ಮುಖ್ಯ ಸುದ್ದಿ
National Highway: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಕ್ರಮ | ಎಫ್‌ಐಆರ್ ದಾಖಲಿಸಿ
CHITRADURGA NEWS | 29 JULY 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಹಾದುಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ-150ರಲ್ಲಿನ ರಸ್ತೆ ಅಡಚಣೆ, ಭೂಸ್ವಾಧೀನ ಪ್ರಕರಣ ಇತ್ಯರ್ಥಪಡಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ –150ರಲ್ಲಿನ ಭೂಸ್ವಾಧೀನ ಪ್ರಕರಣಗಳ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಜಮೀನನ್ನು ಅಕ್ರಮವಾಗಿ ಬೇರೆಯವರ ಹೆಸರಿನಲ್ಲಿ ಇ-ಸ್ವತ್ತು ಮಾಡಿ, ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ, ಭೂಸ್ವಾಧೀನದ ಪರಿಹಾರ ಮೊತ್ತವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ಪಾವತಿಸಿರುವ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಪೊರಕೆ ಕಡ್ಡಿ ವ್ಯಾಪಾರಿ ಮನೆಗೆ ಕನ್ನ | ಸಿಸಿಟಿವಿಯ ಡಿವಿಆರ್ ಕದ್ದೊಯ್ಯದ ಗ್ಯಾಂಗ್
ಕಂಪನಿಯವರು ರಸ್ತೆ ನಿರ್ಮಾಣಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಗ್ರಾವಲ್ ಮಣ್ಣು ಎತ್ತಿ, ಇದಕ್ಕೆ ಯಾವುದೇ ರಾಜಧನ ಪಾವತಿಸದೇ ಇರುವ ಬಗ್ಗೆಯೂ ದೂರುಗಳು ಬಂದಿವೆ. ಇವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರ ವಿರುದ್ಧ ನಿಯಮಾನುಸಾರ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಇದನ್ನೂ ಓದಿ:ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ
ರಾಷ್ಟ್ರೀಯ ಹೆದ್ದಾರಿ-150ರ ರಸ್ತೆ ಕಾಮಗಾರಿಯಲ್ಲಿನ ಭೂಸ್ವಾಧೀನ ಸಮಸ್ಯೆ, ರೈತರಿಗೆ ಪರಿಹಾರ ಸಮಸ್ಯೆ ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಸಮಗ್ರವಾಗಿ ಚರ್ಚೆ ಮಾಡಿ, ಶೀಘ್ರವಾಗಿ ಪರಿಹರಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಹಿರಿಯೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು, ಈ ಹಿಂದೆ ಇರುವ ರಸ್ತೆಯಲ್ಲಿ ಬಳ್ಳಾರಿ ಕಡೆಯಿಂದ ಬರುವ ವಾಹನಗಳು, ಹುಳಿಯಾರು ಕಡೆಯಿಂದ ಬರುವ ವಾಹನಗಳು ಕೆಲವು ಬೆಂಗಳೂರು ಹಾಗೂ ಚಿತ್ರದುರ್ಗ ಕಡೆಗೆ ಚಲಿಸುತ್ತವೆ, ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ-150ರ ರಸ್ತೆ ಕಾಮಗಾರಿಯು ನೇರವಾಗಿ ಮಾಡಲಾಗಿದ್ದು, ಇದರಿಂದಾಗಿ ವಾಹನ ಚಾಲನೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಹಿರಿಯೂರನ್ನು ಜಂಕ್ಷನ್ ಮಾಡಿಕೊಂಡು, ಬಟರ್ ಫ್ಲೈಡಿಸೈನ್ ಮೂಲಕ ಎರಡೂ ರಾಷ್ಟ್ರೀಯ ಹೆದ್ದಾರಿಗೆ ಸಾಗುವ ರಸ್ತೆಯನ್ನು ವಿಭಜಿಸಬೇಕು, ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಕೂಡಲೇ ಯೋಜನೆಯಲ್ಲಿ ಮರು ಸೇರ್ಪಡೆ ಮಾಡಿಕೊಂಡು ಹಿರಿಯೂರಿನಲ್ಲಿ ಬಟರ್ ಫ್ಲೈ ಡಿಸೈನ್ ಜಂಕ್ಷನ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ-150ರ ರಸ್ತೆ ಕಾಮಗಾರಿಯಲ್ಲಿನ ನ್ಯೂನತೆಯನ್ನು ಸರಿಪಡಿಸಬೇಕು ಹಾಗೂ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎರಡು ತಿಂಗಳೊಳಗೆ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ರಾಷ್ಟ್ರೀಯ ಹೆದ್ದಾರಿ-150ರ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ್ ಇದ್ದರು.