌಟ್ ಕೂಡಾ ಟ್ಯಾಬ್ಲೋದಲ್ಲಿರುತ್ತದೆ.
ನಾಯಕನಹಟ್ಟಿಯಲ್ಲಿ ನಡೆಯಲಿರುವ ವರ್ಷಾವಧಿ ಜಾತ್ರೆಗೆ ಮಧ್ಯ ಕರ್ನಾಟಕ, ಆಂದ್ರ, ತೆಲಂಗಾಣ ಸೇರಿದಂತೆ ನಾಡಿನ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಟ್ಯಾಬ್ಲೋ ಮಾದರಿ ಮೈಸೂರು ದಸರಾಕ್ಕೆ ಹೋಗುತ್ತಿರುವುದು ಎಲ್ಲ ಭಕ್ತರಿಗೂ ಹರ್ಷ ತಂದಿದೆ.
ಚಿತ್ರದುರ್ಗದ ಕಲಾವಿದ ಸಿ.ಕಣ್ಮೇಶ್ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಕಲಾವಿದರು, ವಿದ್ಯಾರ್ಥಿಗಳು ಕಳೆದ 15 ದಿನಗಳಿಂದ ಮೈಸೂರಿನಲ್ಲಿ ಟ್ಯಾಬ್ಲೋ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
