ಹೊಸದುರ್ಗ
ಮಠದ ಆವರಣದಲ್ಲಿ ಕರಡಿಯ ಸಂಚಾರ | ಸೆರೆ ಹಿಡಿಯಲು ಭಕ್ತರು, ಸಾರ್ವಜನಿಕರ ಆಗ್ರಹ
CHITRADURGA NEWS | 19 JANUARY 2024
ಹೊಸದುರ್ಗ: ಸಂಜೆಯಾಗುತ್ತಲೇ ಮಠದ ಆವರಣದಲ್ಲಿ ಕರಡಿಗಳ ವಾಕಿಂಗ್ ನೋಡಿ, ಮಠದ ಭಕ್ತರು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ಹೊಸದುರ್ಗ ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಕಳೆದ 6 ತಿಂಗಳಿಂದ ಸಾಮಾನ್ಯವಾಗಿ ಸಂಜೆಯಾಗುತ್ತಲೇ ಒಂದೂ, ಎರಡು ಕರಡಿಗಳು ಕಾಣಿಸಿಕೊಳ್ಳುತ್ತಿವೆ. ಮಠದ ಬಾಗಿಲಿನವರೆಗೆ ಬಂದು ಹೋಗಿರುವ ವಿಡಿಯೋಗಳು ವೈರಲ್ ಆಗಿವೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಜ.18 ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕರಡಿಯೊಂದು ಮಠದ ಮುಂದಿರುವ ಸಿ.ಸಿ.ರಸ್ತೆಯಲ್ಲಿ ಅಡ್ಡಾಡುತ್ತಾ ಬಂದು ಮಠದ ಮುಂದೆ, ಪಕ್ಕ ಹಾಗೂ ಹಿಂಬದಿಯಲ್ಲಿ ಓಡಾಡಿ ಮತ್ತೆ ಮರೆಯಾಗುವ ವಿಡಿಯೋವನ್ನು ಮಠದ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ನಗರಕ್ಕೆ ಹೊಂದಿಕೊಂಡಂತೆ ಇರುವ ಮಠದ ಆವರಣದಲ್ಲಿ ವಾಯು ವಿಹಾರಕ್ಕಾಗಿ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ನೂರಾರು ಜನ ಬರುತ್ತಾರೆ. ಇದರಲ್ಲಿ ವೃದ್ಧರು, ಮಕ್ಕಳು, ಮಹಿಳೆಯರು ಬರುತ್ತಿದ್ದು, ಕರಡಿಗಳನ್ನು ನೋಡಿ ಆತಂಕಗೊಂಡಿದ್ದಾರೆ.
ಸಂಜೆಯಾದ ನಂತರ ಮಠಕ್ಕೆ ಭಕ್ತರು ಬರಲು ಕೂಡಾ ಆತಂಕಪಡುವ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಜನವರಿ 23ಕ್ಕೆ ಚಿತ್ರದುರ್ಗ ಬಂದ್ ಕರೆ
ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹಲವು ಬಾರಿ ಕರಡಿಗಳನ್ನು ಹಿಡಿದು ಮುಂದೆ ಆಗುವ ಅಪಾಯವನ್ನು ತಡೆಯುವಂತೆ ಮನವಿ ಮಾಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಉದಾಸೀನ ತೋರುತ್ತಿದ್ದಾರೆ ಎಂದು ಭಕ್ತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕರಡಿ ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದ್ದು, ಜನವಸತಿ, ಮಠದ ಸಮೀಪದಲ್ಲೇ ಅಡ್ಡಾಡುವುದು ಆತಂಕದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದುರ್ಗದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆ ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಇಲ್ಲಿ ವಾಯುವಿಹಾರಕ್ಕೆ ಬರುವವರು ಒತ್ತಾಯಿಸಿದ್ದಾರೆ.