ಮುಖ್ಯ ಸುದ್ದಿ
ನಿಷೇಧಾಜ್ಞೆ ನಡುವೆ ಶೂನ್ಯಪೀಠಾರೋಹಣ ಕಾರ್ಯಕ್ರಮ

ಚಿತ್ರದುರ್ಗ ನ್ಯೂಸ್.ಕಾಂ: ಮುರುಘಾ ಮಠದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಸಮಾರೋಪ, ಶೂನ್ಯ ಪೀಠಾರೋಹಣ, ಧರ್ಮಗುರು ಬಸವಣ್ಣ, ಅಲ್ಲಮ ಪ್ರಭು ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು.
ರಾಜಾಂಗಣದ ಹೊರಭಾಗದಲ್ಲಿ ಜಯದೇವ ಜಂಗಿಕುಸ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಲ್ಲವೂ ಸಂಭ್ರಮದಿಂದ ನಡೆಯುವ ಕಾರ್ಯಕ್ರಮಗಳು. ಆದರೆ, ಶೂನ್ಯಪೀಠಾರೋಹಣ ನಡೆಯುವ ರಾಜಾಂಗಣದಲ್ಲಿ ಬೆಳಗ್ಗೆಯೇ ಬಿಗಿ ಪೊಲೀಸ್ ಬಂದೋಬಸ್ತ್ ನೋಡಿ ಮಠದ ಭಕ್ತರು ಒಂದು ಕ್ಷಣ ಅಚ್ಚರಿಗೊಳಗಾದರು.
ಎಸ್ ಜೆ ಎ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಮೇರೆಗೆ ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ ವ್ಯಾಪ್ತಿಯ ಮುರುಘಾ ಮಠದ ರಾಜಾಂಗಣಕ್ಕೆ ಸೀಮಿತವಾಗಿ ಸೆಕ್ಷನ್ 144 ಅನ್ಚಯ ನಿಷೇಧಾಜ್ಞೆ ಜಾರಿ ಮಾಡಿ ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣು ಆದೇಶ ಹೊರಡಿಸಿದ್ದಾರೆ.
ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಸಾವಿರಾರು ಜನ ಸೇರುವುದರಿಂದ ಘರ್ಷಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಅ.25 ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರವರೆಗೆ ನಿಷೇಧಾಜ್ಞೆ ವಿಧಿಸಿರುವ ಕಾರಣ ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ತಾಲೂಕು ಆಡಳಿತ ಹಾಗೂ ಮಠದ ಆಡಳಿತ ಮಂಡಳಿಯ ಈ ನಿರ್ಧಾರ ಭಕ್ತರ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
