ಕ್ರೈಂ ಸುದ್ದಿ
Police: ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯ ಕೊಲೆ | ಗುಂಡಿ ಹಳ್ಳದಲ್ಲಿ ಘಟನೆ | ತನಿಖೆಗೆ ಮುಂದಾದ ಪೊಲೀಸರು
CHITRADURGA NEWS | 15 NOVEMBER 2024
ಹೊಳಲ್ಕೆರೆ: ಹೊಳಲ್ಕೆರೆ ತಾಲೂಕು ಉಪ್ಪರಿಗೇನಹಳ್ಳಿ ಭಾಗದ ಜನತೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹಿಂದೆಂದೂ ಕೇಳಿರದಂತಹ ಘಟನೆಯೊಂದು ಇಲ್ಲಿ ಹಾದು ಹೋಗಿರುವ ಗುಂಡಿ ಹಳ್ಳದಲ್ಲಿ ನಡೆದು ಹೋಗಿದೆ.
ಹೊಳಲ್ಕೆರೆ ಮೂಲಕ ವಾಣಿವಿಲಾಸ ಸಾಗರ ಸೇರುವ ಗುಂಡಿಹಳ್ಳ ಈ ಬಾರಿಯ ಮಳೆಗೆ ಎರಡು ಬಾರಿ ತುಂಬಿ ಹರಿದಿದೆ. ಇನ್ನೂ ಸಣ್ಣ ಹರಿವು ಕಾಣಿಸುತ್ತಲೇ ಇದೆ. ಹಳ್ಳ ಹರಿದ ಸಂಭ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನ ಇರುವಾಗಲೇ, ಗುಂಡಿ ಹಳ್ಳ ಈಗ ಕರಾಳ ನೆನಪಾಗಿ ಕಾಡುವಂತಾಗಿದೆ.
ಇದನ್ನೂ ಓದಿ: ಸಮಾಜಶಾಸ್ತ್ರ ರಾಷ್ಟ್ರೀಯ ಸಮ್ಮೇಳನ | ಎಂಎಲ್ಸಿ ಕೆ.ಎಸ್.ನವೀನ್ ಚಾಲನೆ
ಹೌದು, ನ.14 ಗುರುವಾರ ಬೆಳಗ್ಗೆ ಗುಂಡಿಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ಉಪ್ಪರಿಗೇನಹಳ್ಳಿ ಗ್ರಾಮದ 40 ವರ್ಷದ ಮಹಿಳೆ ಲತಾ ಕೊಲೆಯಾಗಿದ್ದು, ಹೆಣವಾಗಿ ಪತ್ತೆಯಾಗಿದ್ದಾರೆ.
ಉಪ್ಪರಿಗೇನಹಳ್ಳಿ-ಗೂಳಿಹೊಸಹಳ್ಳಿ ನಡುವೆ ಗುಂಡಿಹಳ್ಳಕ್ಕೆ ನಿರ್ಮಿಸಿರುವ ಚೆಕ್‍ಡ್ಯಾಂ ಬಳಿ ಲತಾ ಹಳ್ಳದ ನೀರಿನಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ.
ಇದನ್ನೂ ಓದಿ: ವಾಣಿವಿಲಾಸ ಸಾಗರ ಕೋಡಿ ಬೀಳಲು 1.95 ಅಡಿ ಬಾಕಿ
ಅಕ್ಕ ಬಟ್ಟೆ ತೊಳೆಯುವ ಜಾಗಕ್ಕೆ ಆಕೆಯ ತಂಗಿ ಅಂಬುಜಾಕ್ಷಿ, ಮೈದುನ ಮನು ಹೋಗಿದ್ದಾರೆ. ತೊಳೆದ ಬಟ್ಟೆ ಜೊತೆಗೆ ಇಬ್ಬರನ್ನೂ ವಾಪಾಸು ಕಳಿಸಿರುವ ಲತಾ, ಉಳಿದ ಬಟ್ಟೆಗಳನ್ನು ತೊಳೆದುಕೊಂಡು ಬರುವುದಾಗಿ ತಿಳಿಸಿದ್ದಾರೆ.
ಇದಾದ ಕೆಲ ಹೊತ್ತಿನಲ್ಲೇ ಲತಾ ಕೊಲೆಯಾಗಿದ್ದು, ಕಿವಿಯಲ್ಲಿದ್ದ ಬಂಗಾರದ ಓಲೆ ಹಾಗೂ ಕೊರಳಲ್ಲಿದ್ದ ಸರ ಕಳ್ಳತನವಾಗಿದೆ. ಮೈಮೇಲಿನ ಬಟ್ಟೆಗಳು ಅಸ್ತವ್ಯಸ್ತವಾಗಿವೆ. ಆಭರಣ ಕಳ್ಳತನದ ಕಾರಣಕ್ಕೆ ಕೊಲೆಯಾಯಿತೆ ಎನ್ನುವ ಅನುಮಾನವೂ ಕಾಡುತ್ತಿದೆ.
ಇದನ್ನೂ ಓದಿ: ಮೈಸೂರು ಕಿಸಾನ್ ಮಾಲ್ ಸ್ಥಾಪನೆ | ರೈತ ಉತ್ಪಾದಕ ಸಂಸ್ಥೆಗಳಿಂದ ಅರ್ಜಿ
ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದು, ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ.
ಕೊಲೆ ನಡೆದ ಜಾಗಕ್ಕೆ ಜಿಲ್ಲಾ ಪೊಲೀಸ್(Police) ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಡಿವೈಎಸ್‍ಪಿ ದಿನಕರ್, ಚಿತ್ರಹಳ್ಳಿ ಠಾಣೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ: ಬಬ್ಬೂರಿನಲ್ಲಿ ಎರಡು ದಿನ ಕೃಷಿಮೇಳ